ದಿನದ ಸುದ್ದಿ
ರಾಮದುರ್ಗ : ಶಿಥಿಲಗೊಂಡಿರುವ ಶಾಲಾ ಕಟ್ಟಡಗಳು ; ಕಟ್ಟಡಗಳ ನಿರ್ಮಾಣಕ್ಕೆ ನೆರವಾಗದ ಜನಪ್ರತಿನಿಧಿಗಳು : ಇವರಿಗೆ ಅಧಿಕಾರ ಯಾಕ್ ಬೇಕು ಸ್ವಾಮಿ..!
ಸುದ್ದಿದಿನ ಡೆಸ್ಕ್ : ಶಿಕ್ಷಕರ ಕೊರತೆ, ಕೊಠಡಿಗಳ ಸಮಸ್ಯೆ, ಭಯದ ವಾತಾವರಣದಲ್ಲಿ ಪಾಠ, ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಪಾಲಕರಲ್ಲಿ ಆತಂಕ, ಕೊಠಡಿಗಳ ನಿರ್ಮಾಣಕ್ಕೆ ಅನುದಾನದ ಕೊರತೆಯಿಂದ ಶಿಕ್ಷಣ ವ್ಯವಸ್ಥೆಯ ಮೆಟ್ಟಿಲಾದ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆ ಮಾತ್ರ ಸಮಸ್ಯೆಗಳ ಸುಳಿಗೆ ಸಿಲುಕಿಕೊಂಡಂತಾಗಿದೆ.
ರಾಮದುರ್ಗ ತಾಲೂಕಿನಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನೊಮ್ಮೆ ನೋಡಿದರೆ, ಸಮಸ್ಯೆಗಳ ಸರಮಾಲೆಯ ನೈಜನತೆಯ ದರ್ಶನವಾಗುತ್ತದೆ. ಅದಕ್ಕೆ ಸೂಕ್ತ ನಿದರ್ಶನವೆಂಬಂತೆ ನಂದಿಹಾಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯೋರ್ವಳ ಮೇಲೆ ಮೇಲ್ಛಾವಣಿಯ ಸಿಮೆಂಟ್ ಹೊದಿಕೆ ಕಳಚಿ ಬಿದ್ದು, ಗಾಯಗಳಾದ ಘಟನೆ ನಡೆದಿದೆ.
ರಾಷ್ಟ್ರದ ಪ್ರಗತಿಗೆ ಶಿಕ್ಷಣ ಪೂರಕವಾಗಲಿದೆ. ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಎಂದು ಹೇಳತ್ತಿರುವ ಉಭಯ ಸರಕಾರದ ನೀತಿ ಮಾತ್ರ ಇಲ್ಲಿ ಅಪವಾದ ಎಂಬಂತೆ ಬಡ ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಹ ವಾತಾವರಣ ಸೃಷ್ಠಿಯಾಗಿದೆ.
ಶಿಥಿಲಗೊಂಡಿವೆ 113 ಕೊಠಡಿಗಳು
ತಾಲೂಕಿನಲ್ಲಿರುವ 55 ಪ್ರೌಢಶಾಲೆಯಲ್ಲಿ 113 ಕೊಠಡಿಗಳು ಸುಮಾರು ವರ್ಷಗಳಿಂದ ಶಿಥಿಲಾವಸ್ಥೆಯನ್ನು ತಲುಪಿವೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಕೊಠಡಿಗಳು ಸುಮಾರು 75-100 ವರ್ಷಗಳಷ್ಟು ಹಳೆಯದಾಗಿವೆ. ಆದರೆ ಸರಕಾರ ಮಾತ್ರ ಅವುಗಳ ಪುನರ್ ನಿರ್ಮಾಣಕ್ಕೆ ಅನುದಾನ ಮಾತ್ರ ಬಿಡುಗಡೆ ಮಾಡಿಲ್ಲ. ಪ್ರತಿ ವರ್ಷ ಕೇವಲ 4-5 ಶಾಲೆಗಳ ಕೊಠಡಿಗಳ ನಿರ್ಮಾಣಕ್ಕೆ ವಿವಿಧ ಇಲಾಖೆಗಳ ಮೂಲಕ ಅನುದಾನ ನೀಡುತ್ತಿದೆ. ಆದರೆ ಇದರಿಂದ ಸಮಸ್ಯೆ ಕೊಠಡಿಗಳ ನಿರ್ಮಾಣ ಮಾತ್ರ ಅಸಾಧ್ಯವಾಗಿ ಪರಿಣಮಿಸಿದೆ ಎನ್ನುತ್ತಾರೆ ಅಧಿಕಾರಿಗಳು.
