ಲೋಕಾರೂಢಿ
‘ಅತ್ಯಾಚಾರ’ ಮಾನವ ನಿರ್ಮಿತ ವಿಕೃತಿ
ಪುಟ್ಟ ಕಂದಮ್ಮ ಅದು. ನಲಿಯುತ್ತಾ-ಕಲಿಯುತ್ತಾ ಇರಬೇಕಾದ ವಯಸ್ಸಿನಲ್ಲಿ ಕುಟುಂಬದ ಕೆಲಸಕಾರ್ಯಗಳಿಗೆ ಹೆಗಲಾಗುತ್ತಿದ್ದವಳು. ಆಕೆಯ ಮೊಗದಲ್ಲಿನ ಮುಗ್ಧತೆ ಎಂತಹವರಲ್ಲಾದರೂ ಮುದ್ದು ಉಕ್ಕಿಸುವಂತಿತ್ತು. ಆದರೆ ಕಾಮುಕ ಕಣ್ಣುಗಳಿಗೆ ಆಕೆ ಭೋಗದ ವಸ್ತುವಾಗಿ ಕಂಡಳು. ಯಾವುದೋ ದ್ವೇಷಕ್ಕೆ ಆಕೆ ಪ್ರತೀಕಾರವಾಗಿ ತೋರಿದಳು. ಒಂದಲ್ಲಾ ಎರಡಲ್ಲ ಸತತ ಎಂಟು ದಿನಗಳ ಕಾಲ ಆಕೆಯ ಮೇಲೆ ಅಮಾನುಷವಾಗಿ ವಿಕೃತ ಮನಸ್ಸಿನ ಮೃಗಗಳು ಎರಗಿದವು. ಯಾವ ವ್ಯಕ್ತಿ ಮಾನ ಪ್ರಾಣ ರಕ್ಷಣೆ ಮಾಡುವ ಜವಾಬ್ದಾರಿ ಉಳ್ಳವನಾಗಿದ್ದನೋ ಆತನೇ ಆಕೆಯನ್ನು ಕಾಮಿಸಿದ್ದ. ಮತ್ತೊಬ್ಬ ದುರುಳ ತನ್ನ ಮೊಮ್ಮಗಳ ವಯಸ್ಸಿನ ಬಾಲೆಯ ಮೇಲೆ ಕಾಮಾಗ್ನಿ ಸುರಿಸಿದ್ದ.
ನಿರ್ಭಯಾ ಕೊಲೆ ಪ್ರಕರಣದ ನಂತರದ ದಿನಗಳಲ್ಲಿ ದೇಶಾದ್ಯಂತ ಅತಿಹೆಚ್ಚು ಸದ್ದು ಮಾಡುತ್ತಿರುವ ಪ್ರಕರಣವಿದು. ಅತ್ಯಾಚಾರ ನಡೆಸುವುದರ ಜೊತೆಗೆ ಹತ್ಯೆಯನ್ನೂ ನಡೆಸಿ ‘ಹತ್ಯಾಚಾರ’ದಂತಹ ಪಾತಕವೆಸಗುವ ರಕ್ಕಸರು ತಮ್ಮ ಕ್ರೌರ್ಯ ಮೆರೆಯುತ್ತಿದ್ದರೆ, ದೇಶದ ಜನತೆ ಅತ್ಯಾಚಾರದ ಪ್ರಕರಣಗಳಲ್ಲಿ ಕಾನೂನಿನೆಡೆಗಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತವೇ ಇವೆ. ಆದರೆ ಬಹುತೇಕ ಅತ್ಯಾಚಾರ ಪ್ರಕರಣಗಳು ಸಮಾಜಕ್ಕೆ ಅಂಜಿ, ಮಾನ-ಮರ್ಯಾದೆಯ ಹೆಸರಿನಲ್ಲಿ ಮುಚ್ಚಿಹೋಗುತ್ತವೆ. ದಾಖಲಾದ ಪ್ರಕರಣಗಳ ಸಂಖ್ಯೆ ಎಷ್ಟಿದೆಯೋ, ಅದಷ್ಟೇ ಪ್ರಮಾಣದಲ್ಲಿ ದಾಖಲಾಗದ ಪ್ರಕರಣಗಳೂ ಇವೆಯೆಂದರೆ ನಂಬಲೇಬೇಕು. ಹೆಣ್ಣಿಗೆ ದೇಹಪ್ರಕೃತಿಯೇ ಆಕೆಗೆ ಶಾಪವಾಗಿರುವುದು ವಿಪರ್ಯಾಸ. ‘ಶೀಲ’ವೇ ಹೆಣ್ಣಿನ ಪರಮೋಚ್ಛ ಆಸ್ತಿ ಎಂದು ನಮ್ಮ ಸಮಾಜ ಭಾವಿಸುತ್ತದೆ. ಪ್ರತೀಕಾರ ತೀರಿಸಿಕೊಳ್ಳಲು ದುರುಳರು ಇದನ್ನೊಂದು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಇನ್ನು ಹಸುಳೆಯ ಮೇಲೆ, ಮಕ್ಕಳ ಮೇಲೆ ಅತ್ಯಾಚಾರ ಎಸಗುವುದಿದೆಯಲ್ಲ, ಅದು ಯಾವ ಕಾರಣಕ್ಕೂ ಕ್ಷಮಾರ್ಹವಲ್ಲ.
‘ನ್ಯಾಶನಲ್ ಕ್ರೈಂ ರೆಕಾಡ್ರ್ಸ್ ಬ್ಯೂರೋ’ 2013ರಲ್ಲಿ ನೀಡಿದ ವರದಿಯ ಪ್ರಕಾರ 2012ರಲ್ಲಿ 24,923 ಅತ್ಯಾಚಾರ ಪ್ರಕರಣಗಳು ದೇಶಾದ್ಯಂತದಿಂದ ಬೆಳಕಿಗೆ ಬಂದಿವೆ. ಆಘಾತಕಾರಿ ಸಂಗತಿಯೇನು ಗೊತ್ತಾ? ಇಷ್ಟು ಪ್ರಕರಣಗಳಲ್ಲಿ 24,470 ಪ್ರಕರಣಗಳಲ್ಲಿ ಅಂದರೆ ಶೇ.98ರಷ್ಟು ಪ್ರಕರಣಗಳಲ್ಲಿನ ಆರೋಪಿಗಳು ಪರಿಚಯಸ್ಥರೇ ಆಗಿರುವುದು! ಆದ್ದರಿಂದಲೇ ಬಹುತೇಕ ಪ್ರಕರಣಗಳು ಸಂತ್ರಸ್ತೆಯ ಕಣ್ಣೀರಿನಲ್ಲೇ ಕೊಚ್ಚಿ ಹೋಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ದೌರ್ಜನ್ಯವನ್ನು ಖಂಡಿಸಿ, ದೂರು ದಾಖಲಿಸಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡಲು ಪಣ ತೊಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಾಧ್ಯಮಗಳ ಬೆಂಬಲ, ಜನರ ಸಹಕಾರ ಶೋಷಿತರಿಗೆ ಆಸರೆಯಾಗಿದೆ. ಎನ್‍ಸಿಆರ್‍ಬಿಯ 2015ರ ಅಂಕಿಅಂಶಗಳ ಪ್ರಕಾರ ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿವೆ.
