ದಿನದ ಸುದ್ದಿ

ಸಮಷ್ಠಿ ಸಮನ್ವಯತೆಯಿಂದ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ : ಹೆಚ್.ಮಂಜುನಾಥ್

Published

on

ಸುದ್ದಿದಿನ,ಚಿತ್ರದುರ್ಗ: ಸಮಷ್ಠಿ ಮತ್ತು ಸಮನ್ವಯತೆಯಿಂದ ಕೆಲಸ ನಿರ್ವಹಿಸಿದಾಗ ನಮ್ಮ ವೃತ್ತಿಯಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಸಿ.ಟಿ.ಇ ಸಹನಿರ್ದೇಶಕ ಹೆಚ್.ಮಂಜುನಾಥ್ ಹೇಳಿದರು.

ನಗರದ ಡಯಟ್‌ನಲ್ಲಿ ಡಿ.ಎಸ್.ಇ.ಆರ್.ಟಿ ಕಚೇರಿಗೆ ವರ್ಗಾವಣೆಯಾಗಿರುವ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ಅವರಿಗೆ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಡಯಟ್‌ನ ಶೈಕ್ಷಣಿಕ ಚಟುವಟಿಕೆಗಳ ಕುರಿತ ‘ಪ್ರತಿಬಿಂಬ’ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಪ್ರೀತಿಸಬೇಕು. ಶ್ರದ್ಧೆ, ಸಮಯಪ್ರಜ್ಞೆ, ಸಮರ್ಪಣಾಭಾವ ನಮ್ಮ ವೃತ್ತಿಯ ಬೆಳವಣಿಗೆಗೆ ಅನುಕೂಲವಾಗುತ್ತದೆ. ಶೈಕ್ಷಣಿಕವಾಗಿ ಆಳವಾದ ಜ್ಞಾನ ಹೊಂದಿರುವ ಪ್ರಸಾದ್ ರವರು ಕ್ರಿಯಾಶೀಲ ಪ್ರಾಚಾರ್ಯರಾಗಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಡಿ.ಡಿ.ಪಿ.ಐ ರವಿಶಂಕರ ರೆಡ್ಡಿ ಮಾತನಾಡಿ, ನಮ್ಮ ಭಾವನೆಗಳು ಒಗ್ಗೂಡಿದಾಗ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ. ಉಪನಿರ್ದೇಶಕರು(ಆಡಳಿತ)ಮತ್ತು ಉಪನಿರ್ದೇಶಕರು(ಅಭಿವೃದ್ಧಿ) ಈ ಎರಡೂ ಹುದ್ದೆಗಳು ಒಂದೇ ರಥದ ಎರಡು ಚಕ್ರಗಳಿದ್ದಂತೆ. ನಮ್ಮ ಜಿಲ್ಲೆಯಲ್ಲಿ ಡಯಟ್ ಪ್ರಾಚಾರ್ಯ ಪ್ರಸಾದ್ ಮತ್ತು ನಾವು ಸಮನ್ವಯತೆಯಿಂದ ಒಂದೇ ಮನಸ್ಸಿನಿಂದ ಕೆಲಸ ನಿರ್ವಹಿಸಿರುವುದರಿಂದ ಶೈಕ್ಷಣಿಕ ಪ್ರಗತಿ ಉತ್ತಮವಾಗಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ಮಾತನಾಡಿ, ಸಂಸ್ಥೆಯ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರ ನಡುವೆ ಉತ್ತಮ ಬಾಂಧವ್ಯವಿರಬೇಕು. ಕಚೇರಿಯಲ್ಲಿ ಕೌಟುಂಬಿಕ ವಾತಾವರಣ ನಿರ್ಮಾಣ ಮಾಡಿಕೊಂಡಾಗ ಶೈಕ್ಷಣಿಕ ಚಟುವಟಿಕೆಗಳು ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ. ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ತಮಗೆ ನೀಡಿದ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸುವ ಮೂಲಕ ನನಗೆ ಸಹಕಾರ ನೀಡಿದ್ದರಿಂದ ಡಯಟ್‌ನ ಶೈಕ್ಷಣಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದರು.

ಉಪ ಪ್ರಾಂಶುಪಾಲ ಡಿ.ಆರ್.ಕೃಷ್ಣಮೂರ್ತಿ, ಹಿರಿಯ ಉಪನ್ಯಾಸಕರಾದ ಎಸ್.ಸಿ.ಪ್ರಸಾದ್, ಸಯ್ಯದ್ ಮೋಸಿನ್, ಹಾಲಮೂರ್ತಿ, ಮಹಮದ್ ಅಯೂಬ್ ಸೊರಬ್, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಎನ್.ರಾಘವೇಂದ್ರ, ಕೆ.ಜಿ.ಪ್ರಶಾಂತ್, ಕೆ.ಎಂ.ನಾಗರಾಜು, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್, ಆರ್.ಲಿಂಗರಾಜು, ಕಚೇರಿ ಅಧೀಕ್ಷಕಿ ಗೀತಾ, ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಹನುಮಂತಪ್ಪ, ತಿಮ್ಮಯ್ಯ, ಪ್ರೌ.ಶಾಲಾ ಶಿ.ಸಂಘದ ತಾಲೂಕು ಅಧ್ಯಕ್ಷö ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀನಿವಾಸ್, ನಾಗಭೂಷಣ್, ವೆಂಕಟೇಶ್, ಬಿ.ಆರ್.ಸಿ ಗಳಾದ ಸಂಪತ್‌ಕುಮಾರ್, ಸುರೇಂದ್ರ ನಾಯಕ್, ಶ್ರೀನಿವಾಸ್, ತಿಪ್ಪೇರುದ್ರಪ್ಪ, ಮಂಜಣ್ಣ, ತಿಪ್ಪೇಸ್ವಾಮಿ, ಡಯಟ್ ಕಚೇರಿ ಸಿಬ್ಬಂದಿ ವರ್ಗದವರು ಮತ್ತಿತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version