ಕ್ರೀಡೆ

ಶನಿವಾರ | ಬೆಳಗಿನ ಪ್ರಮುಖ ಸುದ್ದಿಗಳು

Published

on

ಶನಿವಾರ | ಬೆಳಗಿನ ಪ್ರಮುಖ ಸುದ್ದಿಗಳು

  1. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಿತ್ರದುರ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಹಿರಿಯೂರು ತಾಲ್ಲೂಕಿನ ಧರ್ಮಾಪುರ ಕೆರೆ ಮತ್ತು ಇತರೆ 7 ಕೆರೆಗಳಿಗೆ ವೇದಾವತಿ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ಕೆರೆಗಳಿಗೆ ತುಂಬಿಸುವ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಹಿರಿಯೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
  2. ಬೆಂಗಳೂರು ನಗರದ ಸರ್ಕಾರಿ ಆರೋಗ್ಯ ಸೇವಾ ವ್ಯವಸ್ಥೆಯನ್ನು ಉತ್ತಮ ಪಡಿಸುವ ಅಗತ್ಯವಿದ್ದು ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಬೆಂಗಳೂರು ನಗರ ಆರೋಗ್ಯ ಸೇವಾ ವಿಭಾಗವನ್ನು ರಚಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಂಗಳೂರಿನಲ್ಲಿ ನಿನ್ನೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
  3. ಕೃಷಿ ಮತ್ತು ಜಲಾನಯನ ಇಲಾಖೆಯಿಂದ ನಾಳೆ ನಡೆಯಲಿರುವ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೋಟಿ ವೃಕ್ಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ರಾಜ್ಯದ ಎಲ್ಲ ರೈತರ ಹೊಲದ ಬದುವಿನಲ್ಲಿ ಹಾಗೂ ಸರ್ಕಾರಿ ಇಲಾಖೆಯ ಅವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಬೇಕು ಎಂದು ಸಚಿವರು ಜನತೆಗೆ ಮನವಿ ಮಾಡಿದ್ದಾರೆ.
  4. ರೈತರ ಆದಾಯ ಹೆಚ್ಚಿಸಲು ಸರ್ಕಾರ ಹಲವಾರು ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನಂತೆ ಗ್ರಾಮಗಳನ್ನು ಬಲಪಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
  5. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನವದೆಹಲಿಯಲ್ಲಿ ನಿನ್ನೆ ನಡೆದ ಉನ್ನತಮಟ್ಟದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗೌರ್‍ನರ್ ಮನೋಜ್ ಸಿನ್ಹಾ ಮತ್ತು ಹಿರಿಯ ಅಧಿಕಾರಿಗಳು ಪಾಲಗೊಂಡಿದ್ದು, ಕಳೆದ ತಿಂಗಳೂ ಸಹ ಅಮಿತ್ ಶಾ ಕೇಂದ್ರಾಡಳಿತ ಪ್ರದೇಶದಲ್ಲಿನ ಭದ್ರತಾ ಪರಿಸ್ಥಿತಿ ಮತ್ತು ಅಮರನಾಥ್ ಯಾತ್ರೆಯ ಸಿದ್ಧತೆಗಳ ಕುರಿತು ಪರಿಶೀಲನಾ ಸಭೆ ನಡೆಸಿದ್ದರು.
  6. ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ ಗುಲಬರ್ಗಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೈಸಿಕಲ್ ರ್‍ಯಾಲಿಗೆ ಕಲಬುರಗಿಯ ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ್ ನಿನ್ನೆ ಚಾಲನೆ ನೀಡಿದರು. ನಂತರ ಅವರು ಬೈಸಿಕಲ್ ಬಳಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
  7. ರಾಜ್ಯದ ಎಲ್ಲಾ ಸಾರಿಗೆ ನಿಗಮಗಳು ಕಾರ್ಯಾಚರಣೆ ಮತ್ತು ಇತರ ಮೂಲಗಳಿಂದಲೂ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸಾರಿಗೆ ನಿಗಮಗಳ ಪುನಃಶ್ಚೇತನಕ್ಕೆ ರಚಿಸಲಾದ ತಜ್ಞರ ಸಮಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.
  8. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2ಸಾವಿರ 993 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು ಎಂದು ಪೌರಾಡಳಿತ ಖಾತೆ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ನಿನ್ನೆ ಮಾತನಾಡಿದ ಅವರು 291 ನಗರ ಸ್ಥಳಿಯ ಸಂಸ್ಥೆಗಳ ಅಮೃತ ನಗರೋತ್ಥಾನ ಯೋಜನೆಯಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.
  9. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 10ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭಾ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ. ಬಿಜೆಪಿಯಿಂದ ಮೂವರು, ಕಾಂಗ್ರೆಸ್‌ನಿಂದ ಇಬ್ಬರು ಮತ್ತು ಜೆಡಿಎಸ್‌ನಿಂದ ಓರ್ವ ಅಭ್ಯರ್ಥಿ ಕಣದಲ್ಲಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ನಿನ್ನೆ ಯಾವುದೇ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯದೇ ಇರುವ ಹಿನ್ನೆಲೆಯಲ್ಲಿ ಚುನಾವಣೆ ಅನಿವಾರ್ಯವಾಗಿದೆ.
  10. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಾಗಲಕೋಟೆಯಲ್ಲಿ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ಸಹಯೋಗದಲ್ಲಿ ನಾಳೆ ಬೃಹತ್ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ವನಮಹೋತ್ಸವ ಕಾರ್ಯಕ್ರಮಕ್ಕೆ ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಎಂ.ಇಂದ್ರೇಶ್ ಚಾಲನೆ ನೀಡಲಿದ್ದಾರೆ. ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
  11. ಸಮೃದ್ಧ ಭಾರತ – ಸ್ವಾಸ್ಥ್ಯ ಭಾರತ ನಿರ್ಮಾಣ ಮಾಡುವ ಮೂಲಕ 2030ರ ವೇಳೆಗೆ ಕ್ಷಯರೋಗ ಮುಕ್ತ ದೇಶವನ್ನಾಗಿಸಲು ಗುರಿ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಆರೋಗ್ಯ ಇಲಾಖೆಯ ಜತೆಗೆ ಸ್ವಯಂ ಸೇವಾ ಸಂಸ್ಥೆಗಳು, ಎಲ್ಲ ಹಂತದ ಚುನಾಯಿತ ಪ್ರತಿನಿಧಿಗಳು ಮುಂದೆ ಬಂದು ಈ ಗುರಿ ತಲುಪಲು ಸಹಕಾರ ನೀಡಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ಮನವಿ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version