ದಿನದ ಸುದ್ದಿ

ಆತ್ಮಕತೆ | ಭದ್ರಾವತಿಯಲ್ಲಿ ಮತ್ತೆ ಪ್ರೊ.ಬಿ. ಕೃಷ್ಣಪ್ಪನವರ ಭೇಟಿ

Published

on

  • ರುದ್ರಪ್ಪ ಹನಗವಾಡಿ

1968ರಲ್ಲಿ ಕೃಷ್ಣಪ್ಪ ಅವರನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಪಿಯುಸಿ ಓದುವಾಗ ಕಂಡಿದ್ದ ನಾನು ಅವರನ್ನು ಮತ್ತೆ ಭೇಟಿಯಾಗಿದ್ದು, ನಾನು ಮೈಸೂರಿನಲ್ಲಿ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿದಾಗ ಈ ಸಮಯದಲ್ಲಿ ಸಮಾಜವಾದಿ ಯುವಜನ ಸಭಾ ಮತ್ತು ಜಾತಿ ವಿನಾಶ ಸಮ್ಮೇಳನ ಮತ್ತು ಬೂಸಾ ಗಲಾಟೆ ಸಂದರ್ಭದಲ್ಲಿ ಅವರು ಮೈಸೂರಿಗೆ ಬಂದಾಗ ಸಿಗುತ್ತಿದ್ದೆ.

ಮಾದೇವ, ರಾಜಶೇಖರ ಕೋಟಿ, ನೆಲಮನೆ ದೇವೇಗೌಡ, ಎಂ.ಡಿ. ನಂಜುಂಡಸ್ವಾಮಿ, ಪಿ. ಮಲ್ಲೇಶ್ ಇನ್ನು ಅನೇಕರು ಸೇರಿ ಜಾತಿ ವಿನಾಶ, ಸಮಾಜವಾದ, ರೈತ ಸಂಘ ಆ ಕಾಲದಲ್ಲಿನ ಸಾರ್ವಜನಿಕ ಜೀವನದಲ್ಲಿದ್ದ ಭ್ರಷ್ಟಾಚಾರ, ವಿಶ್ವವಿದ್ಯಾಲಯದಲ್ಲಿನ ಜಾತೀಯತೆ ಎಲ್ಲವೂ ಚರ್ಚೆಗೆ ಬರುತ್ತಿದ್ದವು. ಮಹೇಶ, ನಾನು, ಭಕ್ತ, ಅರ್ಕೇಶ ಸಾಮಾನ್ಯವಾಗಿ ಕೇಳುಗರಾಗಿರುತ್ತಿದ್ದೆವು. ಮತ್ತೆ ಆ ಕ್ಷಣದಲ್ಲಿ ಆ ಸಂಘಟನೆಗಳ ಸಮಿತಿಯವರು ವಹಿಸಿದ ಕೆಲಸಗಳಿಗೆ ಸಜ್ಜಾಗಿರುತ್ತಿದ್ದೆವು.

ನಾನು ಬಿಆರ್‌ಪಿಗೆ ಬಂದಾಗ ಕೃಷ್ಣಪ್ಪನವರು ಅದಾಗಲೇ ಭದ್ರಾವತಿಯಲ್ಲಿದ್ದು, ತಮ್ಮ ಅಂತರ್‌ಜಾತಿ ಮದುವೆಯ ಕಾರಣದಿಂದಲೂ, ಸಮಾಜವಾದಿ ಹೋರಾಟಗಳಿಂದಲೂ, ವಿಶ್ವವಿದ್ಯಾಲಯ ಮತ್ತು ಕರ್ನಾಟಕದ ಸಾರ್ವಜನಿಕ ಜೀವನದಲ್ಲಿ ಪರಿಚಿತರಾಗಿದ್ದರು ಕೃಷ್ಣಪ್ಪ ಅವರ ಜೊತೆ, ಸಮಾಜವಾದಿಗಳಾಗಿದ್ದ ಶಿವಮೊಗ್ಗದ ಮುನೀರ್,
ನಿಸಾರ್ ಅಹಮದ್, ದಿವಾಕರ ಹೆಗ್ಗಡೆ, ರೈತ ಸಂಘದ ಎನ್.ಡಿ. ಸುಂದರೇಶ್, ಬಿ. ರಾಜಣ್ಣ, ಎಂ. ಚಂದ್ರಶೇಖರಯ್ಯ, ಎನ್. ಗಿರಿಯಪ್ಪ, ಡುಮ್ಮ ರಾಜಣ್ಣ ಎಂಬೆಲ್ಲ ಇನ್ನೂ ಅನೇಕ ಸ್ನೇಹಿತರಿದ್ದರು. ಅರ‍್ಯಾರೂ ಒಂದು ಜಾತಿಯ, ಇಲ್ಲವೇ ಒಂದು ಕಸುಬಿನವರಾಗಿರಲಿಲ್ಲ. ಕೃಷ್ಣಪ್ಪನವರ ಸಮಾಜವಾದಿ ಚಿಂತನೆಯಲ್ಲಿ ತೀವ್ರ ಆಸಕ್ತಿಯಿಂದ ಪಾಲ್ಗೊಂಡ ಎಲ್ಲ ಜಾತಿಯಿಂದ ಬಂದ ಸ್ನೇಹಿತರಾಗಿದ್ದರು. ನಾನು ಬಿಆರ್‌ಪಿಯಿಂದ ಬಿಡುವಿನ ಸಮಯದಲ್ಲಿ ಭದ್ರಾವತಿಗೆ ಕೃಷ್ಣಪ್ಪನವರನ್ನು ನೋಡಲು ಹೋಗುತ್ತಿದ್ದೆ. ಆಗ ಭದ್ರಾವತಿಯ ಸಮಾಜವಾದಿ ಗೆಳೆಯರನೇಕರು ಪರಿಚಯವಾಗಿ, ನನಗೂ ಅವರುಗಳು ಕೂಡ ಆತ್ಮೀಯ ಗೆಳೆಯರಾದರು.

