ರಾಜಕೀಯ

ರಾಜ್ಯ ಸಭೆ | ಕಾಂಗ್ರೆಸ್ ನಿಂದ ಖರ್ಗೆ, ಜೆಡಿಎಸ್ ನಿಂದ ದೇವೇಗೌಡ, ಬಿಜೆಪಿಯಿಂದ ಈರಣ್ಣ ಕಡಾಡಿ, ಅಶೋಕ ಗಸ್ತಿ ಅವಿರೋಧ ಆಯ್ಕೆ

Published

on

ಸುದ್ದಿದಿನ,ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಬೇಕಿದ್ದ ನಾಲ್ಕು ಸ್ಥಾನಗಳು ಅವಿರೋಧ ಆಯ್ಕೆ ಆಗಿವೆ.

ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ನಿಂದ ಎಚ್.ಡಿ.ದೇವೇಗೌಡ, ಬಿಜೆಪಿಯಿಂದ ಈರಣ್ಣ ಕಡಾಡಿ, ಅಶೋಕ ಗಸ್ತಿ ನಾಮಪತ್ರ ಸಲ್ಲಿಸಿದ್ದರು. ನಾಲ್ಕು ಸ್ಥಾನಗಳಿಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿತ್ತು. ಆಯ್ಕೆ ಬಯಸಿ ನಾಲ್ವರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣೆ ನಡೆಯದೆ ಅವಿರೋಧ ಆಯ್ಕೆ ಘೋಷಣೆ ಮಾಡಲಾಗಿದೆ.

ಇದರಲ್ಲಿ ದೇವೇಗೌಡ ಎರಡನೇ ಬಾರಿ (23 September 1996 – 09 April 1998)  ರಾಜ್ಯಸಭೆ ಪ್ರವೇಶಿಸುತ್ತಿದ್ದರೆ, 7 ಬಾರಿ ಲೋಕಸಭಾ ಸದಸ್ಯರಾಗಿದ್ದ ಖರ್ಗೆಗೆ ರಾಜ್ಯಸಭೆ ಮೊದನೆ ಬಾರಿ. ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಇಬ್ಬರಿಗೂ ಸಂಸತ್ ಮೊದಲ ಬಾರಿಯಾಗಿದೆ.

ಜೂನ್ ತಿಂಗಳಲ್ಲಿ ಬಿಜೆಪಿಯ ಪ್ರಭಾಕರ ಕೋರೆ, ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್, ರಾಜೀವ್ ಗೌಡ ಮತ್ತು ಜೆಡಿಎಸ್ ನ ಕುಪೇಂದ್ರರೆಡ್ಡಿ ಅವರಿಂದ ತೆರವಾಗಲಿರುವ ನಾಲ್ಕು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯಬೇಕಿತ್ತು.

ಓರ್ವ ಅಭ್ಯರ್ಥಿ ಗೆಲ್ಲಲು 48 ಪ್ರಥಮ ಪ್ರಾಶಸ್ತ್ಯ ಮತಗಳು ಬೇಕಿದ್ದು, 117 ಬಿಜೆಪಿ ಮತ್ತು 3 ಪಕ್ಷೇತರ ಸೇರಿ 120  ಶಾಸಕರ ಬೆಂಬಲದಿಂದ  ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದು. ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಇನ್ನೂ 24 ಮತಗಳ ಕೊರತೆ ಇದೆ.

ಆ ಕೊರತೆಯನ್ನು ಜೆಡಿಎಸ್ ಶಾಸಕರಿಂದ ತುಂಬುವ ಯೋಚನೆ ಮಾಡಿತ್ತಾದರೂ ಕಾಂಗ್ರೆಸ್  ದೇವೇಗೌಡರ ಸ್ಪರ್ಧೆಗೆ ಸಹಕರಿಸುವ ಮಾಹಿತಿ ಇದ್ದುದರಿಂದ ಪ್ರಬಲ ಒಕ್ಕಲಿಗ ಜನಾಂಗದ ನಾಯಕ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದು, ಈ ವಿಚಾರದಲ್ಲಿ ರಾಜಕೀಯ ಮಾಡಿದರೆ ಒಕ್ಕಲಿಗ  ಸಮುದಾಯವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಈಗ ಮೂರನೇ ಅಭ್ಯರ್ಥಿ ಹಾಕದೆ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ನಾವು ಸಹಾಯ ಮಾಡಿದ್ದೆವು ಎಂಬ ವಾದವನ್ನು  ಮುಂದೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಕಮಲ ಪಾಳಯದಾಗಿದೆ.

68 ಶಾಸಕರನ್ನು ಹೊಂದಿರುವ  ಕಾಂಗ್ರೆಸ್ ಓರ್ವ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯ.  ಇನ್ನು ಎರಡನೇ ಅಭ್ಯರ್ಥಿ ಹಾಕಲ್ಲ ಎಂದು ಈ ಮುಂಚೆಯೇ ಕಾಂಗ್ರೆಸ್ ನಾಯಕರು ಸ್ಪಷ್ಟ ಪಡಿಸಿದ್ದರು. ಅದೇ ರೀತಿ 34 ಶಾಸಕರನ್ನು ಹೊಂದಿರುವ ಜೆಡಿಎಸ್ ತನ್ನ ಅಭ್ಯರ್ಥಿ ಹಾಕುವ ಬಗ್ಗೆ ಪ್ರಸ್ತಾಪವನ್ನಷ್ಟೇ ಇಟ್ಟಿತ್ತು. ಜೆಡಿಎಸ್ ಮತಗಳನ್ನು ಪಡೆದು ಬಿಜೆಪಿ ಮೂರನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ಯೋಜನೆ ಗ್ರಹಿಸಿದ ಕಾಂಗ್ರೆಸ್ ತನ್ನ ಹೆಚ್ಚುವರಿ ಮತಗಳನ್ನು ವರ್ಗಾಯಿಸುವ ಭರವಸೆ ನೀಡಿ ದೇವೇಗೌಡರನ್ನು ಕಣಕ್ಕಿಳಿಸಿತ್ತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿಶೇಷ ಆಸಕ್ತಿಯಿಂದ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಸೋತಿದ್ದ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿದ್ದೂ ಹೊಂದಾಣಿಕೆ ಕೊರತೆಯಿಂದ ಜೆಡಿಎಸ್ ನಿಂದ  ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಪ್ರಧಾನಿ ದೇವೇಗೌಡ ರಾಜ್ಯಸಭೆಗೆ ಎರಡನೇ ಬಾರಿಗೆ ಪ್ರವೇಶ ಪಡೆದಿದ್ದಾರೆ.

ಪಕ್ಷದ ಬೆಳಗಾವಿ ವಿಭಾಗೀಯ ಪ್ರಭಾರಿ, ಬೆಳಗಾವಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಲಿಂಗಾಯತ ಸಮುದಾಯದ ಈರಣ್ಣ ಕಡಾಡಿ ಹಾಗೂ ದೇವರಾಜ ಅರಸು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ರಾಯಚೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸವಿತಾ ಸಮಾಜದ ಅಶೋಕ ಗಸ್ತಿ ಮೊದವ ಬಾರಿ ಸಂಸತ್ ಪ್ರವೇಶಿಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version