ದಿನದ ಸುದ್ದಿ
ಶಾಲೆಗಳಿಗೆ ರಜೆ ಘೋಷಣೆ
ಸುದ್ದಿದಿನಡೆಸ್ಕ್:ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಬೆಳಗ್ಗಿನಿಂದಲೇ ಭಾರೀ ಮಳೆಯಾಗುತ್ತಿದ್ದು, ಸತತ ಮಳೆಯ ಕಾರಣದಿಂದಾಗಿ ಜಿಲ್ಲೆಯ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಎಲ್ಲಾ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿತ್ತು.
ಗ್ರಾಮೀಣ ಭಾಗದ ಮಕ್ಕಳು, ನದಿ, ಹಳ್ಳ ದಾಟಿ ಶಾಲೆಗೆ ಬರಬೇಕಾದ ಕಾರಣ ಮುಂಜಾಗೃತಾ ಕ್ರಮವಾಗಿ ರಜೆ ಘೋಷಿಸಿರುವುದಾಗಿ ಬೆಳ್ತಂಗಡಿ ತಾಲೂಕಿನ ತಹಶಿಲ್ದಾರ್ ತಿಳಿಸಿದ್ದಾರೆ. ಈ ಎರಡು ತಾಲೂಕುಗಳ ಎಲ್ಲಾ ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನೆನ್ನೆಯಿಂದ ಭಾರಿ ಮಳೆಯಾಗುತ್ತಿದೆ. ಜಿಲ್ಲೆಯ ಕುದುರೆಮುಖ, ಕಳಸ, ಬಾಳೆಹೊನ್ನೂರು, ಕೊಟ್ಟಿಗೆಹಾರ, ಚಿಕ್ಕಮಗಳೂರು ಸೇರಿ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ತುಂಗ, ಭದ್ರಾ ಮತ್ತು ಹೇಮಾವತಿ ನದಿ ನೀರಿನ ಒಳ ಹರಿವು ಹೆಚ್ಚುತ್ತಿದ್ದು ಕಳಸ ಹೊರನಾಡು ಸಂಪರ್ಕಿಸುವ ಹೆಬ್ಬಾಲೆ ಸೇತುವೆ ಇಂದು ಮುಳುಗುವ ಹಂತಕ್ಕೆ ತಲುಪಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ವ್ಯಾನ್ ಮೇಲೆ ಮರಬಿದ್ದ ಪರಿಣಾಮ ಕೆಲಕಾಲ ಆಗುಂಬೆ-ಘಾಟಿ ರಸ್ತೆ ಸಂಚಾರ ಬಂದ್ ಆಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243