ಕ್ರೀಡೆ

ಸಂಜೆಯ ಪ್ರಮುಖ ಸುದ್ದಿಗಳು

Published

on

ಸಂಜೆಯ ಪ್ರಮುಖ ಸುದ್ದಿಗಳು

  1. ರಾಜ್ಯ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ. ಎರಡು ಪದವಿಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ದಕ್ಷಿಣ ಪದವೀಧರ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಸಕಲ ಸಿದ್ದತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
  2. ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಇರುವ ಕುತೂಹಲ ತಣಿಸಲು ಹಾಗೂ ಅವರಲ್ಲಿ ಆವಿಷ್ಕಾರದ ಪ್ರವೃತ್ತಿ ಬೆಳೆಸಲು ಕೇಂದ್ರ ಸರ್ಕಾರ, ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಆರಂಭಿಸಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಹೊನ್ನಾಳಿ ತಾಲೂಕು ಎಚ್.ಕಡದಕಟ್ಟೆಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಟಿಂಕರಿಂಗ್ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.
  3. ವಿಶ್ವ ಯೋಗ ದಿನದ ಅಂಗವಾಗಿ ಇಂದು ವಿಶ್ವ ಪಾರಂಪರಿಕ ತಾಣ ಹಂಪಿಯ ಕಮಲ ಮಹಲ್ ಬಳಿ ಯೋಗ್ಯಾಭಾಸ ನಡೆಸಲಾಯಿತು. ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆ, ಆಯುಷ್ ಇಲಾಖೆ, ಶ್ವಾಸ ಯೋಗ ಸಂಸ್ಥೆ ಹಾಗೂ ಪತಂಜಲಿ ಯೋಗ ಸಮಿತಿ ಇದನ್ನು ಆಯೋಜಿಸಿತ್ತು. ಯೋಗಾಭ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಯೋಗಾಸನದ ಮಹತ್ವ ಆಚರಣೆಯ ವಿಧಾನ ಮತ್ತು ಪ್ರಯೋಜನವನ್ನು ಮನವರಿಕೆ ಮಾಡಿದರು.
  4. ರೈತರ ಆದಾಯ ಕಾಪಾಡುವುದರೊಂದಿಗೆ ದೇಶೀಯ ಬೇಡಿಕೆ ಪೂರೈಸುವ ಪ್ರಮುಖ ಉದ್ದೇಶದಿಂದ ಸರ್ಕಾರ, ಕಳೆದ ತಿಂಗಳು ಗೋಧಿ ರಫ್ತಿನ ಮೇಲೆ ನಿರ್ಬಂಧ ಹೇರಿದೆ ಎಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ, ಎಪಿಇಡಿಎ ಅಧ್ಯಕ್ಷರಾದ ಎಂ.ಅಂಗಮುತು ಹೇಳಿದ್ದಾರೆ.
  5. ಅಂತಾರಾಷ್ಟ್ರೀಯ ಯೋಗ ದಿನದಂದು ಆಯೋಜಿಸಲಾಗುವ ಕಾರ್ಯಕ್ರಮಗಳಲ್ಲಿ 25 ಕೋಟಿ ಜನರು ಭಾಗವಹಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಆಯುಷ್ ಸಚಿವ ಸರ್ಬಾನಂದ್ ಸೋನೊವಾಲ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ದೇಶದ 75 ಪ್ರಮುಖ ಸ್ಥಳಗಳಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
  6. ವಿಶ್ವ ಬಾಲ ಕಾರ್ಮಿಕ ತಡೆ ದಿನವನ್ನು ಗೌರವಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಎನ್‌ಸಿಪಿಸಿಆರ್ ಇಂದಿನಿಂದ ಬಾಲ ಕಾರ್ಮಿಕ ನಿರ್ಮೂಲನೆ ಸಪ್ತಾಹವನ್ನು ದೇಶದ 75 ಸ್ಥಳಗಳಲ್ಲಿ ಆಚರಿಸುತ್ತಿದೆ. ಸಪ್ತಾಹದ ವೇಳೆ, ಕೂಲಿ ಕೆಲಸ, ಗುಜರಿ ಮತ್ತು ಆಟೋಮೊಬೈಲ್ ಮಾರುಕಟ್ಟೆಗಳಲ್ಲಿನ ಮಕ್ಕಳ ರಕ್ಷಣಾ ಕಾರ್ಯ ನಡೆಯಲಿದೆ.
