ರಾಜಕೀಯ

ಹಾರು ತಿಹುದು ಏರು ತಿಹುದು ನೋಡು ಬಂಡಾಯದ ಬಾವುಟ

Published

on

ಸುದ್ದಿದಿನವಿಶೇಷ: ರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆ ಪ್ರಮುಖವಾದ ಜಿಲ್ಲೆ. ಇಲ್ಲಿನ ಜಿದ್ದಾ ಜಿದ್ದಿನ ಚುನಾವಣೆ ಈ ಬಾರಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿಯವರೆಗು ಜಿಲ್ಲೆಯ 8ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 116 ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಮಲ ಪಾಳೆಯಕ್ಕೆ ತೆಂಗಿನಕಾಯಿ ಸೆಡ್ಡು ಹೊಡೆದು ನಿಂತಿತ್ತು. ಆದರೆ ಈ ಬಾರಿಯು ಕೂಡ ಬಿಜೆಪಿ ಟಿಕೇಟ್ ವಂಚಿತ ಅಭ್ಯರ್ಥಿಗಳು ಪತ್ಯೇಕವಾಗಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.ಕಳೆದ ಬಾರಿ ಕೆಜೆಪಿಯ ಹೊಡೆತ ದಿಂದ ತನ್ನ ಅಸ್ತಿತ್ವವನ್ನು ಕಳೆದಕೊಂಡ ಬಿಜೆಪಿ ಈ ಬಾರಿ ಜಿಲ್ಲೆಯಲ್ಲಿ ಕಮಲ ಅರಳಿಸಲು ಸಜ್ಜಾಗಿತ್ತು, ಆದರೆ, ಒಂದೆ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ಜೋರಾಗಿದ್ದ ಹಿನ್ನಲೆಯಲ್ಲಿ, ಟಿಕೇಟ್ ಕೈ ತಪ್ಪಿದವರು, ಬಂಡಾಯದ ಬಾವುಟವನ್ನು ಹಾರಿಸಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರ ಪ್ರಮುಖ ಕ್ಷೇತ್ರವಾಗಿದೆ. ಆದರೆ ಮಾಯಕೊಂಡ ಕ್ಷೇತ್ರದಲ್ಲಿ ಈ ಬಾರಿ ಮಾಯದಾಟ ಶುರುವಾಗಿದೆ.ಕಮಲದ ಮಾಜಿ ಶಾಸಕ ಬಸವರಾಜ್ ನಾಯ್ಕ ಕೂಡ ಶತಾಯಗತಾಯ ಬಿಜೆಪಿಯಿಂದ ನಿಲ್ಲಲು ಯತ್ನಿಸಿದರು ಆದರೆ ಕೊನೆ ಗಳಿಗೆಯಲ್ಲಿ ಪ್ರೊ.ಲಿಂಗಪ್ಪನವರ ಹೆಸರು ಅಂತಿಮವಾದ ಬಳಿಕ, ಜೆಡಿಯು ಸೇರಿ ಕಮಲಕ್ಕೆ ಬಾಣ ಬಿಟ್ಟಿದ್ದಾರೆ. ಈ ನಡೆಯು ಕೂಡ ಒಂದು ಕಡೆ ಕಮಲಕ್ಕೆ ಮುಳ್ಳಾಗುವುದರಲ್ಲಿ ಸಂಶಯವಿಲ್ಲ .‌ಇನ್ನು ಇದೇ ಕ್ಷೇತ್ರದ ಮತ್ತೊಬ್ಬ ಪ್ರಮುಖರಲ್ಲಿ ಎಚ್.ಆನಂದಪ್ಪ ಕೂಡ ಟಿಕೇಟ್ ಪಡೆಯಲು ಪ್ರಯತ್ನ ಮಾಡಿದರು. ಆದರೆ ಅಧಿಕೃತವಾಗಿ ಲಿಂಗಪ್ಪನವರಿಗೆ ಘೋಷಣೆ ಯಾದ ಬಳಿಕ ಆನಂದಪ್ಪ ನವರು ಬಂಡಾಯದ ಕಹಳೆ ಮೊಳಗಿಸಿದ್ದಾರೆ.‌ಇನ್ನು ಒಂದೇ‌ ಕ್ಷೇತ್ರದಲ್ಲಿ , ಒಂದೇ ಪಕ್ಷದ ವಿರುದ್ಧ ಇಬ್ಬರು ಅಭ್ಯರ್ಥಿಗಳು ಬಂಡಾಯ ಸಿಡಿಸಿದ್ದಾರೆ.‌ಇದರಿಂದಾಗಿ ಈ ಬಾರಿ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇಬ್ಬರ ಜಗಳದಿಂದ ಮೂರನೆ ಅವರಿಗೆ ಲಾಭವಾಗುಬಂತೆ ಇಲ್ಲಿನ‌ ಜೆಡಿಎಸ್ ಅಭ್ಯರ್ಥಿ ಗೆ ವರ ವಾಗುವುದೆ ಕಾದು ನೋಡಬೇಕಿದೆ.

