ದಿನದ ಸುದ್ದಿ
ವೈದ್ಯಕೀಯ ಕ್ಷೇತ್ರದಲ್ಲಿ ರಾಜೀವ್ ಗಾಂಧೀ ವಿವಿ ಸಾಧನೆ ಅವಿಸ್ಮರಣೀಯ : ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
ಸುದ್ದಿದಿನ,ನವದೆಹಲಿ/ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ದೇಶದಲ್ಲೇ ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಾಧನೆ ಅವಿಸ್ಮರಣೀಯ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದರು.
ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಸ್ಥಾಪನ ದಿನಾಚರಣೆ ಮತ್ತು ರಜತ ಮಹೋತ್ಸವ ಕಾರ್ಯವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವನ್ನೇ ಆವರಿಸಿಕೊಂಡಿರುವ ಹೆಮ್ಮಾರಿ ಕೋವಿಡ್-19 ವೈರಾಣು ನಿಯಂತ್ರಣದಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಸಿದರು. RGUHS ವಿಶ್ವವಿದ್ಯಾಲಯದ ದೇಶದಲ್ಲೇ ಅತ್ಯುತ್ತಮ ಆರೋಗ್ಯ ವಿವಿಯಾಗಿದ್ದು ಗುಣಮಟ್ಟದ ಸಂಶೋಧನೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಸಾಧನೆ ಮಾಡಿದ ವಿವಿ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.
ಕಳೆದ ಆರು ವರ್ಷಗಳಲ್ಲಿ ದೇಶದ ಆರೋಗ್ಯ ಮತ್ತು ವೈದ್ಯಕೀಯ ಸೇವೆಯಲ್ಲಿ ಅತ್ಯಂತ ಹೆಚ್ಚು ಅಭಿವೃದ್ಧಿ ಸಾಧಿಸಿದ್ದೇವೆ. ವರ್ಷಕ್ಕೆ 30 ಸಾವಿರ ಎಂಬಿಬಿಎಸ್ ಪದವಿ ಪಡೆದು ಆರೋಗ್ಯ ಸೇವೆಗೆ ವೈದ್ಯರು ಸನ್ನದ್ಧರಾಗುತ್ತಿದ್ದಾರೆ. 15 ಸಾವಿರ ಎಂಬಿಬಿಎಸ್ ಸ್ನಾತಕೋತ್ತರ ಪದವಿ ಪಡೆದ ವೈದ್ಯರ ಸೇವೆಗೆ ಸಿದ್ಧರಾಗಿ ಹೊರಬರುತ್ತಿರುವುದು ಸಣ್ಣ ವಿಷಯವಲ್ಲ. ಇದರಿಂದ ದೇಶದ ಜನರಿಗೆ ಅತ್ಯುತ್ತಮ ಗುಣಮಟ್ಟದ ಸೇವೆ ಸಿಗುತ್ತಿದೆ ಎಂದು ಪ್ರಧಾನಿ ವೈದ್ಯರ, ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಯನ್ನು ಕೊಂಡಾಡಿದರು.
ಇಡೀ ವಿಶ್ವವೇ ಇಂದು ಕೊರೋನಾ ಹೆಮ್ಮಾರಿಯ ವಿರುದ್ಧ ಹೋರಾಟಕ್ಕೆ ನಿಂತಿದೆ. ವಿಶ್ವ ಎರಡು ಮಹಾಯುದ್ಧಗಳ ನಂತರ ಜನರ ಬದುಕು ಮತ್ತು ಜೀವನ ಶೈಲಿ ಬದಲಾವಣೆಯನ್ನು ನಾವೆಲ್ಲರೂ ನೋಡಿದ್ದೆವು. ಈಗ ಮಹಾ ಯುದ್ಧಗಳ ನಂತರ ಕೊರೋನಾ ಎಂಬ ವೈರಾಣು ಯುದ್ಧದ ವಾತಾವರಣವನ್ನೇ ಸೃಷ್ಟಿಸಿದೆ. ನಾವು ನಮ್ಮ ಬದುಕಿನ ಹೇಗಿರಬೇಕು ಮತ್ತು ಜೀವನ ಶೈಲಿಯನ್ನು ಹೇಗೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ತೋರಿಸಿಕೊಟ್ಟಿದೆ ಎಂದು ಹೇಳಿದರು.