  7. ಹಾವೇರಿ ಜಿಲ್ಲ್ಲೆಯಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ತಂತ್ರಾಂಶದಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಹಾನಗಲ್ ನಲ್ಲಿಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ ವರ್ಷದ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆಗಳಾದ ಅಡಕೆ, ಶುಂಠಿ ಮತ್ತು ಹಸಿಮೆಣಸಿನಕಾಯಿ ಬೆಳೆಗಳಿಗೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
  8. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ದೇಶದ 80 ಕೋಟಿ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿ 8 ವರ್ಷ ಪೂರೈಸಿದ ಹಿನ್ನೆಲೆ ಹೊನ್ನಾಳಿ ತಾಲ್ಲೂಕಿನ ದಿಡಗೂರು ಗ್ರಾಮದಲ್ಲಿ ಸರ್ಕಾರದ ಅಭಿವೃದ್ಧಿ ಯೋಜನೆಗಳ ಸಂದೇಶವುಳ್ಳ ಕರಪತ್ರಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
  9. ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ, ಸಿಇಟಿ ಇದೇ 16 ಮತ್ತು 17 ರಂದು ಹಾವೇರಿ ಜಿಲ್ಲೆಯ 7 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ದತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಹೇಳಿದ್ದಾರೆ.
  10. ಪ್ರಧಾನಿ ನರೇಂದ್ರಮೋದಿ ಈ ತಿಂಗಳ 14 ರಂದು ಮಹಾರಾಷ್ಟ್ರಗೆ ಭೇಟಿ ನೀಡಲಿದ್ದಾರೆ. ಪುಣೆಯ ದೆಹು ನಲ್ಲಿ ಜಗದ್ಗುರು ಶ್ರೀಸಂತ್ ತುಕಾರಾಂ ಮಹಾರಾಜ್ ದೇವಸ್ಥಾನ, ಮುಂಬೈ ರಾಜಭವನದಲ್ಲಿನ ಕ್ರಾಂತಿಕಾರಿಗಲ ಗ್ಯಾಲರಿ ಹಾಗೂ ಜಲ ಭೂಷಣ್ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಆ ನಂತರ, ಬಾಂದ್ರದಲ್ಲಿನ ಮುಂಬೈ ಸಮಾಚಾರ್ ದ್ವಿಶತಾಬ್ದಿ ಮಹೋತ್ಸವ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ.
  11. ಗ್ರಾಮೀಣಾಭಿವೃದ್ಧಿಯ ಆಯಾಮವು ಹಳ್ಳಿಗಳನ್ನು ಅನುಕೂಲಕರಗೊಳಿಸುವುದಾಗಿದೆ. ಇದಕ್ಕಾಗಿ ಕುಗ್ರಾಮಗಳ ಸಂಪರ್ಕ ಅಗತ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಗುಜರಾತ್‌ನ ಗ್ರಾಮೀಣ ನಿರ್ವಹಣಾ ಸಂಸ್ಥೆಯ 41ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯುತ್ ಸಂಪರ್ಕವಿಲ್ಲದ ಗ್ರಾಮಗಳಿಗೆ ಸರ್ಕಾರ ಸಂಪರ್ಕ ಒದಗಿಸಿದೆ. ದೇಶವು ಪರಿಪೂರ್ಣ ಮತ್ತು ಸ್ವತಂತ್ರವಾಗಿರಬೇಕಾದರೆ, ಹಳ್ಳಿಗಳ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.
  12. ಮೆಕ್ಸಿಕೋದಲ್ಲಿಂದು ನಡೆದ ವೈಟ್ ಲಿಫ್ಟಿಂಗ್ ಯುವ ವಿಶ್ವ ಚಾಂಪಿಯನ್ ಶಿಪ್‌ನ 40 ಕೆ.ಜಿ. ವಿಭಾಗದಲ್ಲಿ ಭಾರತದ ಆಕಾಂಕ್ಷ ವೈವಹರೆ ಬೆಳ್ಳಿ ಪದಕ ಗೆದ್ದಿದ್ದಾರೆ. ಕೇಂದ್ರ ಯುವಜನ ವ್ಯವಹಾರಗಳು ಹಾಗು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಆಕಾಂಕ್ಷ ಅವರನ್ನು ಅಭಿನಂದಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version