ದಿನದ ಸುದ್ದಿ

ತವರು ರಾಜ್ಯಗಳಲ್ಲಿ ಮಾತ್ರ ಮೀಸಲು ಅನ್ವಯ: ದಲಿತರಿಗೆ ಸುಪ್ರೀಂ ಮತ್ತೊಂದು ಬರೆ

Published

on

ಸುದ್ದಿದಿನ ಡೆಸ್ಕ್: ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲು ವಿಚಾರದಲ್ಲಿ ವಿವಾದಾತ್ಮಕ ತೀರ್ಪು ನೀಡಿ ಸಮುದಾಯದವರ ಆಕ್ರೋಶಕ್ಕೆ ಗುರಿಯಾಗಿರುವ ಸುಪ್ರೀಂ ಕೋರ್ಟ್ ಈಗ ಮತ್ತೊಂದು ವಿವಾದಾತ್ಮಕ ತೀರ್ಪು ನೀಡಿದೆ.

ವ್ಯಕ್ತಿಯು ಉದ್ಯೋಗ ಮತ್ತು ಶಿಕ್ಷಣ ವಿಷಯದಲ್ಲಿ ತವರು ರಾಜ್ಯದಲ್ಲಿರುವ ಮೀಸಲಾತಿಗೆ ಮಾತ್ರ ಅರ್ಹನಾಗುತ್ತಾನೋ ಹೊರತು ಆತ ವಲಸೆ ಹೋಗಿರುವ ರಾಜ್ಯಗಳಲ್ಲಿ ಈ ಸೌಲಭ್ಯದಿಂದ ಹೊರಗಿರುತ್ತಾನೆ ಎಂದು ಸುಪ್ರೀಂ ಕೋರ್ಟ್ ಸಂವಿಧಾನಾತ್ಮಕ ಪೀಠವು ತೀರ್ಪು ನೀಡಿದೆ.

ಮಣ್ಣಿನ ಮಗ ಸಿದ್ಧಾಂತಗಳನ್ನು (ಸನ್ ಆಫ್ ಸಾಯ್ಲ್) ಎತ್ತಿಹಿಡಿದಿರುವ ಪೀಠವು ಒಬ್ಬ ವ್ಯಕ್ತಿಯು ತನ್ನ ತವರು ರಾಜ್ಯದಲ್ಲಿ ಮಾತ್ರ ಎಸ್ಸಿ ಎಸ್ಟಿ ಮೀಸಲಾತಿಯಡಿ ತನಗೆ ಸಿಗುವ ಸೌಲಭ್ಯಗಳನ್ನು ಪಡೆಯಬಹುದು ಆದರೆ, ಆತ ಇತರೆ ರಾಜ್ಯಗಳಿಗೆ ಶಿಕ್ಷಣ ಅಥವಾ ಉದ್ಯೋಗ ದೃಷ್ಟಿಯಿಂದ ವಲಸೆ ಹೋದರೆ ತನ್ನ ತವರಿನ ಮೀಸಲನ್ನು ಅನ್ವಯ ಮಾಡಲು ಬರುವುದಿಲ್ಲ ಎಂದು ಜಸ್ಟೀಸ್ ರಂಜನ್ ಗೊಗೋಯಿ, ಎನ್ ವಿ ರಮಣ, ಆರ್ ಬಾನುಮತಿ, ಎಂಎಂ ಶಾಂತನಗೌಡರ್ ಹಾಗೂ ಅಬ್ದುಲ್ ನಜೀರ್ ಅವರನ್ನೊಳಗೊಂಡ ಸಂವಿಧಾನಾತ್ಮಕ ಪೀಠವು ಹೇಳಿದೆ.

ಈ ಪೀಠವು ನೀಡಿರುವ ತೀರ್ಪು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಎಲ್ಲ ತೀರ್ಪುಗಳಿಗೆ ವಿರೋಧವಾಗಿದೆ.
ಈ ಹಿಂದೆ ಈ ಸಂಬಂಧದ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ದಿಲ್ಲಿ ಹೈ ಕೋರ್ಟ್ ಆರ್ಟಿಕಲ್ 134 ಎ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮೀಸಲು ಸೌಲಭ್ಯವನ್ನು ಹೊಂದಿದ್ದು, ಇದು ದೇಶಾದ್ಯಂತ ಅನ್ವಯವಾಗಲಿದೆ ಎಂದು ಆದೇಶ ನೀಡಿತ್ತು.

Leave a Reply

Your email address will not be published. Required fields are marked *

Trending

Exit mobile version