ಇಂತಹ ಸಂದಿಗ್ಧ ಸಮಯದಲ್ಲಿ ವಿಶ್ವದ ಜನರು ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಅವಲಂಬಿಸಿದ್ದಾರೆ. ಕೊರೋನಾ ವಿರುದ್ಧ ಚಿಕಿತ್ಸೆ ನೀಡಲು ಮುಂದಾಗಿರುವ ವೈದ್ಯರು ಸೇರಿದಂತೆ ಇಡೀ ವೈದ್ಯಕೀಯ ಸಮುದಾಯ ಸೈನಿಕರಂತೆ ಹೋರಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ಮಾತನಾಡಿದರು.
ಕೋವಿಡ್-19 ನಮಗೆ ಕಾಣದೇ ಇರುವ ಅಗೋಚರ ಶತ್ರು. ಅದರ ವಿರುದ್ಧ ಹೋರಾಡಲು ವಿಶ್ವವೇ ಒಂದಾಗುತ್ತಿದೆ. ಅಗೊಚರ ಶತ್ರು ವಿರುದ್ಧ ನಮ್ಮ ವೈದ್ಯರು ಹೋರಾಟದಲ್ಲಿ ಯಶಸ್ವಿಯಾಗುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಮೋದಿ ಭರವಸೆಯ ಮಾತುಗಳನ್ನಾಡಿದರು.
ಕೊರೋನಾ ಬರುವುದಕ್ಕೂ ಮೊದಲು ಇಡೀ ವಿಶ್ವದ ದೇಶದ ಮುಖಂಡರು ಆರ್ಥಿಕ ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದರು. ಆದರೆ ಈಗ ವಿಶ್ವದ ಎಲ್ಲಾ ನಾಯಕರು ಮಾನವೀಯ ನೆಲೆಗಟ್ಟಿನ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಕೊರೋನಾ ವಿರುದ್ಧ ಹೋರಾಡಲು ನಾಲ್ಕು ಕಂಬಗಳನ್ನು ರಚಿಸಿಕೊಳ್ಳಬೇಕು. ಮೊದಲನೆಯದಾಗಿ ರೋಗಬರುವುದಕ್ಕೂ ಜಾಗೃತಿಯಿಂದ ಇರಬೇಕು.
ಯೋಗ, ಆಯುರ್ವೇದ ಮತ್ತು ಫಿಟ್ನೆಸ್ಗೆ ಹೆಚ್ಚು ಒತ್ತುಕೊಡಬೇಕು. ಸ್ವಚ್ಛಭಾರತ ಮಿಷನ್ ಅಡಿ ರೋಗ ನಿಯಂತ್ರಣ ವಿಧಾನಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳ ಮೂಲಕ ಅತಿ ಹೆಚ್ಚು ಆವಿಷ್ಕರ ಮಾಡಿ ಜನರನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವೈದಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡುವ ಮೂಲಕ ಸಂಶೋನೆಗೆ ಹೆಚ್ಚು ಒತ್ತುನೀಡುತ್ತಿದ್ದೇವೆ.
ಕಳೆದ ಐದು ವರ್ಷಗಳಲ್ಲಿ 30 ಸಾವಿರ ಎಂಬಿಬಿಎಸ್ ಪದವಿ ಪಡೆದ ವೈದ್ಯರು ಮತ್ತು15 ಸಾವಿರ ಸ್ನಾತಕೋತ್ತರ ಪದವಿ ಪಡೆದ ವೈದ್ಯರು ಹೊರಬರುತ್ತರುವುದು ಸ್ವಾತಂತ್ರ್ಯ ನಂತರದಲ್ಲಿ ವೈದ್ಯಕೀಯ ಕ್ಷೇತ್ರದಲ್ಲೇ ಇದು ದೊಡ್ಡ ಸಾಧನೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರಲು ಮೆಡಿಕಲ್ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.