ಇನ್ನು ಜಿಲ್ಲೆಯ ಪ್ರಮುಖ ಕ್ಷೇತ್ರವಾದ ಹರಪನಹಳ್ಳಿ ಯಲ್ಲು ಬಿಜೆಪಿಯ ಬಂಡಾಯದ ಹಾರಟ ಕಡಿಮೆಯಿಲ್ಲ. ಯಡಿಯೂರಪ್ಪ ಮತ್ತು ಶ್ರೀರಾಮುಲು ಆಪ್ತರಾಗಿದ್ದ ಎನ್ .ಕೊಟ್ರೇಶ್ ಬಿಜೆಪಿಯ ಅಭ್ಯರ್ಥಿ ಯಾಗುವುದು ಕಚಿತವೆಂದಿತ್ತು ಆದರೆ ಕೊನೆ ಕ್ಷಣದಲ್ಲಿ ಕರುಣಾಕರ ರೆಡ್ಡಿಗೆ ಟಿಕೇಟ್ ಘೋಷಣೆ ಮಾಡಿದರು. ಇದರಿಂದಾಗಿ ನನಗೆ ಯಡಿಯೂರಪ್ಪ, ರಾಮುಲು ಮೋಸ ಮಾಡಿದರು ಎಂದು ಕಮಲ ಬಿಟ್ಟು ತೆನೆ ಹೊತ್ತುಕೊಂಡಿದ್ದಾರೆ. ಕಡೆಯ ಕ್ಷಣದಲ್ಲಿ ಜೆಡಿಎಸ್ ಸೇರಿದ ಕೊಟ್ರೇಶ್ ಬಿಜೆಪಿಯ ವಿರುದ್ದ ನೇರವಾಗಿ ಬಂಡಾಯದ ಬಿಸಿ ಅಲೆಯನ್ನು ನಿರ್ಮಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಕೂಡ ಬಂಡಾಯದ ಹೊಗೆ ಕಾಣಿಸುತ್ತಿದೆ.
ಬಿ ಫಾರಂ ಸಿಗುವುದಕ್ಕೂ ಮುಂಚೆಯೇ ಬಿಜೆಪಿಯ ಅಭ್ಯರ್ಥಿ ಎಂದು ಯಶವಂತರಾವ್ ಜಾಧವ್ ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಕಮಲದ ಅಧಿಕೃತ ಅಭ್ಯರ್ಥಿ ಯಾಗಿಯೇ ಘೊಷಿತಗೊಂಡರು. ಇನ್ನು ಇದೆ ಕ್ಷೇತ್ರದಿಂದಲೆ ಎಚ್. ಎಸ್. ನಾಗರಾಜು ಕೂಡ ಕಮಲ ಪಾಳಯದಲ್ಲಿ ಟಿಕೇಟ್ ಆಕಾಂಕ್ಷಿಯಾಗಿದ್ದರು ಆದರೆ ಯಶವಂತರಾವ್ ಜಾದವ್ ಗೆ ಟಿಕೇಟ್ ನೀಡಿದ ಪರಿಣಾಮ ಪ್ರತ್ಯೇಕವಾಗಿ ಕಮಲಕ್ಕೆ ಬಂಡಾಯದ ಅಭ್ಯರ್ಥಿ ಯಾಗಿ ಕಣಕ್ಕಿಳಿದ್ದಿದ್ದಾರೆ. ಒಟ್ಟಾರೆಯಾಗಿ ಜಾತಿ ಸಮೀಕರಣ ಸೇರಿದಂತೆ ನಾನಾ ಕಾರಣಗಳಿಂದಾಗಿ ಬಿಜೆಪಿಗೆ ಬಂಡಾಯದ ಕಾವು ಜೋರಾಗಿಯೆ ತಟ್ಟಲಿದೆ‌ . ಕಳೆದ ಬಾರಿ ತನ್ನ ಗರ್ಭದಲ್ಲಿಯೇ ಹುಟ್ಟಿದ ಕೆಜೆಪಿಯಿಂದ ಗಟ್ಟಿ ತೆಂಗಿನಕಾಯಿಯಿಂದ ತನ್ನ ನೆಲೆಯನ್ನೆ ಕಳೆದುಕೊಂಡಿತು. ಈ ಬಾರಿಯ ಬಂಡಾಯದ ಅಲೆಯಿಂದ ಬಿಜೆಪಿ ಚೇತರಿಸಿಕೊಳ್ಳುವುದು ಕಷ್ಟದಂತೆ ಕಾಣಿಸುತ್ತಿದೆ…

