ದಿನದ ಸುದ್ದಿ
ಕರ್ನಾಟಕದಲ್ಲಿ ಸೆಮಿ ಕಂಡೆಕ್ಟರ್ ಘಟಕ ನಿರ್ಮಾಣದಿಂದ ಹತ್ತು ಸಾವಿರಕ್ಕೂ ಹೆಚ್ಚು ಉದ್ಯೋಗ
ಸುದ್ದಿದಿನ ಡೆಸ್ಕ್ : ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸೆಮಿ ಕಂಡೆಕ್ಟರ್ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಐಎಸ್‌ಎಂಸಿ (ಅನಲಾಗ್ ಫ್ಯಾಬ್ ಪ್ರೈವೇಟ್ ಲಿಮಿಟೆಡ್) ಕಂಪನಿ ಪರಸ್ಪರ ಒಡಂಬಡಿಕೆಗೆ ನಿನ್ನೆ ಸಹಿ ಹಾಕಿವೆ.
ರಾಜ್ಯ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಮತ್ತು ಐಎಸ್‌ಎಂಸಿ ಕಂಪನಿ ನಿರ್ದೇಶಕ ಅಜಯ ಜಲನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.
ರಾಜ್ಯದಲ್ಲಿ ಸೆಮಿ ಕಂಡೆಕ್ಟರ್ ಕಂಪನಿ ಸ್ಥಾಪನೆಯಾಗಲಿರುವುದರಿಂದ ಮುಂದಿನ 7ವರ್ಷಗಳಲ್ಲಿ 22ಸಾವಿರದ 900ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದೆ. 1 ಸಾವಿರದ 500ಕ್ಕೂ ಹೆಚ್ಚು ಜನರಿಗೆ ಪ್ರತ್ಯಕ್ಷ ಹಾಗೂ 10ಸಾವಿರಕ್ಕೂ ಹೆಚ್ಚು ಜನರಿಗೆ ಪರೋಕ್ಷವಾಗಿ ಉದ್ಯೋಗ ದೊರಕಲಿದೆ.
ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸೆಮಿ ಕಂಡಕ್ಟರ್ ಮಿಷನ್‌ನ್ನು ಅನುಮೋದಿಸಿರುವುದರಿಂದ ಸೆಮಿ ಕಂಡಕ್ಟರ್ ವಲಯದಲ್ಲಿ ಮುಂದುವರೆಯಲು ಸಾಧ್ಯವಾಗಿದೆ.
ವಿವಿಧ ರಾಜ್ಯಗಳು ಸೆಮಿ ಕಂಡಕ್ಟರ್ ಫ್ಯಾಬ್ ಹೂಡಿಕೆ ಆಕರ್ಷಿಸಲು ಸ್ಪರ್ಧೆ ಮಾಡುತ್ತಿರುವ ಸಮಯದಲ್ಲೇ ಈ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ ಹಾಕಿದೆ. ದೇಶದಲ್ಲೇ ಅತ್ಯುತ್ತಮ ಮೂಲ ಸೌಕರ್ಯ ಹಾಗೂ ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ಕರ್ನಾಟಕ ಹೊಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243