ದಿನದ ಸುದ್ದಿ
ಸಾಹಿತ್ಯ ಸಂವರ್ಧನೆಗೆ ಜೊತೆಗೂಡಿ ಶ್ರಮಿಸೋಣ : ಕಸಾಪ ಜಿಲ್ಲಾಧ್ಯಕ್ಷ ಬಿ ವಾಮದೇವಪ್ಪ ಕರೆ
ಸುದ್ದಿದಿನ, ದಾವಣಗೆರೆ : ಕನ್ನಡ ನಾಡು ನುಡಿ ಸೇವೆಗೆ ಒಂದುಗೂಡಿ ಸೇವೆ ಸಲ್ಲಿಸುವ ಸಂಕಲ್ಪದೊಂದಿಗೆ ಸಾಹಿತ್ಯ ಸಂವರ್ಧನೆಗೆ ಎಲ್ಲರೂ ಜೊತೆಗೂಡಿ ಶ್ರಮಿಸೋಣ ಎಂದು ಕನ್ನಡ ಸಾಹಿತ್ಯ ಪರಿಷತ್ ನ ದಾವಣಗೆರೆ ಜಿಲ್ಲಾಧ್ಯಕ್ಷರಾದ ಬಿ ವಾಮದೇವಪ್ಪ ಕರೆ ನೀಡಿದರು.
ದಾವಣಗೆರೆ ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗದ ವತಿಯಿಂದ ದಿನಾಂಕ : 17.04.2022 ರ ಭಾನುವಾರ ಮಧ್ಯಾಹ್ನ 3.30 ಕ್ಕೆ ದಾವಣಗೆರೆಯ ಡಾಂಗೆಪಾರ್ಕ್ ಹತ್ತಿರದ ವಿಶ್ವಬಂಧು ಕಲ್ಯಾಣ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಬಳಗದ ತಿಂಗಳ ಕವಿಗೋಷ್ಠಿ ಹಾಗೂ ಕವಿ ಸನಾವುಲ್ಲಾ ನವಿಲೇಹಾಳ್ ಅವರ ಪಂಜು ಕೃತಿ ಅವಲೋಕನ ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದ ಅವರು, ಯಾವುದೇ ಕ್ಷೇತ್ರದ ಅಭ್ಯುದಯಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.
ಪರಿಷತ್ ಗೆ ಸಮನಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ರೂಪಿಸುತ್ತಿರುವ ತಿಂಗಳ ಅಂಗಳ ಬಳಗದ ಮಾದರಿ ಕಾರ್ಯಗಳಿಗೆ ಸಾಹಿತ್ಯ ಪರಿಷತ್ ಸಹ ಸಹಕರಿಸುತ್ತದೆ ಎಂದು ಭರವಸೆ ನೀಡಿದರು.
ಶಿಕ್ಷಣ ತಜ್ಞರಾದ ಏ.ಎಚ್ ಸಾಗರ್ ಮಾತನಾಡಿ, ತಾತ್ವಿಕ ನೆಲೆಗಟ್ಟಿನ ಬರಹಗಳು ಓದುಗರನ್ನು ತಲುಪುವ ಜೊತೆ ಬರಹಗಾರರನ್ನು ಗಟ್ಟಿಯಾಗಿ ಉಳಿಸುತ್ತವೆ. ಸಾಮಾಜಿಕ ಪರಿಹಾರದ ತುಡಿತವಿರುವ ಬರಹಗಳಿಗೆ ಓದುಗರು ಅಧಿಕ ಗೌರವ ಮತ್ತು ಮನ್ನಣೆ ನೀಡುತ್ತಾರೆ ಎಂದು ಅಭಿಪ್ರಾಯಿಸಿದರು.
ಪಂಜು ಕೃತಿ ಅವಲೋಕನ ಮಾಡಿದ ಕವಿ ಡಾ ಆನಂದ್ ಋಗ್ವೇದಿ ಮಾತನಾಡಿ, ಬೆಳಕಿನ ಆಶಯ ಹೊಂದಿರುವ ಕವಿ ಸನಾವುಲ್ಲಾ ನವಿಲೇಹಾಳ್ ರವರು ಒಂಟಿ ಮರದ ಕೆಳಗೆ ಕೂತು ವ್ಯವಸ್ಥೆಯ ಕತ್ತಲೆಗೆ ಪಂಜು ಹಿಡಿದಿದ್ದಾರೆ. ಅವರ ಕವಿತೆಗಳು ಒಳಗೂ – ಹೊರಗೂ ಕೂಡ ಬೆಳಕು ಬೀರಲು ಚಡಪಡಿಸುತ್ತವೆ ಎಂದು ವಿಶ್ಲೇಷಿಸಿದರು.
ಬಳಗದ ಸಂಚಾಲಕ ಗಂಗಾಧರ ಬಿ ಎಲ್ ನಿಟ್ಟೂರ್ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಾಡಿ ತಿಂಗಳ ಅಂಗಳ ಬಳಗದ ಚಟುವಟಿಕೆಗಳ ಕುರಿತು ಪರಿಚಯಿಸಿದರು. ಕವಿ ಸನಾವುಲ್ಲಾ ನವಿಲೇಹಾಳ್ ವಂದಿಸಿದರು.
ಶಿವಯೋಗಿ ಹಿರೇಮಠ, ರಾಜಶೇಖರ್ ಗುಂಡಗಟ್ಟಿ, ಪಕ್ಕೀರೇಶ ಆದಾಪುರ, ರಾಜೇಂದ್ರ ಪ್ರಸಾದ್ ನೀಲಗುಂದ, ತಾರೇಶ್ ಅಣಬೇರು, ತಾಜುದ್ದೀನ್ ಬೇತೂರು, ನಾಗರಾಜ್ ಕೋಗಲೂರು, ಪಾಪುಗುರು, ಮಲ್ಲಮ್ಮ ನಾಗರಾಜ್ ಕವನ ವಾಚಿಸಿದರು.
ಸಾಹಿತ್ಯ ಪರಿಷತ್ ನ ರಾಘವೇಂದ್ರ ನಾಯರಿ, ದಾಗಿನಕಟ್ಟೆ ಪರಮೇಶ್ವರಪ್ಪ, ಕತೆಗಾರ ಇಂದ್ರಕುಮಾರ್, ಶ್ರೀಮತಿ ಶೈಲಜಾ, ಮಹಾದೇವಮ್ಮ, ರೇವಣ ಸಿದ್ದಪ್ಪ, ಶಾಲೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243