ದಿನದ ಸುದ್ದಿ
ದಾವಣಗೆರೆ | ಎಸ್.ಸಿ.ಪಿ/ಟಿ.ಎಸ್.ಪಿ ಪ್ರಗತಿ ಪರಿಶೀಲನಾ ಸಭೆ , ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ಪ್ರದರ್ಶಿಸಿ : ಜಿಲ್ಲಾಧಿಕಾರಿ
ಸುದ್ದಿದಿನ,ದಾವಣಗೆರೆ : ಪರಿಶಿಷ್ಟ ಜಾತಿ ಮತ್ತು ಪಂಗಡದರಿಗೆ ಹಾಗೂ ಇತರೆ ವರ್ಗಗಳಿಗೂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಂದ ನೀಡಲಾಗುವ ಸೌಲಭ್ಯಗಳನ್ನು ಆಯಾ ಇಲಾಖೆಯ ಕಚೇರಿಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಮಾಡಿದರೆ ಜನರಿಗೆ ಮಾಹಿತಿ ತಲುಪಿ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅಭಿಪ್ರಾಯಪಟ್ಟರು.
ಬುಧವಾರ ಜಿಲ್ಲಾಡಳಿತ ಭವನದಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿದಂದ ಎಲ್ಲಾ ವರ್ಗಗಳಿಗೆ ಸಾಕಷ್ಟು ಸೌಲಭ್ಯಗಳಿವೆ ಆದರೆ ಅವುಗಳ ಬಗ್ಗೆ ಜನರಿಗೆ ಮಾಹಿತಿಯ ಕೊರೆತೆಯಿದೆ. ಈ ಕೊರತೆಯನ್ನು ದೂರ ಮಾಡಲು ವಿವಿಧ ಇಲಾಖೆಯಲ್ಲಿರುವ ಅಲ್ಪ ಸ್ವಲ್ಪ ಪ್ರಮಾಣದ ಅನುದಾನದಲ್ಲಿ ಬಸ್‍ಸ್ಟಾಂಡ್‍ಗಳಲ್ಲಿ ಆಡಿಯೋ ಜಾಹೀರಾತು, ಸಾರ್ವಜನಿಕ ಸ್ಥಳ, ಹಾಸ್ಟೆಲ್‍ಗಳಲ್ಲಿ ಸರ್ಕಾರಿ ಸೌಲಭ್ಯಗಳ ಮಾಹಿತಿಯುಳ್ಳ ಪೋಸ್ಟರ್ ಅಥವಾ ಬ್ಯಾನರ್‍ನಲ್ಲಿ ಪ್ರಕಟಿಸಿ ಜನರಿಗೆ ಮನದಟ್ಟು ಮಾಡಬೇಕು ಎಂದು ವಿವಿಧ ಇಲಾಖೆಗಳಿಗೆ ತಿಳಿಸಿದರು.
ಎಸ್‍ಸಿಪಿ ಮತ್ತು ಟಿಎಸ್‍ಪಿ ಅಡಿಯಲ್ಲಿ ಯಾವ ಯಾವ ಇಲಾಖೆಗಳಿಗೆ ಎಷ್ಟೆಷ್ಟು ಅನುದಾನ ಬಂದಿದೆ ಹಾಗೂ ಬಂದಿರುವ ಅನುದಾನವನ್ನು ಯಾವ ಯಾವ ಉದ್ದೇಶಗಳಿಗೆ ವೆಚ್ಚ ಮಾಡಲಾಗಿದೆ ಎಂಬುದನ್ನು ಇಲಾಖಾವಾರು ಮಾಹಿತಿ ಪಡೆದರು.
ಈ ವೇಳೆ ಮಾಹಿತಿ ನೀಡಿದ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್, ಎಸ್.ಸಿ.ಪಿಯಡಿಯಲ್ಲಿ 108.89 ಲಕ್ಷ ಹಾಗೂ ಟಿ.ಎಸ್.ಪಿಯಡಿಯಲ್ಲಿ 59.46 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶೇ.85 ರಷ್ಟು ಅನುದಾನವನ್ನು ಸಬ್ಸಿಡಿ ದರದಲ್ಲಿ ಬೀಜ-ಗೊಬ್ಬರ ಸೇರಿದಂತೆ ಇತರೆ ಕಾರ್ಯಗಳಿಗೆ ವೆಚ್ಚ ಮಾಡಲಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಮಾತನಾಡಿ, ಎಸ್.ಸಿ.ಪಿಯಡಿಯಲ್ಲಿ 39.02 ಲಕ್ಷ ಹಾಗೂ ಟಿ.ಎಸ್.ಪಿಯಡಿಯಲ್ಲಿ 13.32 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶೇ.35 ರಷ್ಟು ಅನುದಾನವನ್ನು ವೆಚ್ಚಮಾಡಲಾಗಿದೆ. ಅಲ್ಲದೇ ಇತರೆ ಕಾರ್ಯಗಳಿಗೆ ಈಗಾಗಲೇ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದರು.
ಜಲ ಸಂಪನ್ಮೂಲ ಇಲಾಖೆಯ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಇಲಾಖೆಯ ಅಧಿಕಾರಿ ಮಾತನಾಡಿ, ಎಸ್.ಸಿ.ಪಿಯಡಿಯಲ್ಲಿ 829.60 ಲಕ್ಷ ಹಾಗೂ ಟಿ.ಎಸ್.ಪಿಯಡಿಯಲ್ಲಿ 301.42 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶೇ.100 ರಷ್ಟು ಅನುದಾನವನ್ನು ವೆಚ್ಚ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ನೀರಾವರಿ ಇಲಾಖೆ ಇಷ್ಟೊಂದು ಹಣವನ್ನು ಯಾವ ಕಾರ್ಯಗಳಿಗೆ ವೆಚ್ಚ ಮಾಡಿದ್ದೀರಾ ಎಂದು ಪ್ರಶ್ನಿಸಿದಾಗ, ಅಧಿಕಾರಿ ಪ್ರತಿಕ್ರಿಯಿಸಿ 27 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಚಿಕ್ಕಮ್ಯಾಗಳಗೆರೆ, ಕೊಂಡಜ್ಜಿ ಹಾಗೂ ಇತರೆ ಕಡೆಯ ಎಸ್.ಸಿ ಕಾಲೋನಿಗಳಲ್ಲಿ ಸಿ.ಸಿ ರಸ್ತೆಗಳನ್ನು ಮಾಡಲಾಗಿದೆ ಎಂದರು.
