ದಿನದ ಸುದ್ದಿ

ರೈಲ್ವೆ ಮಂಡಳಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಸೂಕ್ತ ಕ್ರಮ

Published

on

ಸುದ್ದಿದಿನಡೆಸ್ಕ್:ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ರೈಲು ಯಾದಗಿರಿ ನಿಲ್ದಾಣದಲ್ಲಿ ನಿಲುಗಡೆಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ವರ್ಚುವಲ್ ಮೂಲಕ ಬೆಂಗಳೂರಿನಲ್ಲಿ ನಿನ್ನೆ ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಳಿಕ ವಿ. ಸೋಮಣ್ಣ ಮಾತನಾಡಿ, ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ರೈಲ್ವೆ ನೇಮಕಾತಿ ಮಂಡಳಿಯಿಂದ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುತ್ತದೆ. ಅಲ್ಲದೇ, ಇತ್ತೀಚೆಗೆ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶವಿಲ್ಲದೇ ಇರುವುದರಿಂದ ಇದರ ಬಗ್ಗೆ ತಕ್ಷಣವೇ ಗಮನಹರಿಸುವಂತೆ ರೈಲ್ವೆ ಮಂಡಳಿ ಪ್ರಧಾನ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ.

ಇಲಾಖೆಯಲ್ಲಿ ಬಡ್ತಿ ನೀಡಲು ನಡೆಸುವ ಸಾಮಾನ್ಯ ವಿಭಾಗ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವಂತೆ ಒತ್ತಾಯ ಬಂದಿರುವುದರಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು. ಪ್ರಯಾಣಿಕರನ್ನು ಗಮನದಲ್ಲಿ ಇಟ್ಟುಕೊಂಡು ಪ್ರಯಾಣಿಕರ ರೈಲಿಗೆ ಸಾಮಾನ್ಯ ಬೋಗಿಗಳನ್ನು ಹೆಚ್ಚಿಸಲಾಗುವುದು .ಬೆಂಗಳೂರು ಉಪನಗರ ರೈಲು ಯೋಜನೆಯು ನಿಧಾನಗತಿಯಲ್ಲಿ ಸಾಗಿದ್ದು, ತ್ವರಿತಗೊಳಿಸಲು ಒಂದು ತಿಂಗಳೊಳಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು. ರೈಲು ನಿಲ್ದಾಣಗಳಲ್ಲಿ ರೈಲು ಪ್ರಮಾಣಕ್ಕೆ ಅನುಗುಣವಾಗಿ ಫ್ಲಾಟ್ ಫಾರ್ಮ್ ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಶರಣಗೌಡ ಕಂದಕೂರ್, ವಂದೇ ಭಾರತ್ ರೈಲು ನಿಲುಗಡೆಗೆ ಯಾದಗಿರಿಯಲ್ಲಿ ಅವಕಾಶ ನೀಡಿರುವುದರಿಂದ ರಾಜ್ಯದ ಪ್ರಯಾಣಿಕರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version