ದಿನದ ಸುದ್ದಿ

ದಾವಣಗೆರೆ | ಹನ್ನೊಂದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿ.ಎಸ್. ಸುಶಿಲಾದೇವಿ ಆರ್ ರಾವ್ ಆಯ್ಕೆ : ನಿಯೋಗದಿಂದ ಗೌರವ ಪೂರ್ವಕ ಆಮಂತ್ರಣ

Published

on

ಸುದ್ದಿದಿನ ,ದಾವಣಗೆರೆ : 11 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಮಾರ್ಚ್ 26 ಮತ್ತು 27 ರಂದು ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಜಿ.ಎಸ್. ಸುಶಿಲಾದೇವಿ ಆರ್ ರಾವ್ ಅವರೊಗೆ ಗೌರವಪೂರ್ವಕವಾಗಿ ಆಮಂತ್ರಣ ನೀಡಲಾಯಿತು.

ಸೋಮವಾರ ಜಿಲ್ಲಾಧ್ಯಕ್ಷ ಬಿ ವಾಮದೇವಪ್ಪ ನವರ ನೇತೃತ್ವದಲ್ಲಿ ಜಿಲ್ಲಾ ಕಸಾಪ ಪದಾಧಿಕಾರಿಗಳು ಹಾಗೂ ಎಲೆಬೇತೂರು ಗ್ರಾಮದ ಮುಖಂಡರು,ನಾಗರಿಕ ಬಂಧುಗಳ ನಿಯೋಗ ಅವರ ಮನೆಗೆ ತೆರಳಿ ಸಮ್ಮೇಳನದ ಸರ್ವಾಧ್ಯಕ್ಷತೆ ಅಲಂಕರಿಸಿ ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸಿಕೊಡಲು ಜಿಲ್ಲಾ ಕಸಾಪ ದ ಪರವಾಗಿ ಕೇಳಿಕೊಂಡು ಗೌರವಪೂರ್ವಕವಾಗಿ ಆಮಂತ್ರಣ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ನವರು ಮಾತನಾಡಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ಈ ಬಾರಿ ಮಹಿಳೆಯರಿಗೆ ಸರ್ವಾಧ್ಯಕ್ಷತೆ ಸ್ಥಾನ ವಹಿಸಿಕೊಡಬೇಕೆಂದು ವಿಷಯ ಪ್ರಸ್ತಾಪಿಸಲಾಯಿತು. ತಕ್ಷಣ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯ ರೆಲ್ಲರೂ ಅತ್ಯಂತ ಸಂತೋಷದಿಂದ ಸರ್ವಾನುಮತದಿಂದ ತಮ್ಮ ಹೆಸರನ್ನು ಸೂಚಿಸಿದ್ದು ಅತ್ಯಂತ ಸಂತೋಷಕರ ಎಂದರು.

ಸರ್ವಾಧ್ಯಕ್ಷರ ಕನ್ನಡದ ಅನುಪಮ ಸೇವೆಯನ್ನು ಶ್ಲಾಘಿಸುತ್ತಾ ದಾವಣಗೆರೆ ತಾಲೂಕಿನವರಾದ ತಾವುಗಳು ತಾಲೂಕಿಗೆ ಹೆಮ್ಮೆ ತರುವಂತಹ ಸೊಸೆಯಾಗಿದ್ದೀರಿ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ತಮ್ಮಿಂದ ಸುಮಾರು 10 ಕಾದಂಬರಿಗಳು, 50 ಬಿಡಿ ಲೇಖನಗಳು, ಕಥೆಗಳು, ನಾಟಕಗಳು ಹೊರಬಂದಿರುವುದು ತಮ್ಮ ಸಾಹಿತ್ಯ ಕೃಷಿಗೆ ಹಿಡಿದ ಕೈಗನ್ನಡಿ ಗಳಾಗಿವೆ. ತಮ್ಮ ನಾಟಕಗಳು ಬಾನುಲಿಯಲ್ಲಿ ಬಿತ್ತರಗೊಂಡಿರುವುದು ನಿಜಕ್ಕೂ ಸಂತೋಷಕರ ಎಂದು ತಿಳಿಸಿದರು.

ನಿಮ್ಮ ಆಯ್ಕೆ ಅತ್ಯಂತ ಸಮರ್ಥನೀಯ ಹಾಗೂ ಪ್ರಸ್ತುತ ದಿನಮಾನಗಳಲ್ಲಿ ಮಹಿಳಾ ಲೋಕಕ್ಕೊಂದು ಗೌರವದ ಸಂಕೇತವಾಗಿದೆ ಎಂದು ತಿಳಿಸಿದರು.