ಕೃಷ್ಣಪ್ಪನವರ ಶ್ರೀಮತಿ ಇಂದಿರಾ ಅವರು ಅದಾಗಲೇ ಕೆ.ಪಿ.ಎಸ್.ಸಿ.ಯಿಂದ ಆಯ್ಕೆಯಾಗಿ ತಾಲ್ಲೂಕು ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಕೃಷ್ಣಪ್ಪನವರ ಮನೆಯಲ್ಲಿ ಅವರ ತಂದೆ ಬಸಜ್ಜ, ತಾಯಿ ಚೌಡಮ್ಮನವರ ಜೊತೆ ತಂಗಿ ರೇಣುಕ ಮತ್ತು ಹಿರಿಯ ತಂಗಿಯ ಮಕ್ಕಳಾದ ಮೈತ್ರೇಯಿ, ಶಿವು ಮತ್ತು ತಮ್ಮ ತಿಪ್ಪೇಶಿ ಕೂಡ ಇದ್ದು ಅವರೆಲ್ಲ ವಿವಿಧ ತರಗತಿಗಳಲ್ಲಿ ಓದುತ್ತಿದ್ದರು. ಕೃಷ್ಣಪ್ಪ ಅವರ ಮನೆಯೊಂದು ಮಿನಿ ಹಾಸ್ಟೆಲ್ ತರ ಇತ್ತು.
ಭದ್ರಾ ಕಾಲೇಜಿನಲ್ಲಿ ಶಿಸ್ತಿನ ಅಧ್ಯಾಪಕರಾಗಿದ್ದ ಕೃಷ್ಣಪ್ಪನವರು ಬಿಡುವಿನ ಸಮಯದಲ್ಲಿ ಸಮಾಜದಲ್ಲಿನ ಅಂಧ ಶ್ರದ್ಧೆ ಮತ್ತು ಮೌಢ್ಯಗಳ ಬಗ್ಗೆ, ಸಾಮಾಜಿಕ ಅಸಮಾನತೆಗಳ ಬಗ್ಗೆ ಮಿತ್ರರೊಡನೆ ಒಡಗೂಡಿ, ಸಾರ್ವಜನಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು. ಅವರ ಹೋರಾಟಗಳನ್ನು ಕ್ರಮವಾಗಿ ಜೋಡಿಸಿದರೆ ಅದೊಂದು ಪ್ರಮುಖ ಬೃಹತ್ ಗ್ರಂಥವಾಗಿ ರೂಪುಗೊಳ್ಳುತ್ತದೆ. (ಇಂದಿರಾ ಕೃಷ್ಣಪ್ಪ ಬರೆದ ಕೃತಿ ‘ನನ್ನ ಕಣ್ಣಿನ ಕ್ಯಾಮೆರಾದಲ್ಲಿ ಕೃಷ್ಣಪ್ಪ’ ಪುಸ್ತಕದಲ್ಲಿ ಸಂಕ್ಷಿಪ್ತ ಹೋರಾಟದ ವಿವರಗಳು ಇವೆ.)

ನನಗೆ ಮೈಸೂರಿನ ಹೋರಾಟದ ಗೆಳೆಯರ ಜೊತೆಗೆ ಕೃಷ್ಣಪ್ಪನವರ ಒಡನಾಟ ಮತ್ತು ಹೋರಾಟದ ಸಂಪರ್ಕ ದೊರೆತದ್ದು ಒಂದು ಸುವರ್ಣ ಅವಕಾಶವೆಂದೇ ಭಾವಿಸಿದ್ದೇನೆ. ನಮ್ಮಿಬ್ಬರ ಸಂಬಂಧ, ನನ್ನ ಮದುವೆ, ಮಕ್ಕಳು, ನಂತರ ನನ್ನೂರು ಕೇರಿಗಳಿಗೆ ವಿಸ್ತಾರಗೊಂಡು ಎರಡು ಮನೆತನಗಳ ಕಥನದಲ್ಲಿ ಒಬ್ಬರಿಗೊಬ್ಬರು ಸೇರಿ ಹೋಗಿದ್ದೇವೆ.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version