ದಿನದ ಸುದ್ದಿ
ವಿಜ್ಞಾನಿಗಳ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ : ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಸುದ್ದಿದಿನಡೆಸ್ಕ್:ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ಅದರಂತೆ ಇಂದು ಭಾರತೀಯ ಕೃಷಿ ಸಂಶೋಧನೆ ಮಂಡಳಿ ಮತ್ತು ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಸ್ಥೆಯಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ’ಒಂದು ದೇಶ ಒಂದು ಕೃಷಿ ಒಂದು ತಂಡ’ ಧ್ಯೇಯದೊಂದಿಗೆ ಕೇಂದ್ರ ಸರ್ಕಾರ, ವಿಕಸಿತ ಕೃಷಿ ಸಂಕಲ್ಪ ಅಭಿಯನದ ಅಡಿಯಲ್ಲಿ ಕೃಷಿ ಸಂಶೋಧಕರನ್ನು ರೈತರ ಹತ್ತಿರ ತರುವಂತಹ ಕೆಲಸ ಮಾಡುತ್ತಿದೆ. ವಿಜ್ಞಾನಿಗಳ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಲಾಭದಾಯಕ ಕೃಷಿಯತ್ತ ಹೆಜ್ಜೆ ಇಟ್ಟಿದೆ ಎಂದು ಹೇಳಿದರು. ರೈತರು ನೈಸರ್ಗಿಕವಾದ ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವರು ಸಲಹೆ ನೀಡಿದರು.
ಐಸಿಎಆರ್ ಮತ್ತು ಐಐಎಚ್‌ಆರ್ ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹೆರಾ ಮಾತನಾಡಿ, ಕಳೆದ ಹತ್ತು ದಿನಗಳಿಂದ 1 ಸಾವಿರದ 896 ತಂಡಗಳು ಸೇರಿ 8 ಸಾವಿರದ 188 ಹಳ್ಳಿಗಳಲ್ಲಿ 8 ಲಕ್ಷ 95 ಸಾವಿರದ 944 ರೈತರೊಂದಿಗೆ ಸಂವಹನ ನಡೆಸಿದ್ದೇವೆ. ಕರ್ನಾಟದಲ್ಲಿಯೂ 70 ಕ್ಕೂ ಅಧಿಕ ವಿಜ್ಞಾನಿಗಳ ತಂಡ ಕೃಷಿ ಮತ್ತು ಸಂಬAಧಿತ ಇಲಾಖೆಯ ಅಧಿಕಾರಿಗಳು, ರೈತರ ಹೊಲಗಳಿಗೆ ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಡ್ರ‍್ಯಾಗನ್ ಫ್ರೂಟ್ ಬೆಳೆ ಪ್ರದೇಶಕ್ಕೆ ಭೇಟಿ ನೀಡಿ, ಡ್ರ‍್ಯಾಗನ್ ಹಣ್ಣು ಕೃಷಿ ಅಭಿವೃದ್ಧಿ ಕುರಿತು ರೈತರಿಂದ ಮಾಹಿತಿ ಪಡೆದರು. ಬಳಿಕ ನೈಸರ್ಗಿಕ ಟೊಮ್ಯಾಟೋ ಬೆಳೆ ಪ್ರದೇಶಕ್ಕೆ ತೆರಳಿ, ರೈತರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಬೆಳೆಗಳಲ್ಲಿ ರೈತರಿಗೆ ಮಾದರಿಯಾದ ಐದು ಪ್ರತಿಭಾನ್ವಿತ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243