ಇಲ್ಲಿಯವರೆಗೆ ಅತ್ಯಾಚಾರದ ವಿಷಯದಲ್ಲಿ ಕಾನೂನು ಸಹ ಕಠೋರವಾಗಿರಲಿಲ್ಲ. ಯಾವುದೇ ಸ್ವರೂಪದ ಅತ್ಯಾಚಾರ ಪ್ರಕರಣದ ಆರೋಪಿಗೆ ಗರಿಷ್ಠ ಜೀವಮಾನಪರ್ಯಂತದ ಜೈಲು ಶಿಕ್ಷೆ ವಿಧಿಸಬಹುದಿತ್ತು ಹಾಗೂ ಕನಿಷ್ಠ ಏಳು ವರ್ಷದ ಜೈಲು ಶಿಕ್ಷೆಯಿತ್ತು. ಆ ನಂತರ 2012ರಲ್ಲಿ ಯಾವಾಗ ನಿರ್ಭಯಾ ಪ್ರಕರಣಕ್ಕೆ ದೇಶ ಹೊತ್ತಿ ಉರಿಯಿತೋ, ಆಗ ಕ್ರಿಮಿನಲ್ ಕಾನೂನಿನಲ್ಲಿ ಕೆಲವೊಂದು ಬದಲಾವಣೆ ಮಾಡಲಾಯಿತು. ಅತ್ಯಾಚಾರದ ವೇಳೆ ಸಂತ್ರಸ್ತೆ ಮೃತಪಟ್ಟರೆ ಯಾ ದೈಹಿಕವಾಗಿ ಜರ್ಜರಿತಳಾದರೆ ಆರೋಪಿಗಳನ್ನು ಗಲ್ಲಿಗೇರಿಸುವ ಮಹತ್ತರ ಅಂಶ ಸೇರ್ಪಡೆಯಾಯಿತು. ಇದೀಗ ಪೋಕ್ಸೋ ಕಾಯಿದೆಯಲ್ಲಿ ಬದಲಾವಣೆ ತಂದು, ಸುಗ್ರೀವಾಜ್ಞೆ ಹೊರಡಿಸಿರುವ ಕೇಂದ್ರ ಸರ್ಕಾರ ಅಪ್ರಾಪ್ತರ ಅದರಲ್ಲೂ 12 ವರ್ಷದೊಳಗಿನ ಮಕ್ಕಳ ಮೇಲೆ (ಹೆಣ್ಣಾಗಿರಲಿ-ಗಂಡಾಗಿರಲಿ) ಅತ್ಯಾಚಾರ ನಡೆಸುವ ದುರುಳರಿಗೆ ಮರಣ ದಂಡನೆಗೆ ಅವಕಾಶ ನೀಡಿದೆ. ಇದು ಅತ್ಯಾಚಾರಿ ಮನಃಸ್ಥಿತಿಯನ್ನು ತಡೆಯುವಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.
ಇದನ್ನೆಲ್ಲ ನೋಡುತ್ತಿದ್ದರೆ, ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಎಷ್ಟಿದೆ ಎನ್ನುವ ಅರಿವಾಗುತ್ತದೆ. ಚಿಕ್ಕ ಮಕ್ಕಳಿಗೆ ಲೈಂಗಿಕ ಶಿಕ್ಷಣವಾ? ಎಂದು ಮೂಗು ಮುರಿಯುವ ಮೊದಲು, ಭವಿಷ್ಯದಲ್ಲಿ ಅದು ಉಂಟು ಮಾಡುವ ಪರಿಣಾಮಗಳ ಕುರಿತು ಯೋಚಿಸಬೇಕಿದೆ. ಅವೈಜ್ಞಾನಿಕವಾಗಿ ಹುಟ್ಟಿಕೊಳ್ಳುವ ವಿಕೃತ ಮನಸ್ಸುಗಳನ್ನು ಈ ಮೂಲಕ ಖಂಡಿತ ತಡೆಗಟ್ಟಲು ಸಾಧ್ಯ. ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರನ್ನು ಗೌರವಿಸುವ, ಮಾನವೀಯ ಗುಣಮೌಲ್ಯಗಳನ್ನು ಬಿತ್ತರಿಸುವ ನೈತಿಕ ಶಿಕ್ಷಣ ಇಂದಿನ ಜರೂರತ್ತು. ಹೆಣ್ಣನ್ನು ಭೋಗದ ಪರಿಧಿಯಾಚೆ ನಿಲ್ಲಿಸಿ, ಆಕೆಯ ಮಹತ್ವವನ್ನು ಸಾರುವ ಕೆಲಸ ಪ್ರತಿಯೊಂದು ಮಾಧ್ಯಮದ ಮೂಲಕ ಆಗಬೇಕು, ಜನರನ್ನು ತಲುಪಿ ಸ್ವಸ್ಥ ಸಮಾಜ ಬೆಳೆದು ನಿಲ್ಲಬೇಕು.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401