ದಿನದ ಸುದ್ದಿ
ಕರುನಾಡು ಮತ್ತು ಕನ್ನಡದ ಬಗ್ಗೆ ಸದಾ ಧನ್ಯತೆಯ ಭಾವವಿರಲಿ : ರವಿಚಂದ್ರ
ಸುದ್ದಿದಿನ, ಮಲೇಬೆನ್ನೂರು : ನಾವು ಕನ್ನಡಿಗರು ಎಂಬ ಅಭಿಮಾನ ಹೃದಯದಲ್ಲಿ ಸದಾ ಹಸಿರಾಗಿರಲಿ. ಮನದಲ್ಲಿ ಕರುನಾಡು – ಕನ್ನಡದ ಬಗ್ಗೆ ಕೃತಜ್ಞತೆ ಹಾಗೂ ಧನ್ಯತೆಯ ಭಾವ ಸದಾ ತುಂಬಿರಲಿ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ ಅವರು ಸಂದೇಶ ನುಡಿಯಾಡಿದರು.
ದಿನಾಂಕ : 2.11.2022 ರ ಮಧ್ಯಾಹ್ನ ಮಲೇಬೆನ್ನೂರು ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ಒಡೆಯರ ಬಸವಾಪುರ ದ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ 67 ನೇ ಕರ್ನಾಟಕ ರಾಜ್ಯೋತ್ಸವ ದ 2 ನೇ ದಿನದ ವಿಶೇಷ ಕಾರ್ಯಕ್ರಮವನ್ನು ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಉದ್ಘಾಟಿಸಿ ಮಾತನಾಡಿದ ಅವರು ವಿದ್ಯೆ, ಉದ್ಯೋಗ ಮತ್ತು ಸ್ಥಳದ ಆಯ್ಕೆ ಯಾವುದೇ ಇರಲಿ ಮನಸ್ಸು ಕನ್ನಡವಾಗಿರಲಿ ಎಂದರು.
ಹೊಟ್ಟೆ ಪಾಡಿಗಾಗಿ ಯಾವುದೇ ಮಾಧ್ಯಮ, ವಿಷಯ, ಉದ್ಯೋಗ ಆರಿಸಿಕೊಂಡರೂ ಕನ್ನಡಕ್ಕೆ ಪ್ರಥಮ ಆದ್ಯತೆ ಕೊಡಿ. ನೀವು ಎಲ್ಲೇ ಇರಿ, ಹೇಗಾದರೂ ಇರಿ. ಅನ್ನ, ಆಶ್ರಯ ನೀಡಿ ಪೊರೆದ ಈ ನಾಡಿನ ಋಣವನ್ನು ಎಂದಿಗೂ ಮರೆಯಬೇಡಿ. ಪರಭಾಷೆಯವರ ಜೊತೆ ಅವರ ಭಾಷೆಯಲ್ಲೇ ಪ್ರತಿಕ್ರಿಯಿಸದೆ ಕನ್ನಡದಲ್ಲಿ ವ್ಯವಹರಿಸಿ ಅವರಿಗೂ ಕನ್ನಡ ಕಲಿಸಿ. ನಾಡು – ನುಡಿಗೆ ಸೇವೆ ಸಲ್ಲಿಸುವ ಭಾವನೆ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕನ್ನಡ ನಾಡು – ನುಡಿಯ ಪ್ರಾಚೀನತೆ, ಏಕೀಕರಣ, ಪರಂಪರೆ, ಸಂಸ್ಕೃತಿಯ ಬಗ್ಗೆ ಸ್ಥೂಲವಾಗಿ ವಿವರಿಸಿದ ರವಿಚಂದ್ರ ಅವರು ವಿದ್ಯಾ ಸಂಸ್ಥೆಯ 9 ನೇ ತರಗತಿಯ ಕೃಪಾ ಪಾಟೀಲ್, 8 ನೇ ತರಗತಿಯ ರಿದಾ ಸಮ್ರಿನ್ ಅವರ ಸ್ವಚ್ಛ, ಶುದ್ಧ, ಅಚ್ಚ ಕನ್ನಡದ ನುಡಿ ನಮನವನ್ನು ಉದಾಹರಿಸಿ ಶ್ಲಾಘಿಸಿದರು. ಆಂಗ್ಲ ಮಾಧ್ಯಮ ಸಂಸ್ಥೆಯಾದರೂ ಕನ್ನಡ ಕಾರ್ಯಕ್ರಮವನ್ನು ಎರೆಡೆರೆಡು ಬಾರಿ ಅದ್ಧೂರಿಯಾಗಿ ಆಚರಿಸುತ್ತಿರುವ ನಿಮ್ಮ ಸಂಸ್ಥೆಯ ಕನ್ನಡತನದ ಬಗ್ಗೆ ಸಂತೋಷ ಎನಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿ, ಕನ್ನಡ ನಾಡಿಗೆ ಪ್ರತಿಭಾವಂತ ವಿದ್ಯಾರ್ಥಿಗಳ ಕೊಡುಗೆ ನೀಡುತ್ತಿರುವ ಸಂಸ್ಥೆಯ ಕಾರ್ಯವೈಖರಿ ಎಂದಿಗೂ ಮಾದರಿಯಾಗಿ ಉಳಿಯಲಿ ಎಂದು ಆಶಿಸಿದರು.
ಆರಂಭದಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಾದ ಮನೋಜ್ ಓ ಜಿ, ಯುವರಾಜ್, ಪವನ್ ಕುಮಾರ್, ಶ್ರೇಯಸ್, ಮನೋಜ್ ಹೆಚ್ ಬಿ, ರೇಣುಕ ಪ್ರಸಾದ್, ದುಷ್ಯಂತ್, ಕಾರ್ತಿಕ್, ನಂದೀಶ್ , ಅಭಿರಾಮ್ ಅವರನ್ನೊಳಗೊಂಡ ತಂಡ ಡೊಳ್ಳುಕುಣಿತ ಮೂಲಕ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸ್ವಾಗತಿಸಿ ವೇದಿಕೆಗೆ ಕರೆ ತಂದು, ನಂತರ ವೈವಿದ್ಯಮಯ ಪ್ರದರ್ಶನ ನೀಡಿತು. ವರ್ಷಾ, ರಮ್ಯಾ, ನಮ್ರತಾ, ರಿಂಕು, ರೆಹಾನ್, ನೂತನ್, ಸಂಗೀತ, ಮೇಘನಾ , ವೀರೇಶ್, ಬ್ರಾಹ್ಮಿಣಿ ಸೇರಿದಂತೆ ಇತರರ ತಂಡ ಸಾಮೂಹಿಕವಾಗಿ ಬಾರಿಸು ಕನ್ನಡ ಡಿಂಡಿಮವ ಗೀತೆಯನ್ನು ಡೊಳ್ಳು ಬೀಟ್ಸ್ ಜೊತೆ ಸೊಗಸಾಗಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ ಮಾತನಾಡಿ, ಜನನಿ ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ನಾಡು – ನುಡಿ, ದೇಶ – ಭಾಷೆಯ ಸೇವೆ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಅದನ್ನು ನಾವೆಲ್ಲರೂ ಪಾಲಿಸೋಣ, ನಿರ್ವಹಿಸೋಣ ಎಂದರು.
ಮುಖ್ಯೋಪಾಧ್ಯಾಯ ಶಶಿಧರ್ ಎಸ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರವೀಂದ್ರ ವಂದಿಸಿದರು. ಶಿಕ್ಷಕಿಯರಾದ ಕವಿತಾ ಕೊಮಾರನಹಳ್ಳಿ, ಶ್ರೀಮತಿ ಚಂದನ, ಶ್ರೀಮತಿ ಪ್ರತಿಭಾ ಜಗದೀಶ್ ಸ್ವಾಗತಿಸಿದರು. ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮ ಆಸ್ವಾದಿಸಿದರು.
ನುಡಿ ಸಂದೇಶ ನೀಡಿದ ರವಿಚಂದ್ರ ಅವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243