ದಿನದ ಸುದ್ದಿ

ಈ ದಿನ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನ

Published

on

  • ಪೂರ್ಣಿ, ಬೆಂಗಳೂರು

ಮ್ಮಲ್ಲಿ ಎಷ್ಟೊ ಜನಕ್ಕೆ ಅರ್ರೇ ಇಂತದ್ದೊಂದು ದಿನ ಬೇರೆ ಇದ್ಯಾ? ಅಂತ ಅನಿಸೋದರಲ್ಲಿ ಅತಿಶಯೋಕ್ತಿ ಏನಿಲ್ಲ ಅಂತ ಗೊತ್ತು ನನಗೆ.

ಇವತ್ತು ಅನೇಕ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳು ಪ್ರತೀ ವ್ಯಾಪ್ತಿಯಲ್ಲೂ ನಡೆಯುತ್ತೆ , ವಯಸ್ಸಾದವರಿಗೆ ಶಾಲು, ಬಾಳೆಹಣ್ಣು, ಜ್ಯೂಸ್ ಪ್ಯಾಕೆಟ್ ಕೊಟ್ಟು ಕಳಿಸ್ತಾರೆ, ಬಹುತೇಕ ಸರ್ಕಾರಿ ಕೆಲಸಗಳಲ್ಲಿ, ಸೇನೆಗಳಲ್ಲಿ ಇದ್ದು ನಿವೃತ್ತಿ ಪಡೆದವರನ್ನ ಮಾತ್ರ ಹಿರಿಯರು ಅಂತಲೂ ಗುರುತಿಸ್ತಾರೆ, ಆದರೆ ಯಾರೂನೂ ಈ ದೇಶವನ್ನ ಕಟ್ಟಿ ಬೆಳೆಸಿದ , ಇನ್ನೂ ಬೆಳೆಸುತ್ತಿರುವ ಅಸಂಘಟಿತ ಕ್ಷೇತ್ರದಲ್ಲಿ 40-50 ವರ್ಷಗಳಿಂದ ದುಡಿದ ಹಿರಿಯ ಕಾರ್ಮಿಕ ವರ್ಗವನ್ನ ಗಣನೆಗೂ ತಗೊಳಲ್ಲ, ಮುಂದುವರೆದು ಈ ಜನ ನಗರದ ರಸ್ತೆ, ಬ್ರಿಡ್ಜು, ಪಾರ್ಕೂ, ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದ್ದಾರೆ ಇನ್ನೂ ಕಟ್ತಾನೂ ಇದಾರೆ ಇವರಿಗೆ ನಿವೃತ್ತಿಯ ವಯಸ್ಸೇ ಇಲ್ಲ.

ಸರ್ಕಾರಿ ಕೆಲಸದಿಂದ ನಿವೃತ್ತಿ ಆದೋರಿಗೆ ಅವರ ಕಡೆಯ ಸಂಬಳದ ಅರ್ಧದಷ್ಟು ಪಿಂಚಣಿ, ಸಾಮಾಜಿಕ ಗೌರವ ಬಳುವಳಿಯಾಗಿ ಸಿಕ್ಕರೆ ಈ ಕಾರ್ಮಿಕರಿಗೆ ನಿವೃತ್ತಿಯ ವಯಸ್ಸಲ್ಲಿ ಬಡ್ತಿ ಸಿಗುತ್ತೆ ಇನ್ನೂ ಹತ್ತಾರು ವರ್ಷ ದುಡಿಲೇ ಬೇಕು ಅನ್ನೋ ಬಡ್ತೀ.!!? ನಗರದ ಅಭಿವೃದ್ದಿ ಅನ್ನೋ ಉಳುಮೆಗೆ ನೊಗ ಕೊಟ್ಟು ದುಡಿದ ಎತ್ತುಗಳು ಇವರು, ಇವತ್ತೂ 1200 ರೂ ಪಿಂಚಣಿಗೋಸ್ಕರ ಗಂಟೆಗಟ್ಲೇ ಪೋಸ್ಟ್ ಆಫೀಸಿನ ಮುಂದೆ ನಿಂತ್ಕೊತಾರೇ..

ಭಾರತದ ಸಂಪೂರ್ಣ ಕೆಲಸ ಮಾಡುವ ವರ್ಗದಲ್ಲಿ 97% ಜನ ಅಸಂಘಟಿತ ವಲಯದಲ್ಲಿದ್ದಾರೆ ಮತ್ತವರು ಇವತ್ತಿಗೂ ಕನಿಷ್ಟ ಕೂಲಿಯನ್ನ ಹೆಚ್ಚಿಸಿಕೊಳ್ಳಲಾಗದೇ ಹೋರಾಡ್ತಾ ಇದಾರೆ, ಈ ಅಸಂಘಟಿತ ವಲಯದ ನಿವೃತ್ತ ಕಾರ್ಮಿಕರು ನಡೆದಾಡಲೂ ಕಷ್ಟ ಆಗುವ ಈ ವಯಸ್ಸಿನಲ್ಲಿ ಕನಿಷ್ಟ ಕೂಲಿಯ ಅರ್ಧದಷ್ಟು ಪಿಂಚಣಿಗಾಗಿ ಹೋರಾಡ್ತಾ ಇದಾರೆ!!!

ಭಾರತೀಯ ಸಂವಿಧಾನವು ಪ್ರತಿಯೊಂದು ಮನುಷ್ಯರಿಗೂ “ಘನತೆಯ ಹಕ್ಕು” ಬದುಕುವ ಹಕ್ಕು” ಮತ್ತು ಸಾಮಾಜಿಕ ಭದ್ರತೆಯ ಹಕ್ಕನ್ನು ಒದಗಿಸಿದೆ, ಇದು ಕೇವಲ ಉಳ್ಳವರ ಸ್ವತ್ತಲ್ಲ ಈ ನಾಡನ್ನು ಕಟ್ಟಿ ಬೆಳೆಸಿದವರ ಸ್ವತ್ತೂ ಕೂಡ.. !

ಇಂತ ಅಸಂಘಟಿತ ವಲಯದ ಹಿರಿಯ ನಾಗರೀಕರೇ ಕಟ್ಟಿ ಬೆಳೆಸಿದ ಯೂನಿಯನ್ನೇ “ಅಖಿಲ ಕರ್ನಾಟಕ ವಯೋವೃದ್ದರ ಒಕ್ಕೂಟ” . ಇಂದು ” ಯೋಗ್ಯ ಪಿಂಚಣಿ, ಮಧ್ಯಾಹ್ನದ ಬಿಸಿಯೂಟ , ಮತ್ತು ಸಾಮಾಜಿಕ ಭದ್ರತೆ” ಯ ಹಕ್ಕೊತ್ತಾಯದೊಂದಿಗೆ ಈ ದಿನವನ್ನು ನೆನಪಿಸ್ತಾ ಇದಾರೆ, ಆಗ್ರಹಿಸ್ತಾ ಇದಾರೆ.. ಅವರಿಗೆ ಬೆಂಬಲಿಸ ಬೇಕಾದ ತುರ್ತಿದೆ, ಬನ್ನಿ ಬೆಂಬಲಿಸೋಣ!! ಇವತ್ತು ಇವರು, ನಾಳೆ ನಾವು..!

ಹಿರಿಯರ ಜವಾಬ್ದಾರಿ ಸಾಮಾಜಿಕ ಜವಾಬ್ದಾರಿ.!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version