ದಿನದ ಸುದ್ದಿ
ಪ್ರಮುಖ ಸುದ್ದಿಗಳು ; ಮಿಸ್ ಮಾಡ್ದೆ ಓದಿ
ಪ್ರಮುಖ ಸುದ್ದಿಗಳು ; ಮಿಸ್ ಮಾಡ್ದೆ ಓದಿ
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಶೃಂಗೇರಿ ಸಮೀಪದ ಹರಿಹರಪುರದಲ್ಲಿ ವಿಶೇಷ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ನಂತರ ಅವರು ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
- ಶಿವರಾಮ ಕಾರಂತ ಪ್ರತಿಷ್ಠಾನವು ನೀಡುವ 2021ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿಗೆ ಪ್ರೊಫೆಸರ್ ಬಿ.ಎ. ವಿವೇಕ್ ರೈ ಹಾಗೂ ಸಾಹಿತಿ ಕುಂ. ವೀರಭದ್ರಪ್ಪ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 20 ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಜಯಶ್ರೀ ಅಮರನಾಥ ಶೆಟ್ಟಿ ತಿಳಿಸಿದ್ದಾರೆ.
- ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣ ಮತ್ತು ವಿಜಯವಾಡ ನಿಲ್ದಾಣಗಳ ನಡುವೆ ನಾಳೆಯಿಂದ ರೈಲು ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ, ಹುಬ್ಬಳ್ಳಿ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ರೈಲ್ವೆ ಪ್ರಯಾಣಿಕರು ಇನ್ನು ಮುಂದೆ ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸಬಹುದಾಗಿದೆ. ದೇಶಾದ್ಯಂತ 45ಸಾವಿರಕ್ಕೂ ಹೆಚ್ಚು ಅಂಚೆ ಕಚೇರಿಗಳಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಆರಂಭಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಮುಂದುವರಿದಿದೆ. ಇದುವರೆಗೆ186 ಕೋಟಿ 70 ಲಕ್ಷ ಲಸಿಕೆ ಡೋಸ್ ನೀಡಲಾಗಿದೆ. ಒಂದೇ ದಿನದಲ್ಲಿ 15ಲಕ್ಷ ಕೊರೊನಾ ಲಸಿಕೆ ಡೋಸ್ ನೀಡಲಾಗಿದೆ. 12 ರಿಂದ 15ವರ್ಷದ ಮಕ್ಕಳ ಪೈಕಿ ಇದುವರೆಗೆ 2ಕೋಟಿ 46ಲಕ್ಷ ಕೊರೊನಾ ಲಸಿಕೆ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
- ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಿಚೆಲ್ ಮಾರ್ಷ್ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹತ್ತು ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಲಿದ್ದಾರೆ. ತಂಡದ ಇತರೆ ಆಟಗಾರರಿಗೂ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಇಂದು ಅಥವಾ ನಾಳೆ ವರದಿ ಬರುವ ಸಾಧ್ಯತೆ ಇದೆ.
- ಐಪಿಎಲ್ ಕ್ರಿಕೆಟ್ನಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿವೆ. ಮುಂಬೈನಲ್ಲಿ ಈ ಪಂದ್ಯ ನಡೆಯಲಿದ್ದು, ರಾತ್ರಿ7.30ಕ್ಕೆ ಪಂದ್ಯ ಆರಂಭವಾಗಲಿದೆ.
- ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಾಡಿದ್ದು ರೈತ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಆಹ್ವಾನಿಸಲಾಗಿದೆ. ಸಮಾವೇಶದಲ್ಲಿ ರೈತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
- ಬೆಂಗಳೂರು ನಗರದಲ್ಲಿರುವ ಬಾಲ ಭವನ, ಕಬ್ಬನ್ ಪಾರ್ಕ್, ವತಿಯಿಂದ ಕೇಂದ್ರ ಬಾಲ ಭವನ, ಕಬ್ಬನ್ ಉದ್ಯಾನವನ, ಬೆಂಗಳೂರು, ರಾಜಾಜಿನಗರ, ಮಿನಿ ಬಾಲ ಭವನ, ಕೋಲ್ಸ್ ಪಾರ್ಕ್, ಮಿನಿ ಬಾಲ ಭವನ ಹಾಗೂ ಹೆಚ್ ಎಸ್ ಆರ್ ಬಡಾವಣೆ, ಮಿನಿ ಬಾಲ ಭವನಗಳಲ್ಲಿ ಇದೇ 21ರಿಂದ ಮೇ 14ರ ವರೆಗೆ ಬೇಸಿಗೆ ರಜೆ ಅಂಗವಾಗಿ 5ರಿಂದ 16 ವರ್ಷದ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.
- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬನಸ್ಕಾಂತದ ದಿಯೋದರ್ನ ಬನಾಸ್ ಡೈರಿ ಸಂಕುಲ್ ಅಭಿವೃದ್ಧಿ ಕಾರ್ಯಕ್ರಮಕ್ಕೆ ಶಿಲಾನ್ಯಾಸ ನೆರವೇರಿಸುವ ಜೊತೆಗೆ ವಿವಿಧ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದೇ ವೇಳೆ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದಲ್ಲಿ ನಿರ್ಮಿಸುತ್ತಿರುವ ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
- ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ಪ್ರಮಾಣ ಮಾರ್ಚ್ ತಿಂಗಳಲ್ಲಿ ಶೇಕಡ 14.55ಕ್ಕೆ ಏರಿಕೆಯಾಗಿದೆ. ಇದು ನಾಲ್ಕು ತಿಂಗಳ ಗರಿಷ್ಠ ಮಟ್ಟವಾಗಿದೆ. ಕಚ್ಚಾತೈಲ ಹಾಗೂ ಇತರೆ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಹಣದುಬ್ಬರ ಪ್ರಮಾಣ ಏರಿಕೆಯಾಗಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.
- ಅಮೆರಿಕದಲ್ಲಿ ಕೊರೊನಾ ಪ್ರಕರಣಗಳು ಏರಿಳಿತದ ನಡುವೆಯೇ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ನಿಯಮವನ್ನು ಹಿಂತೆಗೆದುಕೊಳ್ಳಲು ಅಧ್ಯಕ್ಷ ಜೋ ಬೈಡೆನ್ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಮಾಸ್ಕ್ ಕಡ್ಡಾಯದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಅದರ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಜೋ ಬೈಡೆನ್ ಸರ್ಕಾರ ತೀರ್ಮಾನ ಘೋಷಿಸಿದೆ.
- ಮಂಗೋಲಿಯಾದಲ್ಲಿ ಇಂದಿನಿಂದ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್ ಆರಂಭವಾಗಲಿದೆ. ಫ್ರೀಸ್ಟೈಲ್ ಮತ್ತು ಗ್ರೀಕೊ ರೋಮನ್ ವಿಭಾಗದಲ್ಲಿ 20ಮಂದಿ ಪುರುಷರ ತಂಡ ಪಾಲ್ಗೊಳ್ಳುತ್ತಿದ್ದು, 10 ಮಂದಿ ಮಹಿಳೆಯರು ಟೀಮ್ ಇವೆಂಟ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಟೋಕಿಯೊ ಒಲಿಂಪಿಕ್‌ನಲ್ಲಿ ಪದಕ ಗೆದ್ದ ರವಿ ದಹಿಯಾ ಹಾಗೂ ಭಜರಂಗ್ ಪುನಿಯಾ ಅವರೂ ಸಹ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.
- ಸುದ್ದಿದಿನ.ಕಾಂ|ವಾಟ್ಸಾಪ್|9980346243