ದಿನದ ಸುದ್ದಿ

ಬಂಜಾರ ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನು ರೂ.160 ಕೋಟಿಗೆ ಏರಿಕೆ ಮಾಡಿದ್ದು ನಮ್ಮ ಸರ್ಕಾರ : ಸಿದ್ದರಾಮಯ್ಯ

Published

on

ಸುದ್ದಿದಿನ ಡೆಸ್ಕ್ : ಜಾತಿ ವ್ಯವಸ್ಥೆಗೆ ಚಲನೆ ಇಲ್ಲದ ಕಾರಣ ಬದಲಾವಣೆ ಕಷ್ಟ . ಹಾಗಾಗಿ ಇಂದಿಗೂ ಮೇಲು-ಕೀಳು ಎಂಬ ಭಾವನೆ ಸಮಾಜದಲ್ಲಿ ಬಲವಾಗಿ ಬೇರೂರಿದೆ. ಇಂತಹ ತಾರತಮ್ಯದ ಸಮಾಜದಲ್ಲಿ ಘನತೆಯುತ ಬದುಕಿನ ಹಾದಿ ತೋರಿದವರು ಸಂತ ಸೇವಾಲಾಲರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಭಾನುವಾರ ಆಯೋಜಿಸಿದ್ದ ಸಂತ ಸೇವಾಲಾಲರ 282ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

1996 ರಿಂದ ಸಂತ ಸೇವಾಲಾಲರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಆಚರಣೆ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂಬ ಉದ್ದೇಶದಿಂದ ಸೇವಾಲಾಲ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಬದಲಾಯಿಸಿ ಆದೇಶಿಸಿದ್ದು ನಮ್ಮ ಸರ್ಕಾರ. ಇದು ಅವರ ವ್ಯಕ್ತಿತ್ವಕ್ಕೆ ನಾನು ಸಲ್ಲಿಸಿದ ಗೌರವ ಎಂದು ಭಾವಿಸಿದ್ದೇನೆ ಎಂದರು.

ಬಂಜಾರ ಸಮುದಾಯದ ಜನರು ವಾಸಿಸುವ ತಾಂಡಗಳು, ಹಟ್ಟಿಗಳು, ಹಾಡಿಗಳು, ಕುರುಬರ ಹಟ್ಟಿ, ನಾಯಕನ ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಕಾನೂನು ರೂಪಿಸಿ, ಜಾರಿಗೊಳಿಸಿದ್ದು ನಮ್ಮ ಸರ್ಕಾರ. ಈ ಮೂಲಕ ಅಲೆಮಾರಿ ಜನರಿಗೆ ಶಾಶ್ವತ ನೆಲೆ ಒದಗಿಸುವ ಪ್ರಯತ್ನ ಮಾಡಿದ್ದೆ ಎಂದು ನುಡಿದರು.

ಬಂಜಾರ ಅಭಿವೃದ್ಧಿ ನಿಗಮಕ್ಕೆ ನೀಡಲಾಗುತ್ತಿದ್ದ ರೂ.20 ಕೋಟಿ ಅನುದಾನವನ್ನು ರೂ.160 ಕೋಟಿಗೆ ಏರಿಕೆ ಮಾಡಿದ್ದು ಹಾಗೂ ಸೇವಾಲಾಲ್ ಪ್ರತಿಷ್ಠಾನವನ್ನು ಸ್ಥಾಪಿಸಿ, ಹೆಚ್ಚಿನ ಅನುದಾನ ಪಡೆಯಲು ಅನುಕೂಲ ಕಲ್ಪಿಸಿದ್ದು ನಮ್ಮ ಸರ್ಕಾರ. ಹಾಗಾಗಿ ಈ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ಸಂತೃಪ್ತಿ ನನಗಿದೆ ಎಂದು ನುಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version