ದಿನದ ಸುದ್ದಿ

ಚುನಾವಣೆ ಹಿನ್ನೆಲೆ ; ಪರಿಷ್ಕೃತ ಮತದಾರರ ಅಂತಿಮ ಪಟ್ಟಿ ಬಿಡುಗಡೆ

Published

on

ಸುದ್ದಿದಿನ, ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪರಿಷ್ಕೃತ ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಇಂದು ಬಿಡುಗಡೆ ಮಾಡಿದೆ.

ಒಟ್ಟು 5 ಕೋಟಿ 31 ಲಕ್ಷದ 33 ಸಾವಿರದ 54ಮತದಾರರಿದ್ದು, ಈ ಪೈಕಿ 2 ಕೋಟಿ 67ಲಕ್ಷದ 28 ಸಾವಿರದ 53 ಪುರುಷ ಮತದಾರರು, 2 ಕೋಟಿ 64ಲಕ್ಷದ 74 ಮಹಿಳಾ ಮತದಾರರು, 4 ಸಾವಿರದ 927ಇತರೆ ಮತದಾರರಿರುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

6 ಲಕ್ಷದ 45ಸಾವಿರದ 140 ಪುರುಷ ಮತ್ತು 5 ಲಕ್ಷದ 26 ಸಾವಿರದ 237 ಯುವ ಮತದಾರರು, ಇತರೆ 181 ಮತದಾರರು ಸೇರಿದಂತೆ ಒಟ್ಟು 11 ಲಕ್ಷದ 71 ಸಾವಿರದ 558 ಯುವ ಮತದಾರರಿದ್ದು, 5 ಲಕ್ಷದ 71ಸಾವಿರದ 281 ದಿವ್ಯಾಂಗ ಮತದಾರರಿರುವುದಾಗಿ ಅವರು ಮಾಹಿತಿ ನೀಡಿದರು.

12 ಲಕ್ಷದ 15 ಸಾವಿರದ 920 80 ವರ್ಷಕ್ಕೂ ಮೇಲ್ಪಟ್ಟ ಮತದಾರರಿದ್ದು, 3 ಸಾವಿರದ 48 ಅನಿವಾಸಿ ಭಾರತೀಯ ಮತದಾರರಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಮತಗಟ್ಟೆಯಲ್ಲಿ ಮತದಾನದ ವೇಳೆ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿದ್ದು, ಎಲ್ಲ ಅರ್ಹ ಮತದಾರರಿಗೆ 10 ದಿನಗಳ ಮುಂಚಿತವಾಗಿ ಮತದಾರರ ಚೀಟಿ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಚುನಾವಣೆಯಲ್ಲಿ ಒಟ್ಟು 58 ಸಾವಿರದ 545ಮತ ಗಟ್ಟೆಗಳಿದ್ದು, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಕನಿಷ್ಠ ಮೂಲಸೌಕರ್ಯ ಒದಗಿಸಲಾಗುವುದು ಎಂದು ಅವರು ವಿವರಿಸಿದರು.

ಎಲ್ಲ ಜಿಲ್ಲೆಗಳಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಇವಿಎಂ ವಿವಿಪ್ಯಾಟ್ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಒಟ್ಟು 47 ಸಾವಿರದ 488 ಸೇವಾ ಮತದಾರರಿದ್ದು, ಎಲ್ಲರಿಗೂ ವಿದ್ಯುನ್ಮಾನವಾಗಿ ಅಂಚೆ ಮತಪತ್ರಗಳನ್ನು ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version