ಬಹಿರಂಗ
‘ಮೀಸಲಾತಿಯನ್ನು ಹತ್ತು ವರ್ಷಕ್ಕೆ ಮಾತ್ರ ನೀಡಲಾಗಿತ್ತು, ನಂತರ ಪ್ರತಿ ಹತ್ತು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ’ ಎಂಬುದು ಸತ್ಯವಲ್ಲ..!
“ಮೀಸಲಾತಿಯನ್ನು ಹತ್ತು ವರ್ಷಕ್ಕೆ ಮಾತ್ರ ನೀಡಲಾಗಿತ್ತು, ನಂತರ ಪ್ರತಿ ಹತ್ತು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ’ ಎಂಬುದು ಸತ್ಯವಲ್ಲ”. ಕೆಲವು ಮೂರ್ಖರು ಈ ಮಾತನ್ನು ಪದೇ ಪದೇ ಹೇಳಿ ನಿಜಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಸಂವಿಧಾನದ 334 ನೇ ವಿಧಿಯು ಲೋಕಸಭೆ ಮತ್ತು ಸಂಸತ್ತುಗಳಲ್ಲಿ ಮೀಸಲಾತಿ ಪರಿಶಿಷ್ಟರಿಗೆ ಮತ್ತು ಆಂಗ್ಲೋ ಇಂಡಿಯನ್ನರಿಗೆ ಮೀಸಲು ನೀಡುವ ಅವಧಿಯ ಕುರಿತು ಹೇಳುತ್ತದೆ. ಆರಂಭದಲ್ಲಿ ಇದನ್ನು (ಈ ಮೀಸಲಾತಿ ಮಾತ್ರ) ಹತ್ತು ವರ್ಷಗಳ ಎಂದು ನಿಗದಿ ಮಾಡಿದ್ದರೂ ಇದು ಸರಿಯಾದ ಕ್ರಮವಲ್ಲ ಎಂದು ಬಹುಬೇಗನೇ ಅರ್ಥವಾಯಿತು. ಒಂದು ವೇಳೆ ಹಾಗೆ ಮಾಡಿದರೆ ಪರಿಶಿಷ್ಟರು ಸಂಸತ್ತು, ಅಸೆಂಬ್ಲಿಗಳಲ್ಲಿ ಶಾಶ್ವತವಾಗಿ ಸ್ಥಾನ ಕಳೆದುಕೊಳ್ಳುವ ವಾಸ್ತವ ಅರಿವಾಯಿತು.
ಹೀಗಾಗಿ ನಂತರದಲ್ಲಿ ಅವಧಿಯನ್ನು ತಿದ್ದುಪಡಿಯ ಮೂಲಕ ವಿಸ್ತರಿಸಲಾಗಿದ್ದು 2000 ನೇ ಇಸವಿಯಲ್ಲಿ ಮಾಡಿದ 79ನೇ ತಿದ್ದುಪಡಿಯಲ್ಲಿ ಇದನ್ನು 50 ವರ್ಷಗಳಿಗೆ ವಿಸ್ತರಿಸಲಾಗಿದೆ (2050ರ ವರೆಗೆ).
ಅಂಬೇಡ್ಕರ್ ಅವರು ಸಂಸತ್ತು, ಅಸೆಂಬ್ಲಿಗಳಲ್ಲಿ ದಲಿತರು ಸೂಕ್ತ ಪ್ರಾತಿನಿಧ್ಯ ಪಡೆಯಲಾರರು ಎಂಬ ಕಾರಣದಿಂದಲೇ ಪ್ರತ್ಯೇಕ ಮತಗಟ್ಟೆಯ ಬೇಡಿಕೆ ಇಟ್ಟದ್ದರು. ಆದರೆ ಇದರಿಂದ ಹಿಂದೂ ಧರ್ಮ ಒಡೆದು ಹೋಗುತ್ತದೆ ಎಂದು ಭಾವಿಸಿದ ಗಾಂಧೀಜಿ ಅದನ್ನು ತಿರಸ್ಕರಿಸಿ ಉಪವಾಸ ಕುಳಿತರು. ಅಂತಿಮವಾಗಿ ಇಬ್ಬರ ನಡುವೆ ಒಂದು ರಾಜಿ ಒಪ್ಪಂದ (ಪೂನಾ ಒಪ್ಪಂದ) ಆಗಿದ್ದು ಇತಿಹಾಸ. ಅಂಬೇಡ್ಕರ್ ಅವರ ಅಂದಿನ ಬೇಡಿಕೆ ಇಂದಿಗೂ ಪ್ರಸ್ತುತ ಎಂಬ ಚರ್ಚೆಯೂ ಇದ್ದು ಇಂದು ಸಂಸತ್ತು ಅಸೆಂಬ್ಲಿಗಳಲ್ಲಿ ಕಾಣುತ್ತಿರುವ ದಲಿತ ಜನಪ್ರತಿನಿಧಿಗಳ ನಡವಳಿಕೆ ನೋಡಿದರೆ ಅಥವಾ ಬಹುಸಂಖ್ಯಾತ ಸಮುದಾಯಗಳಿಗೆ ಅವರು ತಲೆಬಾಗಿಯೇ ನಡೆಯುವ ಸ್ಥಿತಿ ನೋಡಿದಾಗಲೂ ‘ಪ್ರತ್ಯೇಕ ಮತಗಟ್ಟೆ’ ಬೇಡಿಕೆ ಅಗತ್ಯ ಎನಿಸುತ್ತದೆ.
