ದಿನದ ಸುದ್ದಿ

ಮಳೆ ಭಾದಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಚರಣೆ ಚುರುಕು : ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ

Published

on

ಸುದ್ದಿದಿನ ಡೆಸ್ಕ್ : ಮಳೆ ಭಾದಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಚರಣೆ ಚುರುಕುಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮಳೆ ಹಾನಿ ಜಿಲ್ಲೆಗಳಿಗೆ ಭೇಟಿ ನೀಡುವ ಮುನ್ನ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಎನ್‌ಡಿಆರ್‌ಎಫ್‌ನಲ್ಲಿ ಯೋಜನೆಯಡಿ 739 ಕೋಟಿ ರೂಪಾಯಿ ಹಣ ಲಭ್ಯವಿದೆ ಎಂದರು.

ಪ್ರವಾಹದಿಂದ ಪದೇ ಪದೇ ತೊಂದರೆಗೆ ಒಳಗಾಗುವ ನದಿಪಾತ್ರದ ಗ್ರಾಮಗಳನ್ನು ಸ್ಥಳಾಂತರಿಸುವ ಬಗ್ಗೆ ತಜ್ಞರಿಂದ ವರದಿ ಪಡೆದು ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಬಳಿಕ ಮಡಿಕೇರಿಯಲ್ಲಿ ಮಳೆ ಹಾನಿ ಕುರಿತ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು ಪದೇ ಪದೇ ಭೂಕುಸಿತ ಮತ್ತು ಭೂಕಂಪ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಇದರ ಅಧ್ಯಾಯನಕ್ಕಾಗಿ ಕೇಂದ್ರ ಅಧ್ಯಾಯನ ತಂಡವನ್ನು ಕೊಡಗು ಜಿಲ್ಲೆಗೆ ಕಳುಹಿಸಲಾಗುವುದು. ಕಳೆದ ಬಾರಿ ನೆರೆ ಸಂದರ್ಭದಲ್ಲಿ ಸರ್ಕಾರ ಜನರಿಗೆ ಮನೆ ಕಟ್ಟಿ ಕೊಡುವ ಭರವಸೆ ನೀಡಿತ್ತು. ಈಗ ಅಪೂರ್ಣವಾಗಿರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸಿ ಜನರಿಗೆ ವಿತರಿಸಲಾಗುವುದು ಎಂದರು.

ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ತಾಲ್ಲೂಕಿನ ವಿವಿಧ ಪ್ರದೇಶಗಳಿಗೆ ಜಿಲ್ಲಾಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರು. ಪೂರ್ತಿ ಮನೆ ಕಳೆದುಕೊಂಡವರಿಗೆ ಸರ್ಕಾರದ ವತಿಯಿಂದ ೫ ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಜೀವನಾಡಿ ತುಂಗಭದ್ರ ಜಲಾಶಯ ಭರ್ತಿಯಾಗಿದ್ದು, ಇಂದು ಜಲಾಶಯದ ಮೂರು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ. ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ತಲಕಾಡಿನ ಕಾವೇರಿ ನಿಸರ್ಗ ಧಾಮಕ್ಕೆ ಪ್ರವಾಸಿಗರ ನಿರ್ಬಂಧ ವಿಧಿಸಲಾಗಿದೆ. ವಿಜಯಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ್ ಭೇಟಿ ನೀಡಿ ಹಾನಿ ಅಂದಾಜು ನಡೆಸಿದರು.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣ ಪುರ ಗ್ರಾಮದ ಬಸವ ಸಾಗರ ಜಲಾಶಯ ಭರ್ತಿಯಾಗಿದ್ದು, 14 ಕ್ರಸ್ಟ್‌ಗೇಟ್‌ಗಳ ಮೂಲಕ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ನದಿ ಪಾತ್ರದಲ್ಲಿರುವ ಜನರು ಎಚ್ಚರಿಕೆಯಿಂದ ಇರಬೇಕು. ಜಾನುವಾರುಗಳನ್ನು ನದಿಯತ್ತ ಹೋಗದಂತೆ ನೋಡಿಕೊಳ್ಳಬೇಕೆಂದು ಜಲಾಶಯದ ಪ್ರಭಾರಿ ಅಣೆಕಟ್ಟು ವಿಭಾಗಾಧಿಕಾರಿ ಪ್ರಕಾಶ್ ಮುದಗಲ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version