ದಿನದ ಸುದ್ದಿ
ರಾಜ ರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಪರಿಸರ ದಿನಾಚರಣೆ
ಸುದ್ದಿದಿನ,ಮಲೇಬೆನ್ನೂರು : ಪಟ್ಟಣದ ಜಿಗಳಿ ರಸ್ತೆಯ ಒಡೆಯರ ಬಸಾಪುರ ಗ್ರಾಪಂ ವ್ಯಾಪ್ತಿಯ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಮೂಲಕ ಪರಿಸರದ ಮಹತ್ವ ತಿಳಿಸಿಕೊಡಲಾಯಿತು.
ಈ ಸಂಬಂಧ ಜೂನ್ 4 ರ ಶನಿವಾರ ಬೆಳಿಗ್ಗೆ 8.30 ಕ್ಕೆ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪರಿಸರ ಸಂಬಂಧಿ ಚಿತ್ರ ಬಿಡಿಸುವ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕೈ ಕುಂಚದಿಂದ ಪರಿಸರ ಸಂಬಂಧಿ ವೈವಿಧ್ಯಮಯ ಚಿತ್ರಗಳು ಅರಳಿದವು.
“ಸಹಸ್ರಾರು ಕೃತಕ ಆಮ್ಲಜನಕ ಸಿಲಿಂಡರ್ ಗಳು ಸಹ ಒಂದು ಮರಕ್ಕೆ ಸಮವಾಗಲಾರವು ” ಎಂಬ ಸಂದೇಶ ಸಾರುವ 10 ನೇ ತರಗತಿ ವಿದ್ಯಾರ್ಥಿ ಮನೋಜ್ ಹೆಚ್ ಬಿ ಯ ಚಿತ್ರ ಹಾಗೂ ” ಭೂಮಿಯನ್ನು ರಕ್ಷಿಸಿ ” ಎಂಬ ಕರೆ ನೀಡುವ ರಮ್ಯಾ ಎಂ ಎಸ್ ಅವರ ಸರಳವಾಗಿ ಪೆನ್ಸಿಲ್ ನಿಂದ ರಚಿಸಲ್ಪಟ್ಟಿದ್ದ ಚಿತ್ರಗಳು ಎಲ್ಲರ ಗಮನ ಸೆಳೆದವು.
ಜೂನ್ 6 ರ ಬೆಳಗ್ಗೆ 11. 30 ಕ್ಕೆ ಮುಖ್ಯೋಪಾಧ್ಯಾಯರಾದ ಎಸ್. ಶಶಿಧರ್ ಅವರು ಶಾಲಾ ಆವರಣದಲ್ಲಿ ಗಿಡ ನೆಟ್ಟು ಮಾತನಾಡಿ, ಹಸಿರೇ ಎಲ್ಲರ ಉಸಿರು. ಹಸಿರಿದ್ದರೆ ಮಾತ್ರ ನಮ್ಮ ಬದುಕು. ನಮ್ಮ ಆಜುಬಾಜಿನ ಖಾಲಿ ಪ್ರದೇಶದಲ್ಲಿ ಗಿಡ – ಮರ ಬೆಳೆಸಿ, ಪೋಷಿಸುವ ಮೂಲಕ ಪ್ರಕೃತಿಯೊಂದಿಗೆ ನಮ್ಮ ಜೀವನ ಸಾಗಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಿ ಬಿ ಶಿವಾನಂದಪ್ಪ , ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ, ಶಿಕ್ಷಕ ರವೀಂದ್ರ ಹಾಗೂ 10 ನೇ ತರಗತಿ ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243