ದಿನದ ಸುದ್ದಿ
ಭತ್ತ ಕಟಾವು ಯಂತ್ರಕ್ಕೆ ಪರಿಷ್ಕೃತ ಬಾಡಿಗೆ ದರ ನಿಗದಿ
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರಿನ ಹಂಗಾಮಿನಲ್ಲಿ 66046 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಸದ್ಯ ಭತ್ತದ ಬೆಳೆಯು ಬಹುತೇಕ ಕಾಳು ಬಲಿಯುವ ಹಂತದಲ್ಲಿರುವುದರಿಂದ ಇನ್ನು 2 ರಿಂದ 3 ವಾರಗಳಲ್ಲಿ ಕಟಾವು ಪ್ರಾರಂಭವಾಗಲಿದ್ದು, ಭತ್ತ ಕಟಾವು ಯಂತ್ರಗಳ ಬಾಡಿಗೆ ದರ ಪರಿಷ್ಕರಿಸಲಾಗಿದೆ.
ಜಿಲ್ಲೆಯಲ್ಲಿ ಶೇ.95% ರಷ್ಟು ರೈತರು ಭತ್ತದ ಬೆಳೆಯನ್ನು ಭತ್ತ ಕಟಾವು ಯಂತ್ರಗಳ ಮೂಲಕ ಕಟಾವು ಮಾಡುತ್ತಿದ್ದು, ತಮ್ಮ ಸಮೀಪದ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯಯವಿರುವ ಭತ್ತ ಕಟಾವು ಯಂತ್ರಗಳ ಪ್ರಯೋಜನವನ್ನು ಪಡೆಯಬಹುದಾಗಿರುತ್ತದೆ.
ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಪ್ರತಿ ಗಂಟೆಗೆ ರೂ.2,500 ರಿಂದ
ರೂ.3, 000 ಗಳವರೆಗೆ ಬಾಡಿಗೆ ಹಣ ನಿಗದಿಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ. ಆದ್ದರಿಂದ ಭತ್ತ ಕಟಾವು ಯಂತ್ರದ ಬಾಡಿಗೆ ದರವನ್ನು ಪರಿಷ್ಕರಿಸಲಾಗಿದೆ.
ಕೋವಿಡ್-19 ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ಬೆಲ್ಟ್ / ಚೈನ್ ಟೈಪ್ ಯಂತ್ರಕ್ಕೆ ಪ್ರತಿ ಗಂಟೆಗೆ ರೂ.2,250 ಹಾಗೂ ಟೈರ್ ಟೈಪ್ ಭತ್ತ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ರೂ.1,800/- ಮೀರದಂತೆ ಬಾಡಿಗೆಯನ್ನು ನಿಗದಿಪಡಿಸಿಬೇಕು. ತಪ್ಪಿದಲ್ಲಿ ಭತ್ತ ಕಟಾವು ಯಂತ್ರದ ಮಾಲೀಕರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243