ದಿನದ ಸುದ್ದಿ

ದ್ವಿತೀಯ ಪಿ.ಯು.ಸಿ ಗಣಿತ 100 ಕ್ಕೆ 100 ಸಂಭ್ರಮಿಸಲು ಅವಳೇ ಇಲ್ಲ.. !

Published

on

ವಿಧಿಯಾಟವೂ ಕೆಲವು ಬಾರಿ ಅತಿ ಕ್ರೂರವಾಗಿರುತ್ತದೆ. (ದಾವಣಗೆರೆ) ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ಫಲಿತಾಂಶದ ಸಂಭ್ರಮದಲ್ಲಿ ಸಂಕಟದ ಛಾಯೆ ಕರಳು ಹಿಂಡುತ್ತಿದೆ. ನಮ್ಮ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಅನುಷ. ಬಿ ಹಾಸ್ಟೆಲ್‌ನಲ್ಲಿದು ಕೊಂಡು ಅಭ್ಯಾಸ ಮಾಡುತ್ತಿದ್ದಳು. ಬಹಳ ಮೃದು ಸ್ವಭಾವದ ಹುಡುಗಿ. ಯಾರೊಡನೆಯೂ ಹೆಚ್ಚು ಮಾತಿಲ್ಲ. ತಾನಾಯಿತು.. ತನ್ನ ಓದಾಯಿತು ಎಂಬಂತೆ ಇದ್ದಳು. ಎಲ್ಲಾ ಟೆಸ್ಟ್ ಮತ್ತು ಪೂರ್ವಭಾವಿ ಪರೀಕ್ಷೆಗಳಲ್ಲಿ 90 ಕ್ಕಿಂತ ಹೆಚ್ಚು ಅಂಕ ಪಡೆಯುತ್ತಿದ್ದಳು.

ಮಾರ್ಚ್ ಪರೀಕ್ಷೆಯಲ್ಲಿ 5 ವಿಷಯಗಳಿಗೆ ಹಾಜರಾದಳು. ಇಂಗ್ಲೀಷ್ ಪರೀಕ್ಷೆ ಲಾಕ್‌ಡೌನ್ ಪ್ರಯುಕ್ತ ನಡೆಯಲಿಲ್ಲ. ಹಾಸ್ಟೆಲ್ ಮಕ್ಕಳು ಅವರವರ ಊರಿಗೆ ಹೊರಟರು. ಅನುಷಾ ತನ್ನ ಊರಾದ ಚನ್ನಗಿರಿಯ ತಾಳಿಕಟ್ಟೆಗೆ ತೆರಳಿದಳು.

ಏಪ್ರಿಲ್ ತಿಂಗಳಲ್ಲಿ ಅನುಷಾಳ ಆರೋಗ್ಯದಲ್ಲಿ ಏರುಪೇರಾಯಿತು. ರೈತಾಪಿ ಕುಟುಂಬದ ಬಸವರಾಜಪ್ಪ ಮತ್ತು ಮಂಜಮ್ಮ ದಂಪತಿಗಳು ಕಂಗಾಲಾದರು. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ತೋರಿಸಿದರು. ಎಲ್ಲ ಪರೀಕ್ಷೆ ನಡೆಸಿದ ವೈದ್ಯರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದರು. ವಿವಿಧ ಪರೀಕ್ಷೆಗಳ ನಂತರ ಅನುಷಾಗೆ “ಬ್ಲಡ್ ಕ್ಯಾನ್ಸರ್” ಎಂದು ಪತ್ತೆಯಾಯಿತು.