ನೀರಾವರಿ ಇಲಾಖೆಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಏನು ಸಂಬಂಧ ಎಲ್ಲಾ ಇಲಾಖೆಗಳು ರಸ್ತೆ ಅಭಿವೃದ್ಧಿಯನ್ನು ಮಾಡುತ್ತಿವೆ. ನೀರಾವರಿ ಇಲಾಖೆ ಕನಿಷ್ಠ ಪಕ್ಷ ಎಸ್.ಸಿ/ಎಸ್.ಟಿ ಕಾಲೋನಿಗಳಿಗೆ ಅನುಕೂಲವಾಗುವಂತೆ ಕೆರೆ, ತೊಟ್ಟಿ ನಿರ್ಮಾಣ ಕಾಮಗಾರಿಗಳಿಗೆ ಅನುದಾನವನ್ನು ವೆಚ್ಚ ಮಾಡಿ. ಇಲ್ಲದಿದ್ದಲ್ಲಿ ಜಲಶಕ್ತಿ ಅಭಿಯಾನದಡಿ ಎಸ್.ಸಿ/ಎಸ್.ಟಿ ಸಮುದಾಯಗಳಿಗೆ ಸಂಬಂಧಿಸಿದಂತೆ ನೀರು ಹಾಗೂ ಪರಿಸರ ಹಸೀರಿಕರಣಕ್ಕೆ ಒತ್ತು ನೀಡಿ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಎಂ.ಬಿ.ಎ ವಿಭಾಗದ ಕೋ ಆರ್ಡಿನೆಟರ್ ರಾಜು ಮಾತನಾಡಿ, ಎಸ್.ಸಿ.ಪಿ ಹಾಗೂ ಟಿ.ಎಸ್.ಪಿಯಡಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಈಗಾಗಲೇ ವೆಚ್ಚಮಾಡಲಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಊಟ, ಸ್ಪರ್ಧಾತ್ಮಕ ಪರೀಕ್ಷಗೆ ಬೇಕಾದ ಪುಸ್ತಕಗಳ ಖರೀದಿ, ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರಗಳು, ಪಿ.ಎಚ್‍ಡಿ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಸೇರಿದಂತೆ ಇತರೆ ಕಾರ್ಯಗಳಿಗೆ ಅನುದಾನವನ್ನು ವೆಚ್ಚ ಮಾಡಲಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧಿಕಾರಿ ಮಾತನಾಡಿ, ಎಸ್.ಸಿ.ಪಿಯಡಿಯಲ್ಲಿ 1.20 ಲಕ್ಷ ಹಾಗೂ ಟಿ.ಎಸ್.ಪಿಯಡಿಯಲ್ಲಿ .30 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶೇ.100 ರಷ್ಟು ಅನುದಾನವನ್ನು ವೆಚ್ಚ ಮಾಡಲಾಗಿದೆ ಜಾನಪದ ತಂಡಗಳಗೆ ಸೇರಿದಂತೆ ಇತರೆ ತರಬೇತಿಗೆ ಖರ್ಚು ಮಾಡಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ಚೇತನ್ ಮಾತನಾಡಿ, ಜಾನಪದ ತಂಡಗಳಿಗೆ ಹಣ ಮಾತ್ರ ನೀಡದೇ ತಂಡಗಳಿಗೆ ಬೇಕಾದ ಪರಿಕರ ಖರೀದಿಸಲು ಅನುದಾನ ನೀಡಿ ಎಂದು ಸೂಚಿಸಿದರು. ಜಾನಪದ ಆಸಕ್ತಿಯುಳ್ಳ ಯುವಜನತೆಗೆ ಸೂಕ್ತ ತರಬೇತಿ ನೀಡಿ ಸ್ಟೇಪಂಡ್ ಕೊಡಿ ಎಂದರು. ಇಲಾಖೆಯ ಅಧಿಕಾರಿ ಪ್ರತಿಕ್ರಿಯಿಸಿ ಜಾನಪದ ಉಚಿತ ತರಬೇತಿ ಈಗಾಗಾಲೇ ಅರ್ಜಿ ಆಹ್ವಾನಿಸಲಾಗಿದೆ ಎಂದರು.
ಆರ್ಥಿಕ ವರ್ಷ ಆರಂಭವಾಗಿರುವುದರಿಂದ ಇನ್ನೂ ಸಾಕಷ್ಟು ಇಲಾಖೆಗಳಿಗೆ ಮೊದಲ ಕಂತಿನ ಅನುದಾನ ಬಿಡುಗಡೆಯಾಗಿರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಾನಂದ್ ಕುಂಬಾರ್, ಜಿಲ್ಲಾ ಕಾರ್ಮಿಕಾಧಿಕಾರಿ ಇಬ್ರಾಹಿಂ ಸಾಬ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಜೆ. ಬಣಕಾರ್, ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ಜಿಲ್ಲಾ ಕ್ಷಯಾ ರೋಗ ನಿಯಂತ್ರಣಾಧಿಕಾರಿ ಡಾ.ರಾಘವನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243