ದಿನದ ಸುದ್ದಿ

ಉದ್ಯಮಿ ರತನ್ ಟಾಟಾ ನಿಧನ; ಗಣ್ಯರಿಂದ ಸಂತಾಪ

Published

on

ಸುದ್ದಿದಿನಡೆಸ್ಕ್:ದೇಶದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಮತ್ತು ಉದ್ಯಮಿಗಳು ಸಂತಾಪ ಸೂಚಿಸಿದ್ದಾರೆ.

ಟಾಟಾ ಸಮೂಹ ಸಂಸ್ಥೆಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದ್ದ ಅವರು, ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಬೆಳಗ್ಗೆ ಅವರ ಆರೋಗ್ಯಸ್ಥಿತಿಯಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡ ಕಾರಣ, ಅವರನ್ನು ಮುಂಬೈಗೆ ಬ್ರೀಚ್‌ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಅವರು ನಿಧನರಾದರು.

ರತನ್ ಟಾಟಾ ಅವರ ನಿಧನದಿಂದ, ಭಾರತವು ಸಾಂಸ್ಥಿಕ ಬೆಳವಣಿಗೆಯನ್ನು ರಾಷ್ಟ್ರ ನಿರ್ಮಾಣದೊಂದಿಗೆ ಮತ್ತು ಶ್ರೇಷ್ಠತೆಯನ್ನು ನೀತಿಯೊಂದಿಗೆ ಸಂಯೋಜಿಸಿದ ವ್ಯಕ್ತಿಯನ್ನು ಕಳೆದುಕೊಂಡಿದೆ. ರತನ್ ಟಾಟಾ ಅವರು ಶ್ರೇಷ್ಠ ಟಾಟಾ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ದರು ಮತ್ತು ಹೆಚ್ಚು ಪ್ರಭಾವಶಾಲಿ ಜಾಗತಿಕ ಉಪಸ್ಥಿತಿಯನ್ನು ನೀಡಿದರು. ಅನುಭವಿ ವೃತ್ತಿಪರರು ಹಾಗೂ ಯುವ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ರತನ್ ಟಾಟಾ ಅವರ ನಿಧನದಿಂದಾಗಿ ತೀವ್ರ ದುಃಖವಾಗಿದೆ. ಅವರು ದೊಡ್ಡ ಕನಸು ಕಾಣುವ ಮತ್ತು ಸಮಾಜಕ್ಕೆ ಮರಳಿ ನೀಡುವ ಉತ್ಸಾಹವನ್ನು ಹೊಂದಿದ್ದರು. ದೇಶದಲ್ಲಿ ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ ಮತ್ತು ಪ್ರಾಣಿ ಕಲ್ಯಾಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ಟಾಟಾ ಸಮೂಹ ಮುಂಚೂಣಿಯಲ್ಲಿದೆ. ರತನ್ ಟಾಟಾ ಅವರು ಅಸಾಧಾರಣ ಮತ್ತು ದೂರದೃಷ್ಟಿಯ ಉದ್ಯಮಿಯಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version