ಈಗ ಮೂಲ ವಿಷಯಕ್ಕೆ ಬರುವುದಾದರೆ, ಈ ಅಸಂಬದ್ಧವಾದ ‘ಹತ್ತು ವರ್ಷಗಳ ಕಾಲಮಿತಿ’ ಕೇವಲ ರಾಜಕೀಯ ಮೀಸಲಾತಿ ವಿಷಯದಲ್ಲಿ ಹಾಕಿದ್ದಾಗಿತ್ತು. ಆದರೆ ಕೆಲವು ಅತಿ ಬುದ್ಧಿವಂತರು ಮೀಸಲಾತಿ ವಿಷಯ ಚರ್ಚೆಗೆ ಬಂದಾಗಲೆಲ್ಲಾ ‘ಅಂಬೇಡ್ಕರ್ ಮೀಸಲಾತಿ ಹತ್ತು ವರ್ಷ ಸಾಕು ಎಂದಿದ್ದರು’ ಎಂದ ಹುಯಿಲಿಡುತ್ತಾರೆ. ಅರೆಬರೆ ತಿಳುವಳಿಕೆ ಇದ್ದವರು 334 ನೇ ವಿಧಿಯನ್ನೂ ಹೇಳುತ್ತಾರೆ. ಆದರೆ ಬೇಕೆಂದೇ ಅದರ ವಾಸ್ತವ ಮರೆಮಾಚುತ್ತಾರೆ.
ವಾಸ್ತವವಾಗಿ ಅಂಬೇಡ್ಕರ್ ಆಗಲೀ, ಸಂವಿಧಾನವಾಗಲೀ ಉದ್ಯೋಗ ಮತ್ತು ಶಿಕ್ಷಣಗಳ ಮೀಸಲಾತಿಗೆ ಎಲ್ಲೂ ಕಾಲಮಿತಿ ನಿಗದಿಪಡಿಸಿಲ್ಲ. ಮೀಸಲಾತಿ ಒಂದು ಪ್ರಾತಿನಿಧ್ಯ ವ್ಯವಸ್ಥೆ ಆಗಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಾ ಸಾಮಾಜಿಕ ಸ್ತರಗಳ ಪ್ರಾತಿನಿಧ್ಯ ಖಾಯಮ್ಮಾಗಿಯೇ ಇರಬೇಕಾಗುತ್ತದೆ. ಯಾವುದಾದರೂ ಜಾತಿ ಸಮಗ್ರ ಪ್ರಾತಿನಿಧ್ಯ ಹೊಂದಿದೆ ಎಂದು ಸ್ವತಃ ಅದಕ್ಕೆ ಮನವರಿಕೆ ಆದರೆ ಅದು ಮೀಸಲಾತಿ ಪಟ್ಟಿಯಿಂದ ತನ್ನನ್ನು ತೆಗೆಯಲು ಬೇಡಿಕೆ ಸಲ್ಲಿಸಬಹುದು. ಆದರೆ ಮೀಸಲಾತಿ ವ್ಯವಸ್ಥೆಯೇ ಎಲ್ಲದಕ್ಕೂ ರಾಮಬಾಣ ಎಂದು ಭ್ರಮಿಸಲ್ಪಟ್ಡ. ಸಂದರ್ಭದಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಪ್ರಾತಿನಿಧ್ಯ ಅಧಿಕವಾಗಿಯೇ ಇದ್ದರೂ 10%ಮೀಸಲಾತಿ ಪಡೆಯುವ ಸಾಮಾಜಿಕ ನ್ಯಾಯ ವಂಚಿಸುವ ವಂಚಕ ವ್ಯವಸ್ಥೆಯಲ್ಲಿ ಇದನ್ನೆಲ್ಲಾ ನಿರೀಕ್ಷಿಸುವುದು ಅಸಾಧ್ಯ. ಒಟ್ಟಿನಲ್ಲಿ ಸಮಾಜದಲ್ಲಿ ಎಲ್ಲಿಯವರೆಗೆ ಜಾತಿ ಆಧಾರಿತ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಜಾತಿ ಆಧಾರಿತ ಸಕಾರಾತ್ಮಕ ತಾರತಮ್ಯ (ಅಥವಾ ಮೀಸಲಾತಿ) ಇರಬೇಕು…ಇರುತ್ತದೆ…
-ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401