ಚಿಕಿತ್ಸೆಯ ನಡುವೆಯೂ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಸಿದ್ಧಗಂಗಾ ಯೂಟ್ಯೂಬ್ ಚಾನಲ್ ಮೂಲಕ ಕಳಿಸುತ್ತಿದ್ದ ಆನ್‌ಲೈನ್ ತರಗತಿಗಳನ್ನು ಬಿಡದೆ ವೀಕ್ಷಿಸುತ್ತಿದ್ದಳು. ಡೈರೆಕ್ಟರ್ ಡಾ. ಜಯಂತ್‌ರವರೊಡನೆ ಪೋನ್ ಸಂಪರ್ಕದಲ್ಲಿದ್ದಳು. ಅವರೂ ಸಾಕಷ್ಟು ಧೈರ್ಯ ತುಂಬಿದ್ದಾರೆ. ಪರೀಕ್ಷೆ ಬರೆಯುವ ಅದಮ್ಯ ಆಸೆ ಅವಳಲ್ಲಿತ್ತು. ನೀಟ್ ಪರೀಕ್ಷೆಗೂ ಸಿದ್ಧವಾಗುತ್ತಿದ್ದಳು. ಆರೋಗ್ಯವೂ ಚೇತರಿಸಿತ್ತು.
ಇಂಗ್ಲೀಷ್ ಪರೀಕ್ಷೆ ಜೂನ್ 18 ಕ್ಕೆ ನಿಗದಿಯಾಯಿತು.

ಪರೀಕ್ಷೆಯ ಮುನ್ನಾದಿನ ಅನುಷಾ ಅಸು ನೀಗಿದಳು. ಗೆಳೆಯ ಗೆಳತಿಯರ ದುಃಖ ಹೇಳತೀರದು. ಬೋಧಕ ವರ್ಗದವರು ದಿಗ್ಭ್ರಾಂತರಾದರು. ನಮ್ಮ ನಡುವಿನ ಸುಂದರ ಮೊಗ್ಗು ಅರಳುವ ಮುನ್ನವೇ ನೆಲಕ್ಕುರುಳಿತು.
ಬರೆದಿರುವ ವಿಷಯಗಳಲ್ಲಿ ಅವಳು ಪಡೆದಿರುವ ಅಂಕಗಳನ್ನು ನೋಡಿದಾಗ ಸಂಭ್ರಮದಲ್ಲೂ ಸಂಕಟ ಸಹಿಸದಾಯಿತು. ಕನ್ನಡ 92, ಭೌತಶಾಸ್ತ್ರ 91, ರಸಾಯನಶಾಸ್ತ್ರ89 , ಗಣಿತ 100, ಜೀವಶಾಸ್ತ್ರ 95. ವೈದ್ಯಳಾಗುವ ಕನಸು ಕಾಣುತ್ತಿದ್ದ ಅನುಷಾಳ ಕನಸು ಅರ್ಧದಲ್ಲೇ ಮುರುಟಿಹೋಯಿತು. ಹೆತ್ತವರ ಒಡಲಿಗೆ ಕೊಳ್ಳಿ ಇಟ್ಟಂತಾಯಿತು.

ಬಾರದ ಮಗಳಿಗಾಗಿ ನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ತಂದೆ -ತಾಯಿಯವರನ್ನು ಸಮಾಧಾನಿಸುವ ಯಾವ ಶಬ್ಧಗಳೂ ನಮ್ಮಲ್ಲಿಲ್ಲ. ಬೆಳೆಯುತ್ತಿದ್ದ ಸಿರಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕಿದ ವಿಧಿಯ ಅಟ್ಟಹಾಸಕ್ಕೆ ಎಲ್ಲರೂ ತಲೆಬಾಗಬೇಕು. ಅನುಷಾಳ ಆತ್ಮಕ್ಕೆ ಶಾಂತಿ ಸಿಗಲಿ. ತಂದೆ-ತಾಯಿಗಳ ದುಃಖ ಶಮನವಾಗಲಿ ಎಂದು ಎಲ್ಲರ ಪರವಾಗಿ ಆಶಿಸುತ್ತೇನೆ.

ಜಸ್ಟಿನ್ ಡಿ’ಸೌಜ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version