ಕಾಯ್ದೆಯ ದೂರ ದೃಷ್ಟಿಯ ಪರಿಣಾಮ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದೇವೆ. ಅಂತರಾಷ್ಟ್ರೀಯ ಗುಣಮಟ್ಟದ ವೈದ್ಯಕೀಯ ಸೇವೆಗಳು ಜನರಿಗೆ ದೊರೆಯಲಿವೆ. ನ್ಯೂಟ್ರಿಷಿಯನ್ ಮಿಷನ್ ಮೂಲಕ ಯುವಜನರ ಬಲಿಷ್ಠವಾದ ಆರೋಗ್ಯ ನೀಡುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. 2025ರ ಒಳಗೆ ಟಿಬಿ ಕಾಯಿಲೆ ಮುಕ್ತ ಭಾರತ ಗುರಿ ಹಾಕಿಕೊಂಡಿದ್ದೇವೆ. ಇಂದ್ರ ಧನುಷ್ ಯೋಜನೆ ಮೂಲಕ ಗುಣಮಟ್ಟದ ಔಷಧಿಗಳ ಸಂಶೋದನೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಟೆಲಿಮೆಡಿಸನ್ ಮೂಲಕ ಜನರಿಗೆ ಬೇಗನೇ ಔಷಧಗಳ ಸಿಗುವಂತಾಗಲು ಯೋಜನೆ ರೂಪಿಸಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಸ್ಥಳೀಯವಾಗಿ ವೈದ್ಯಕೀಯ ಉಪಕರಣಗಳು, ಪಿಪಿಇ ಕಿಟ್ ಉತ್ಪಾದನೆ ಗುರಿ ಹಾಕಿಕೊಂಡಿದ್ದೇವೆ. ಈಗಾಗಲೇ ಈ ಪ್ರಯತ್ನದ ಮೂಲಕ ಸ್ವಾ ಅವಲಂಬನೆ ಸಾಧಿಸಿದ್ದೇವೆ. ಒಂದು ಕೋಟಿ ಪಿಪಿಇ ಕಿಟ್ ಗಳು ಮತ್ತು ಎನ್-95 ಮಾಸ್ಕ್ ಗಳನ್ನು ಉತ್ಪಾದನೆಯಾಗಿ ಕೊರೋನಾ ವಾರಿಯರ್ಸ್ ಬಳಸುತ್ತಿರುವುದು ವೈದ್ಯಕೀಯ ಕ್ಷೇತ್ರದ ಸ್ವಾವಲಂಬನೆ ಸಾಕ್ಷಿ ಎಂದರು.
ಆರೋಗ್ಯ ಸೇತು ಆ್ಯಪ್ ತಂತ್ರಜ್ಞಾನದ ಮೂಲಕ ಜನರು ಕೊರೋನಾ ವಿರುದ್ಧ ಜಾಗೃತರಾಗುತ್ತರುವುದು ಆರೋಗ್ಯ ಕಾಳಜಿ ಮತ್ತೊಂದು ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಮಹತ್ವದ ಬದಲಾವಣೆಗೆ ಮುನ್ನುಡಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೋನಾ ವಾರಿಯರ್ಸ್ ಗಳಾದ ವೈದ್ಯರು, ದಾದಿಯರು ಸೇರಿದಂತೆ ಯಾರ ಮೇಲೂ ದೌರ್ಜನ್ಯ ಸಹಿಸುವುದಿಲ್ಲ. ಇವರೆಲ್ಲರಿಗೂ 50 ಲಕ್ಷದ ವರೆಗೂ ವಿಮಾ ಸೌಲಭ್ಯ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನಗಳ ವಿವಿಯ 25ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೇರಿಂದಂತೆ ಅನೇಕಲ ಸಚಿವರು, ಅಧಿಕಾರಿಗಳು ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243