ದಿನದ ಸುದ್ದಿ

24 ಕೆರೆ ತುಂಬಿಸುವ ಯೋಜನೆಗೆ ರೂ.48 ಕೋಟಿಗಳ ಅನುದಾನ ಮಂಜೂರು : ಎಂ.ಪಿ ರೇಣುಕಾಚಾರ್ಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೊಸೂರು ಮತ್ತು ಬೆನಕನಹಳ್ಳಿ ಹತ್ತಿರ ತುಂಗಭದ್ರಾ ನದಿಯಿಂದ ಏತನೀರಾವರಿ ಯೋಜನೆ ಮೂಲಕ ಕ್ಷೇತ್ರದ ವ್ಯಾಪ್ತಿಯ 24 ಕೆರೆಗಳ ನೀರು ತುಂಬಿಸುವ ಯೋಜನೆಗೆ ಈಗಾಗಲೇ ಜಲ ಸಂಪನ್ಮೂಲ ಇಲಾಖೆ ವತಿಯಿಂದ ರೂ.48 ಕೋಟಿಗಳ ಅನುದಾನವನ್ನು ಸಚಿವ ಸಂಪುಟದ ಅನುಮೋದನೆಯೊಂದಿಗೆ ಸರ್ಕಾರದಿಂದ ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ವ್ಯಾಪ್ತಿಯ ಹೊಸಕೊಪ್ಪ, ಫಲವನಹಳ್ಳಿಯಿಂದ ಕ್ಷೇತ್ರದ ಗಡಿ ಗ್ರಾಮಗಳಾದ ಮುಸ್ಸೇನಾಳ, ಟಿ.ಗೋಪಗೊಂಡನಹಳ್ಳಿ, ನರಗಿನಕೆರೆ, ಚಟ್ನಹಳ್ಳಿ, ಸೋಗಿಲು, ಸವಳಂಗ, ಜೋಗ, ಜಯನಗರ, ಬೆಳಗುತ್ತಿ, ಮಲ್ಲಿಗೇನಹಳ್ಳಿ, ಹಾಗೂ ಇತರೆ ಒಟ್ಟು 61 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಟಾನಗೊಳಿಸಲು ಅನುದಾನ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು.

ಇದನ್ನೂ ಓದಿ | ಮಾಧ್ಯಮ ಉದ್ಯಮವಾಗಿರುವ ಈ ಕಾಲಘಟ್ಟದಲ್ಲಿ ಜನರೇ ಜನಾಭಿಪ್ರಾಯ ರೂಪಿಸುವ ಹೊಣೆ ಹೊರಬೇಕು : ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿ

ಈ ಯೋಜನೆಯನ್ನು ರೂ.69.27 ಕೋಟಿಗಳ ಅಂದಾಜು ವೆಚ್ಚದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವತಿಯಿಂದ ಅನುಷ್ಠಾನಗೊಳಿಸಲು ಮಾ.3 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಹೊನ್ನಾಳಿ ತಾಲ್ಲೂಕಿನ ಗೋವಿನಕೋವಿ ಹಾಗೂ ಹನುಮಸಾಗರ ಗ್ರಾಮಗಳ ಹತ್ತಿರ ತುಂಗಭದ್ರಾ ನದಿಯಿಂದ ಏತನೀರಾವರಿ ಯೋಜನೆ ಮೂಲಕ ಅವಳಿ ತಾಲ್ಲೂಕುಗಳ 94 ಕೆರೆಗಳನ್ನು ತುಂಬಿಸುವ ಯೋಜನೆಗೆ ಮಾರ್ಚ್ ಅಂತ್ಯದೊಳಗೆ ಅನುಮೋದನೆ ಪಡೆದು, ಟೆಂಡರ್ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

ಈ ಯೋಜನೆಗಳನ್ನು ನನ್ನ ಮತಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡುವ ಮೂಲಕ ಕ್ಷೇತ್ರದ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ಅಭಿವೃದ್ಧಿಗೆ ಹಾಗೂ ಕ್ಷೇತ್ರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕಾರಣಕರ್ತರಾದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರಿಗೂ ಅಭಿನಂದಿಸುತ್ತೇನೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version