ಇನ್ನು ಬಂಡಾಯದ ಬಾವುಟ ಕೇವಲ ಕಮಲ ಪಾಳಯದಲ್ಲು ಅಲ್ಲದೆ ಕೈ ಪಾಳಯದಲ್ಲೂ ಸದ್ದು ಮಾಡುತ್ತಿದೆ. ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಂದ ವರದಿಯನ್ನು ಅನುಸರಿಸಿ ಹಾಲಿ ಶಾಸಕ ರಾಜೇಶ್ ಗೆ ಟಿಕೇಟ್ ಮಿಸ್ಸಾಗಿತ್ತು. ಅಧಿಕೃತ ವಾಗಿ ಪುಷ್ಪಾ ಲಕ್ಷಣಸ್ವಾಮಿ ಎಂಬುವರಿಗೆ ಟಿಕೇಟ್ ಘೋಷಣೆ ಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಲಾಭಿ ನಡೆಸಿದ ಎಚ್. ಪಿ. ರಾಜೇಶ್ ರವರು ಕೈ ನಾಯಕರ ಜೊತೆ ಕಸರತ್ತು ನಡೆಸಿ ಕೊನೆಗೂ ಬಿ ಫಾರಂ ತರುವಲ್ಲಿ ಯಶಸ್ವಿಯಾದರು. ಆದರೆ ಕಾಂಗ್ರೆಸ್ ನ ಜಗಳೂರು ಅಭ್ಯರ್ಥಿ ಯೆಂದೇ ಪಕ್ಷದಿಂದ‌ ಘೋಷಣೆ ಯಾದರು ಕೂಡ ಟಿಕೇಟ್ ನೀಡಲಿಲ್ಲವೆಂಬುದಾಗಿ ನೊಂದ ಪುಷ್ಪಾ ಲಕ್ಷ್ಮಣಸ್ವಾಮಿ ಕಾಂಗ್ರೆಸ್ ವಿರುದ್ಧ ಬಂಡಾಯದ ಕೈ ಬೀಸಿದ್ದಾರೆ. ಶತಾಯಗತಾಯ ಕಾಂಗ್ರೆಸ್ ನನ್ನು ಸೋಲಿಸಲೇ ಬೇಕೆಂದು ಪಣ ತೊಟ್ಟಿದ್ದಾರೆ.

ಜಿಲ್ಲೆಯಲ್ಲಿ ಎಂದೂ ಇಲ್ಲದ ಇಂತಹ ಬಂಡಾಯದ ಅಲೆಗಳ ಮಧ್ಯೆ ಯಾರು ತಮ್ಮ ಪಟ ಹಾರಿಸುವರೋ , ಜಿಲ್ಲೆಯಲ್ಲಿ ಬದಲಾವಣೆ ತರುವರೋ ಕಾದು ನೋಡಬೇಕಿದೆ‌‌.

ವಿದ್ಯಾರ್ಥಿಮಿತ್ರಕಿರಣ್    ಪತ್ರಕರ್ತ,ಮಾಗಡಿ

 

 

 

 

 

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

Leave a Reply

Your email address will not be published. Required fields are marked *

Trending

Exit mobile version