ದಿನದ ಸುದ್ದಿ
ಯಲ್ಲಮ್ಮನ ಸವದತ್ತಿ ಕ್ಷೇತ್ರಾಭಿವೃದ್ಧಿಗೆ ಆದ್ಯತೆ : ಸಿಎಂ ಸಿದ್ದರಾಮಯ್ಯ ಭರವಸೆ
ಸುದ್ದಿದಿನಡೆಸ್ಕ್:ಯಲ್ಲಮ್ಮನ ಗುಡ್ಡವಿರುವ ಸವದತ್ತಿ ಕ್ಷೇತ್ರಕ್ಕೆ ಪ್ರತಿವರ್ಷ ಕೋಟ್ಯಾಂತರ ಭಕ್ತಾದಿಗಳು ಭೇಟಿ ನೀಡುತ್ತಾರೆ. ಅವರಿಗೆ ಉತ್ತಮ ವಸತಿ ಹಾಗೂ ಸುಗಮ ದರ್ಶನಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಲ್ಲಮ್ಮನ ಗುಡ್ಡದಲ್ಲಿ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ ಎಂದರು.
ಯಲ್ಲಮ್ಮನ ಗುಡ್ಡಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮತ್ತು ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗೋವಾದಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅವರಿಗೆ ಉತ್ತಮ ವಸತಿ ಸೌಲಭ್ಯ ಕಲ್ಪಿಸಲು ದೇವಸ್ಥಾನ ಮತ್ತು ಸುತ್ತಮುತ್ತಲಿರುವ ಸರ್ಕಾರಿ ಜಮೀನು ಒತ್ತುವರಿಯನ್ನು ನಿಯಂತ್ರಿಸಲು ತಡೆಗೋಡೆ ನಿರ್ಮಿಸಬೇಕು ಎಂದರು.
ಸವದತ್ತಿಯಲ್ಲಿ ವ್ಯಾಪಾರ ವಹಿವಾಟುದಾರರಿಗೆ ಪ್ರತ್ಯೇಕ ಜಾಗವನ್ನು ಗುರುತಿಸಬೇಕು. ಉತ್ತಮ ಸೌಲಭ್ಯ ಒದಗಿಸಿದಲ್ಲಿ, ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ. ತಿರುಪತಿ, ಧರ್ಮಸ್ಥಳ ಕ್ಷೇತ್ರಗಳ ಮಾದರಿಯಲ್ಲಿ ಸವದತ್ತಿಯಲ್ಲೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಹುಣ್ಣಿಮೆ ದಿನಗಳಲ್ಲಿ ಸವದತ್ತಿಗೆ ಚಕ್ಕಡಿಗಳಲ್ಲಿ ಜನರು ಆಗಮಿಸುತ್ತಾರೆ. ಅವರ ಜಾನುವಾರುಗಳಿಗೆ ಮೇವು ಒದಗಿಸಲು ಮೇವು ಬ್ಯಾಂಕ್ ಸ್ಥಾಪಿಸಬೇಕು. ಈ ಎಲ್ಲ ಸೌಲಭ್ಯಗಳಿಗೆ ನೆರವಾಗಲು ಮುಂದಾಗುವ ದಾನಿಗಳು ಮತ್ತು ಸಂಸ್ಥೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರ ಸಚಿವರು, ಅಧಿಕಾರಿಗಳು ಉಪಸ್ಥಿತರಿದ್ದರು. ಸವದತ್ತಿ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಡೆಯುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243