ರಾಜಕೀಯ
ರಿಲಯನ್ಸ್ ಗೆ ರಾಫೆಲ್ ಡೀಲ್: ಮೋದಿ ವಿರುದ್ಧ 35 ಸಾವಿರ ಕೋಟಿ ಅವ್ಯವಹಾರ ಆರೋಪ !
ಸುದ್ದಿದಿನ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ರಿಲಯನ್ಸ್ ಒಡೆತನದ ವೈಮಾನಿಕ ಸಂಸ್ಥೆಗೆ 36 ರಾಫೆಲ್ ವಿಮಾನ ಡೀಲ್ ನೀಡುವ ಮೂಲಕ 35 ಸಾವಿರ ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂದು ಮಾಜಿ ಸಚಿವರಾದ ಯಶ್ವಂತ್ ಸಿನ್ಹಾ ಹಾಗೂ ಅರುಣ್ ಶೌರಿ ಆರೋಪಿಸಿದ್ದಾರೆ.
ಬೋಫೋರ್ಸ್ ಹಗರಣಕ್ಕಿಂತ ದೊಡ್ಡ ಹಗರಣ ಇದಾಗಿದೆ. ಬೊಫೋರ್ಸ್ ಬಗ್ಗೆ ಬೊಟ್ಟು ಮಾಡಿ ತೋರಿಸುವ ಮೊದಲು ರಾಫೆಲ್ ಡೀಲ್ ಕುರಿತ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸಚಿವರು ಪಟ್ಟು ಹಿಡಿದರು.
ಪ್ರಧಾನಿ ನರೇಂದ್ರ ಮೋದಿ ರಾಫೆಲ್ ಒಪ್ಪಂದವನ್ನು ಏಕಪಕ್ಷೀಯವಾಗಿ ನಿರ್ಧರಿಸಿದ್ದಾರೆ. ಇದರಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಪ್ರಕ್ರಿಯೆಗಳನ್ನು ಉಲ್ಲಂಘನೆ ಮಾಡಲಾಗಿದೆ, ಈಗ ನಡೆದಿರುವ ರಕ್ಷಣಾ ಹಗರಣಗಳಿಗಿಂತ ರಾಫೆಲ್ ಹಗರಣ ದೊಡ್ಡದು ಆರೋಪಿಸಿದ್ದಾರೆ.
ಮಾಜಿ ಕೆಂದ್ರ ಸಚಿವರುಗಳ ಜೊತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಕೀಲ ಪ್ರಶಾಂತ್ ಭೂಷಣ್, ರಾಫೆಲ್ ಜೆಟ್ ಗಳಿಗಾಗಿನ ಆರ್ಡರ್ ನ್ನು ಬದಲಾವಣೆ ಮಾಡಿದ ಬೆನ್ನಲ್ಲೇ ಅಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ರಾಫೆಲ್ ಒಪ್ಪಂದದ ಬಗ್ಗೆ ಸಿಎಜಿ ತನಿಖೆ ನಡೆಯಬೇಕೆಂದು ಬಿಜೆಪಿಯ ಮಾಜಿ ಕೇಂದ್ರ ಸಚಿವರು ಹಾಗೂ ವಕೀಲ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ.
ಮೋದಿ ಸರ್ಕಾರ ಯುಪಿಎ ಸರ್ಕಾರ ಅಂತಿಮಗೊಳಿಸಿದ್ದ ಒಪ್ಪಂದವನ್ನೇ ಮುಂದುವರೆಸಿದ್ದರೆ ಈ ವೇಳೆಗೆ ಭಾರತಕ್ಕೆ 18 ರಾಫೆಲ್ ಜೆಟ್ ಗಳು ಸಿಕ್ಕಿರುತ್ತಿದ್ದವು ಉಳಿದ 108 ರಾಫೆಲ್ ಜೆಟ್ ಗಳು ಭಾರತದಲ್ಲಿ ಉತ್ಪಾದನೆಗೆ ತಯಾರಾಗಿರುತ್ತಿದ್ದವು. ಆದರೆ ಹೊಸ ಒಪ್ಪಂದದ ಪ್ರಕಾರ 36 ಜೆಟ್ ಗಳನ್ನು ಹೊಸ ಟೆಂಡರ್ ಗಳನ್ನು ಕರೆಯದೇ ರಿಲಯನ್ಸ್ ಕಂಪನಿಗೆ ನೀಡಲಾಗಿದೆ, ಇದರಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಶೌರಿ ಆರೋಪಿಸಿದ್ದಾರೆ.
ಸಚಿವಾಲಯಕ್ಕೇ ಗೊತ್ತಿರಲಿಲ್ಲ
ಮೋದಿ ಅವರು ರಾಫೆಲ್ ವಿಮಾನ ಡೀಲ್ ಅನ್ನು ರಕ್ಷಣಾ ಸಚಿವಾಲಯಕ್ಕೆ ಗೊತ್ತಿಲ್ಲದಂತೆ ನಡೆಸಿದ್ದಾರೆ. ಈ ಡೀಲ್ ಅನ್ನು ರಿಲಯನ್ಸ್ ಗೆ ಕೊಟ್ಟಿರುವುದು ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರಿಗೇ ಗೊತ್ತಿರಲಿಲ್ಲ.
ವಾಯುಪಡೆ ಅಧ್ಯಕ್ಷರು ರಾಫೆಲ್ ವಿಮಾನಗಳ ಡೀಲ್ ಕುರಿತು ಮಾತನಾಡಲು ಫ್ರಾನ್ಸ್ ಗೆ ತೆರಳಿದ್ದಾಗಲೆ ಈ ಅವ್ಯವಹಾರಗಳು ನಡೆದಿದೆ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.