ಸರ್ವ ಶಿಕ್ಷಣ ಅಭಿಯಾನ ಮುಂದುವರಿಕೆಗೆ ಆಗ್ರಹ
ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ 2015-16 ರ ವರೆಗೆ ಶಾಲೆಗೆ ಕಟ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನ ಹಂಚಿಕೆಯಾಗುತ್ತಿತ್ತು. ಆದರೆ ಯೋಜನೆಗೆ ಕೇಂದ್ರ ಸರಕಾರ ಅನುದಾನ ನೀಡದೇ ಇರುವ ಕಾರಣ ಕೊಠಡಿಗಳ ನಿರ್ಮಾಣ ತಲೆನೋವಾಗಿ ಪರಿಣಮಿಸಿದೆ. ಸರ್ವ ಶಿಕ್ಷಣ ಅಭಿಯಾನವನ್ನು ಮುಂದುವರೆಸಬೇಕು ಎಂಬುವುದು ಶಿಕ್ಷಣ ತಜ್ಞರ ಅಭಿಮತವಾಗಿದೆ. ಸಮರ್ಪಕ ಮಾಹಿತಿ ನೀಡದ ಕ್ಷೇತ್ರ ಶಿಕ್ಷಣಾಧಿಕಾರಿ ತಾಲೂಕಿನಲ್ಲಿರುವ ಶಾಲೆಗಳ ವಿವಿಧ ಸಮಸ್ಯೆ ಹಾಗೂ ಶಿಥಿಲಾವಸ್ಥೆಯ ಕಟ್ಟಡಗಳನ್ನು ಮಾಹಿತಿನ್ನು ಕೇಳಿದರೆ ಸಮರ್ಪಕ ಮಾಹಿತಿ ನೀಡದೇ ಇರುವ ಕ್ರಮ ಮಾತ್ರ ಅವರಿಗೆ ಸೂಕ್ತ ಮಾಹಿತಿ ಇಲ್ಲದ ನಿಷ್ಕಾಳಜಿಯ ಮೇಲ್ವಿಚಾರಣೆಗೆ ಕ್ರಮ ಶಿಕ್ಷಣಾಭಿಮಾನಿಗಳನ್ನು ಬೇಸರಗೊಳ್ಳುವಂತೆ ಮಾಡಿದೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ತಾಲೂಕಿನಲ್ಲಿ ಶಿಥಿಲಗೊಂಡಿರುವ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡು ವ್ಯಾಸಂಗ ಮಾಡುತ್ತಿರುವ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುತ್ತಾರಾ? ಎಂದು ಕಾದು ನೋಡಬೇಕಿದೆ.
“ರಾಮದುರ್ಗ ತಾಲೂಕಿನಲ್ಲಿ ಸುಮಾರು 113 ಕೊಠಡಿಗಳ ನಿರ್ಮಾಣಕ್ಕೆ ಹಿಂದಿನ ಶಾಸಕರ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಿದರೂ ಶಾಸಕರು ಕೊಠಡಿಗಳ ನಿರ್ಮಾಣಕ್ಕೆ ಕಾಳಜಿ ವಹಿಸಿಲ್ಲ. ನಾನು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸು ಮತ್ತೊಮ್ಮೆ ಸುಮಾರು 84 ಕೋಟಿ ವೆಚ್ಚದಲ್ಲಿ ತಾಲೂಕಿನಲ್ಲಿ ಶಾಲಾ ಕೊಠಡಿಗಳ ನಿರ್ಮಾನಕ್ಕೆ ಪ್ರಸ್ತಾವಣೆ ಸಲ್ಲಿಸಿದ್ದೇನೆ. ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿ ಸಮಸ್ಯೆ ಬಗೆಹರಿಸುತ್ತೇನೆ”.
| ಮಹಾದೇವಪ್ಪ ಯಾದವಾಡ, ಶಾಸಕರು ರಾಮದುರ್ಗ
ಸುದ್ದಿದಿನ.ಕಾಂ|ವಾಟ್ಸಾಪ್|9986715401