ದಿನದ ಸುದ್ದಿ

ಬನ್ನೇರುಘಟ್ಟ ಉದ್ಯಾನವನದ ಸೂಕ್ಷ್ಮ ವಲಯ ಕ್ಕೆ ಕತ್ತರಿ; ಗಣಿಲೂಟಿ, ರಿಯಲ್ ಎಸ್ಟೇಟ್ ಲಾಬಿ, ಯಡಿಯೂರಪ್ಪ ನಿಮ್ಮ ಬದ್ಧತೆ ಯಾರಿಗೆ ? : ಸಿದ್ದರಾಮಯ್ಯ ಆಕ್ರೋಶ

Published

on

ಸುದ್ದಿದಿನ,ಬೆಂಗಳೂರು : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಇಎಸ್‌ಜೆಡ್ ವ್ಯಾಪ್ತಿಯನ್ನು ಕಡಿತಗೊಳಿಸಿದ ಕೇಂದ್ರ ಸರ್ಕಾರದ ಅಧಿಸೂಚನೆ ಕಳವಳಕಾರಿ. ಪರಿಸರ ತಜ್ಞರು ಮಾತ್ರವಲ್ಲ ಹೈಕೋರ್ಟ್ – ಸುಪ್ರೀಂ ಕೋರ್ಟ್ ವಿರೋಧದ ಹೊರತಾಗಿಯೂ ಯಡಿಯೂರಪ್ಪ ಅವರು ತರಾತುರಿಯಲ್ಲಿ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಲು ಏನು ಕಾರಣ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಮೃದ್ಧ ವನ್ಯಜೀವಿ ಸಂಕುಲ ಇರುವ ಪರಿಸರ ಸೂಕ್ಷ್ಮ ಪ್ರದೇಶವಾದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ರಕ್ಷಣೆಗಿಂತ, ಗಣಿ ಮತ್ತು ರಿಯಲ್ ಎಸ್ಟೇಟ್ ಲಾಬಿಗಳ ಹಿತರಕ್ಷಣೆಯೇ ತಮಗೆ ಮುಖ್ಯವಾಯಿತೇ ಯಡಿಯೂರಪ್ಪ ಅವರೇ? ಬನ್ನೇರಘಟ್ಟ ಇಎಸ್‌ಜೆಡ್ ಉಳಿಸಲು ಹೋರಾಡುತ್ತಿದ್ದ ಸಂಸದರಾದ ಪಿ.ಸಿ ಮೋಹನ್, ರಾಜೀವ್ ಚಂದ್ರಶೇಖರ್, ತೇಜಸ್ವಿ ಸೂರ್ಯ ಮತ್ತು ಸಚಿವರಾದ ಸುರೇಶ್ ಕುಮಾರ್ ಅವರು ಈಗ ಯಾಕೆ ಹೋರಾಟ ಕೈ ಬಿಟ್ಟಿದ್ದಾರೆ? ಇವರ ಮೌನದ ನಿಗೂಢತೆಯ ರಹಸ್ಯ ಏನು? ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಮ್ಮನ್ನು ರೈತ ನಾಯಕನೆಂದು ಬಿಂಬಿಸಿಕೊಳ್ಳುತ್ತಿರುವ ಯಡಿಯೂರಪ್ಪ ಅವರೇ, ಸಾವಿರಾರು ಎಕರೆ ಭೂಮಿಯಿಂದ ರೈತರನ್ನು ಓಡಿಸಿ ಗಣಿಲೂಟಿಕೋರರು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಉಡುಗೊರೆ ನೀಡುವ ನಿರ್ಧಾರದಿಂದ ಯಾವ ರೈತರ ಉದ್ಧಾರವಾಗಲಿದೆ? ಉದ್ಯಾನನಗರಿ ಎಂಬ ಜಗದ್ವಿಖ್ಯಾತಿಯ ಬೆಂಗಳೂರನ್ನು ಬೆಂಗಾಡು ಮಾಡುವ ದುರಾಲೋಚನೆಯೇನಾದರೂ ಇದೆಯೇ ಮುಖ್ಯಮಂತ್ರಿಗಳೇ? ನಗರದಲ್ಲಿ ಮಳೆ ಕಡಿಮೆಯಾಗುತ್ತಿದೆ, ಉಷ್ಣಾಂಶ ಹೆಚ್ಚುತ್ತಿದೆ, ಅಂತರ್ಜಲಮಟ್ಟ ಕುಸಿಯುತ್ತಿದೆ. ಕೆಂಪೇಗೌಡರು ಕಟ್ಟಿದ ನಗರವನ್ನು ಏನು ಮಾಡಲು ಹೊರಟಿದ್ದೀರಿ? ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿ, 15ನೇ ಹಣಕಾಸು ಆಯೋಗದ ಶಿಫಾರಸ್ಸಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ಪ್ರಶ್ನಿಸಿ ಕೇಂದ್ರಕ್ಕೆ ನಾಲ್ಕು ಸಾಲಿನ ಪತ್ರ ಬರೆಯದೆ, ಇಎಸ್‌ಜೆಡ್ ಕಡಿತಗೊಳಿಸಲು ಪತ್ರ ಬರೆದಿದ್ದೀರಲ್ಲಾ? ಯಡಿಯೂರಪ್ಪ ಅವರೇ, ನಿಮ್ಮ ಬದ್ಧತೆ ಯಾರಿಗೆ? ಎಂದು ಮರು ಪ್ರಶ್ನಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version