ದಿನದ ಸುದ್ದಿ
ಹರಿಹರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧ: ಶಾಸಕ ರಾಮಪ್ಪ
ಸುದ್ದಿದಿನ,ದಾವಣಗೆರೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹರಿಹರದಿಂದ ಸ್ಪರ್ಧಿಸಲು ಬಯಸಿದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧವಿರುವುದಾಗಿ ಶಾಸಕ ಎಸ್. ರಾಮಪ್ಪ ಘೋಷಿಸಿದರು.
ಶಾಮನೂರು ಶಿವಶಂಕರಪ್ಪರ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಪರೂಪದ ವ್ಯಕ್ತಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರಿಂದ ಶಕ್ತಿ ಇದೆ. ತಾಲೂಕಿನ ಜನರ ಅಪೇಕ್ಷೆ ಇದೆ. ವಿಜೃಂಭಣೆಯಿಂದ ಗೆಲ್ಲಿಸಲು ಮತದಾರರು ಹಾಗೂ ನಾವು ಆಹ್ವಾನ ನೀಡುತ್ತೇವೆ ಎಂದರು.
ಹರಿಹರದಲ್ಲಿ ಶಾಸಕರಾದರೆ ನಾನೇ ಶಾಸಕನಾದಂತೆ. ನಾನು ಹೇಳಿಲ್ಲ, ಕೇಳಿಕೊಳ್ಳುತ್ತೇನೆ. ಯಾರೂ ಸಹ ಒಂದೇ ಬಾರಿ ಶಾಸಕ ಸಾಕು ಎಂದೇಳಲ್ಲ. ನೀವು ಅರ್ಥ ಮಾಡಿಕೊಳ್ಳಿ. ಸಿದ್ದರಾಮಯ್ಯರ ಮೇಲಿನ ಪ್ರೀತಿ, ಅಭಿಮಾನ ಹೆಚ್ಚಿದೆ. ತ್ಯಾಗ, ಕೆಲಸದಿಂದ ಎಲ್ಲರನ್ನೂ ಮುಟ್ಟಿದ್ದಾರೆ. ಕಟ್ಟಕಡೆಯ ಸಮಾಜಕ್ಕೂ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಡುತ್ತೇವೆ. ಸರ್ವೇಯಲ್ಲಿ ಮತ್ತೆ ನಾನೇ ಗೆಲ್ಲುತ್ತೇನೆ ಎಂಬುದು ಹೈಕಮಾಂಡ್ ಗೂ ಗೊತ್ತಿದೆ. ಸಿದ್ದರಾಮಯ್ಯರು ಸ್ಪರ್ಧೆ ಮಾಡದಿದ್ದರೆ ನನಗೆ ಟಿಕೆಟ್ ಸಿಗುತ್ರೆ, ನಾನೇ ಗೆಲ್ಲುತ್ತೇನೆ. ಆಕಾಂಕ್ಷಿಗಳಿದ್ದಾರೆ, ಅವರ್ಯಾರಿಗೂ ಟಿಕೆಟ್ ಸಿಗಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಒಂದು ಜಾತಿಗೆ ಸೀಮಿತರಾದವರಲ್ಲ. ಕಾಂಗ್ರೆಸ್ ಮುಖಂಡ ಚಿಮ್ಮನಕಟ್ಟೆ ಅವರು ಬಾದಾಮಿಯಲ್ಲಿ ಸಿದ್ದರಾಮಯ್ಯರ ಬಗ್ಗೆ ಆ ರೀತಿ ಮಾತನಾಡಬಾರದಿತ್ತು. ನಾವು ಎಂದಿಗೂ ಆ ರೀತಿ ಹೇಳೋದಿಲ್ಲ. ನಮ್ಮ ಕ್ಷೇತ್ರದಲ್ಲಿ ಗೆದ್ದರೆ ಸಾವಿರಾರು ಕೋಟಿ ಅನುದಾನ ತರುತ್ತಾರೆ. ಕ್ಷೇತ್ರದ ಅಭಿವೃದ್ಧಿ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ನನಗೆ 40 ಕೋಟಿ ರೂಪಾಯಿ ನೀಡುವುದಾಗಿ ಆಫರ್ ಬಂದಿತ್ತು. ನಮ್ಮ ಮನೆಗೆ ಬಂದಿದ್ದರೂ ಒಳಗಡೆ ಬಿಟ್ಟುಕೊಂಡಿಲ್ಲ. ಯಾವುದೇ ಆಸೆ, ಆಮೀಷಗಳಿಗೆ ಬಲಿಯಾಗದೇ ಕಾಂಗ್ರೆಸ್ ನಲ್ಲಿದ್ದೇನೆ. ಬಿಜೆಪಿಯವರು ಅಪಪ್ರಚಾರ ಮಾಡಲು ಯತ್ನಿಸಿದರೂ ಆಗಲಿಲ್ಲ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243