ಎಲೆಬೇತೂರು ಗ್ರಾಮದಲ್ಲಿ ಸಮ್ಮೇಳನದ ಆಯೋಜನೆಗೆ ಸೂಕ್ತ ಸ್ಪಂದನೆ ದೊರಕಿದ್ದು, ಈಗಾಗಲೇ ಅಲ್ಲಿನ ಮುಖಂಡರು, ನಾಗರಿಕ ಬಂಧುಗಳು, ಸುತ್ತಮುತ್ತಲ ಗ್ರಾಮಸ್ಥರು ತಕ್ಷಣ ಸಮ್ಮೇಳನದ ಬಗ್ಗೆ ಅತ್ಯಂತ ಉತ್ಸಾಹದಿಂದ ಕಾರ್ಯಪ್ರವೃತ್ತರಾಗಿರುವುದು ಕನ್ನಡ ನಾಡು-ನುಡಿಯ ಬಗ್ಗೆ ಅವರಲ್ಲಿರುವ ಪ್ರೇಮವನ್ನು ತೋರಿಸುತ್ತದೆ.

ಎಲೆಬೇತೂರು ಗ್ರಾಮದ ಮುಖ್ಯಸ್ಥರು, ಜಿಲ್ಲಾ ಕಸಾಪ ನಿಯೋಗ ಸಿರಿಗೆರೆಗೆ ತೆರಳಿ ಪರಮಪೂಜ್ಯ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ರನ್ನು ಸಮ್ಮೇಳನದ ಉದ್ಘಾಟನೆಗೆ ಆಮಂತ್ರಿಸಿದ್ದು, ಪರಮಪೂಜ್ಯರು ಸಂತೋಷದಿಂದ ಆಗಮಿಸಲು ಒಪ್ಪಿಗೆ ಸೂಚಿಸುತ್ತಾರೆ ಎಂದು ಜಿಲ್ಲಾಧ್ಯಕ್ಷ ಬಿ ವಾಮದೇವಪ್ಪ ನವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಕಸಾಪ ಜಿಲ್ಲಾಧ್ಯಕ್ಷ ಎ.ಆರ್.ಉಜ್ಜಿನಪ್ಪ, ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ ಮಾತನಾಡಿ ಶ್ರೀಮತಿ ಜಿ.ಎಸ್ ಸುಶಿಲಾದೇವಿ ಆರ್ ರಾವ್ ರವರ ಆಯ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ,, ಕೋಶಾಧ್ಯಕ್ಷರಾದ ಕೆ. ರಾಘವೇಂದ್ರ ನಾಯರಿ, ದಾವಣಗೆರೆ ತಾಲೂಕು ಕಸಾಪ ಅಧ್ಯಕ್ಷರಾದ ಶ್ರೀಮತಿ ಎ.ಜಿ.ಸುಮತಿ ಜಯಪ್ಪ, ಜಿಲ್ಲಾ ಪದಾಧಿಕಾರಿಗಳಾದ ಬಿ.ಎಂ ಬೈರೇಶ್ವರ, ಶ್ರೀಮತಿ ಸತ್ಯಭಾಮ, ಶ್ರೀಮತಿ ರುದ್ರಾಕ್ಷಿ ಬಾಯಿ, ಶ್ರೀಮತಿ ಎಸ್.ಎಂ.ಮಲ್ಲಮ್ಮ, ಹಾಗೂ ತಾಲೂಕು ಪದಾಧಿಕಾರಿಗಳಾದ ಪರಮೇಶ್ವರಪ್ಪ ದಾಗಿನಕಟ್ಟೆ, ಶಿವಕುಮಾರ್ ಆರ್. ಉಪಸ್ಥಿತರಿದ್ದರು.

ಜೊತೆಗೆ ಎಲೆಬೇತೂರು ಗ್ರಾಮದ ಹೆಚ್. ಬಸವರಾಜಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ.ಸಿ. ಸುಮಾ ಬಿ.ವಿರುಪಾಕ್ಷಪ್ಪ, ಮಂಗಳಾ ಷಡಕ್ಷರಪ್ಪ, ಹಂಚಿನಮನೆ ಗಂಗಪ್ಪ, ಎಂ ಷಡಾಕ್ಷರಪ್ಪ ಬೇತೂರು, ಟಿ ಅಂಬಣ್ಣ ಕ್ಷೇತ್ರಶಿಕ್ಷಣಾಧಿಕಾರಿಗಳು ದಾವಣಗೆರೆ ಉತ್ತರ ವಲಯ ಇವರುಗಳು ಉಪಸ್ಥಿತರಿದ್ದು ಸರ್ವಾಧ್ಯಕ್ಷರಾದ ಜಿಎಸ್ ಸುಶಿಲಾದೇವಿ ಆರ್ ರಾವ್ ರವರಿಗೆ ಅತ್ಯಂತ ಸಂತೋಷದಿಂದ ಆಮಂತ್ರಣ ನೀಡಿದರು.

ಈ ಸಂದರ್ಭದಲ್ಲಿ ಅಧ್ಯಾಪಕ ಸಿ.ಜಿ. ಜಗದೀಶ್ ಕೂಲಂಬಿ, ಡಾ. ಆನಂದ ಋಗ್ವೇದಿ, ಶ್ರೀಮತಿ ಎಚ್ಆರ್ ವಿನುತಾ, ಚಿರಂಜೀವಿ, ಅನಿಕೇತ್ ಅಶುತೋಷ್ ರವರುಗಳು ಭಾಗಿಗಳಾಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version