ದಿನದ ಸುದ್ದಿ
ಪಿ ಯು ಕಾಲೇಜು ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಿ : ಶಿಕ್ಷಣ ಇಲಾಖೆ ಅದೇಶ
ಸುದ್ದಿದಿನ ದಾವಣಗೆರೆ: ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಮತ್ತು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2020 ದಿನಾಂಕ 7.9. 2020 ರಿಂದ 16. 9. 2020 ರ ವರೆಗೆ ನಡೆಯಲಿರುವುದರಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೋವಿಡ್ ಕಾರ್ಯದಲ್ಲಿ ನಿಯೋಜಿತಗೊಂಡಿರುವ ಸಿಬ್ಬಂದಿಗಳು ಹೊರತಾಗಿ, ಎಲ್ಲಾ ಸಿಬ್ಬಂದಿಗಳು ಇಂದಿನಿಂದ ಕಾಲೇಜಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ.
ಎಸ್ ಎಸ್ ಎಲ್ ಸಿ ಫಲಿತಾಂಶ ಈಗಾಗಲೇ ಪ್ರಕಟಗೊಂಡಿರುವುದರಿಂದ ಪ್ರಥಮ ಪಿಯು ತರಗತಿಗಳನ್ನು ಪ್ರಾರಂಭಿಸುವುದಕ್ಕಿಂತ ಮುಂಚಿತವಾಗಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಆರಂಭಿಸಬೇಕಿದೆ.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಸುವ ಸಂಬಂಧ ಕಾಲೇಜುಗಳಲ್ಲಿ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿರುವುದರಿಂದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುವುದನ್ನು ಮಾತ್ರ ಬಿಟ್ಟು, ಉಳಿದೆಲ್ಲಾ ದಾಖಲಾತಿಯನ್ನೊಳಗೊಂಡಂತೆ ಪೂರಕವಾದ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ದಿನಾಂಕ 13-08-2020ರಿಂದ ಕಾಲೇಜಿಗೆ ಹಾಜರಾಗಲು ಸೂಚಿಸಿದೆ.
ಕಾಲೇಜಿಗೆ ಹಾಜರಾಗುವ ಸಂದರ್ಭದಲ್ಲಿ ಕೋವಿಡ್-19ರ ಹಿನ್ನಲೆಯಲ್ಲಿ ಸಾಮಾಜಿಕ ಅಂತರವನ್ನೊಳಗೊಂಡಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆಯೂ ಅದೇಶಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243