ದಿನದ ಸುದ್ದಿ
ಬದಲಿಸಬೇಕಿರುವುದು ಇಂದಿರಾ ಕ್ಯಾಂಟೀನ್ ಹೆಸರಲ್ಲ ; ಬಿಜೆಪಿಯ ಸಣ್ಣತನವನ್ನು : ಸಿದ್ದರಾಮಯ್ಯ ಕಿಡಿ
ಸುದ್ದಿದಿನ, ಬೆಂಗಳೂರು : ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರದ ನಡೆ ಖಂಡನೀಯ. ಇಂತಹ ಕ್ಷುಲಕ ರಾಜಕಾಣವನ್ನು ತಕ್ಷಣ ಕೈ ಬಿಡಬೇಕು ಎಂದು ಆಗ್ರಹಪಡಿಸುತ್ತೇನೆ. ಬಿಜೆಪಿ ಬದಲಾಯಿಸಬೇಕಾಗಿರುವುದು ಇಂದಿರಾ ಕ್ಯಾಂಟೀನ್ ಹೆಸರಲ್ಲ, ತನ್ನೊಳಗಿನ ಸಣ್ಣ ಬುದ್ದಿಯನ್ನು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಗರೀಬಿ ಹಠಾವೋ ಘೋಷಣೆಯ ಮೂಲಕ ಬಡತನದ ವಿರುದ್ಧ ಯುದ್ದ ಸಾರಿ ಗೆದ್ದವರು. ಅವರು ಕೇವಲ ಕಾಂಗ್ರೆಸ್ ಪಕ್ಷದ ನಾಯಕಿಯಲ್ಲ, ದೇಶದ ನಾಯಕಿ, ಬಡವರ ಪಾಲಿನ ಆಪತ್ಪಾಂಧವರಾಗಿದ್ದರು. ಈ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಎಂದು ನಾಮಕರಣ ಮಾಡಲಾಗಿತ್ತು. ಇಂದಿರಾ ಕ್ಯಾಂಟೀನ್‌ಗೆ ನಮ್ಮೆಲ್ಲರ ಹೆಮ್ಮೆಯ ಕವಿ ಮಹರ್ಷಿ ವಾಲ್ಮೀಕಿಯವರ ಹೆಸರು ಇಡುವ ಯೋಚನೆ ಇದೆಯಂತೆ. ಮಹರ್ಷಿ ವಾಲ್ಮೀಕಿಯವರ ಬಗ್ಗೆ ನಮಗೆಲ್ಲ ಅಪಾರವಾದ ಗೌರವ ಇದೆ. ಅವರ ಹೆಸರನ್ನು ಬಿಜೆಪಿ ತನ್ನ ಕ್ಷುಲಕ ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಂಡು ಅವರಿಗೆ ಅವಮಾನ ಮಾಡಲು ಹೊರಟಿದೆ ಎಂದು ಆಪಾದಿಸಿದ್ದಾರೆ.
ಮಹರ್ಷಿ ವಾಲ್ಮೀಕಿಯವರು ರಾಮಾಯಣ ಎಂಬ ಮಹಾಕಾವ್ಯವನ್ನು ಬರೆದ ಮಹಾಕವಿ. ತಳಸಮುದಾಯದಲ್ಲಿ ಹುಟ್ಟಿ ಅಕ್ಷರ ಜಗತ್ತಿನ ಮೇರುಪರ್ವತ ಏರಿದ ಸಾಧಕ. ಅವರ ಸಾಧನೆಗೆ ಹೊಂದುವಂತಹ ಯೋಜನೆಯನ್ನು ಬಿಜೆಪಿ ಸರ್ಕಾರ ಪ್ರಾರಂಭಿಸಿ ಅವರಿಗೆ ಗೌರವ ತೋರಲಿ. ಅದನ್ನು ನಾನು ಸ್ವಾಗತಿಸುತ್ತೇನೆ. ನಮ್ಮ ಸರ್ಕಾರ ಜಾರಿಗೆ ತಂದಿರುವ ಪ್ರತಿಯೊಂದು ಬಡವರ ಪರ ಯೋಜನೆಗಳನ್ನು ರದ್ದುಮಾಡಲು ಹೊರಟಿದ್ದ ಬಿಜೆಪಿ ಸರ್ಕಾರ ಈಗ ಜನಾಕ್ರೋಶಕ್ಕೆ ಹೆದರಿ ಹೆಸರು ಬದಲಾಯಿಸಲು ಹೊರಟಿದೆ. ಇವರಿಗೆ ಬಡವರ ಪರವಾದ ಹೊಸ ಯೋಜನೆಗಳನ್ನು ರೂಪಿಸುವ ಶಕ್ತಿಯೂ ಇಲ್ಲ, ಮನಸ್ಸೂ ಇಲ್ಲ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243