ದಿನದ ಸುದ್ದಿ
800 ಕೋಟಿ ರೂ. ಆಸ್ತಿ ಎಲ್ಲಿ: ಅಮರಪಲ್ಲಿ ಗ್ರೂಪ್ ಮುಖ್ಯಸ್ಥನಿಗೆ ಸುಪ್ರೀಂ ತರಾಟೆ
ಸುದ್ದಿದಿನ ಡೆಸ್ಕ್: 2014ರ ಚುನಾವಣೆಯಲ್ಲಿ ನಿಮ್ಮ ಆಸ್ತಿ 847 ಕೋಟಿ ರೂ. ಇದೆ ಎಂದು ಚುನಾವಣಾ ಆಯೋಗಕ್ಕೆ ಲೆಕ್ಕ ಕೊಟ್ಟಿದ್ದೀರಿ ಹಾಗಿದ್ದರೆ ಈಗ ನಿಮ್ಮ ಬಳಿ 67 ಕೋಟಿ ರೂ. ಆಸ್ತಿ ಇದೆ ಎಂದು ಹೇಳುತ್ತಿದ್ದೀರಿ ಮಿಕ್ಕ 800 ಕೋಟಿ ರೂ. ಎಲ್ಲಿ ಹೋಯ್ತು?
ಮನೆ ಕೊಳ್ಳುವ ಆಸೆ ಹೊತ್ತಿದ್ದ ನೂರಾರು ಜನರಿಂದ ಹಣ ವಸೂಲಿ ಮಾಡಿರುವ ಹಾಗೂ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ಕೊಟ್ಟ ಆರೋಪದಲ್ಲಿ ಸಿಲುಕಿರುವ ಅಮರಪಲ್ಲಿ ಗ್ರೂಪ್ ಮುಖ್ಯಸ್ಥ ಅನಿಲ್ ಶರ್ಮಾಗೆ ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆ ಹೀಗಿದೆ.
ನೀವು ಕೊಟ್ಟ ಲೆಕ್ಕಕ್ಕೂ ಈಗಲೂ 800 ಕೋಟಿ ರೂ. ವ್ಯತ್ಯಾಸ ಬರುತ್ತಿದೆ. ಆ ಹಣ ಎಲ್ಲಿ ಹೋಯ್ತು? ಎಂದು ನ್ಯಾಯಮೂರ್ತಿಗಳು ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡರು.
ನಾನು ಶೇರ್ ಮೇಲೆ ಹಣ ಹಾಕಿದ್ದೆ ಅದರಿಂದ ಹಣ ಸಂಪಾದಿಸಿದೆ ಎಂದು ಶರ್ಮಾ ಕೊಟ್ಟ ಲೆಕ್ಕದಿಂದ ಖುದ್ದುಹೋದ ನ್ಯಾಯಮೂರ್ತಿಗಳು. ನಿಮ್ಮ ಶೇರ್‍ಗಳ ಮುಖಬೆಲೆ 700 ಕೋಟಿ ರೂ. ಇದೆ ಈ ಹಣದಿಂದ 7ಸಾವಿರ ಕೋಟಿ ರೂ. ಹೇಗೆ ಸಂಪಾದಿಸಿದಿರಿ? ಕಂಪನಿಗಳು ಈ ಪರಿಯ ಹಣವನ್ನು ಶೇರ್ ಮೇಲೆ ಕೊಡುವುದಿಲ್ಲ. ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದೀರಾ? ಹುಶಾರ್ ಎಂದು ಕೋರ್ಟ್ ವಾರ್ನಿಂಗ್ ಕೊಟ್ಟಿದೆ.
ನೀವು ಹೇಳುತ್ತಿರುವ ಮಾಹಿತಿ ಸರಿ ಇದೆ ಎಂದಾದರೆ ಮನೆ ಕೊಳ್ಳಲು ಬಯಸಿದ್ದ ಸಾವಿರಾರು ಮಂದಿಯಿಂದ ಸಂಗ್ರಹಿಸಿದ್ದ 2ಸಾವಿರ ಕೋಟಿ ರೂ. ಎಲ್ಲಿ ಹೋಯ್ತು ಲೆಕ್ಕ ಕೊಡಿ ಎಂದು ಕೋರ್ಟ್ ಪ್ರಶ್ನಿಸಿತು.
ತಮ್ಮ ಆಸ್ತಿಯ ಲೆಕ್ಕ ಕೊಡಲು ಶರ್ಮಾ ಅವರಿಗೆ 4 ದಿನಗಳ ಸಮಯಾವಕಾಶ ಕೊಟ್ಟಿದ್ದು, ಅಷ್ಟರಲ್ಲಿ ನಿಜ ಆಸ್ತಿ ಎಷ್ಟೆಂಬುದನ್ನು ಶರ್ಮಾ ಕೋರ್ಟ್ ಮುಂದೆ ಹಾಜರುಪಡಿಸಬೇಕಿದೆ.