ದಿನದ ಸುದ್ದಿ
ಸರಳ ಹಾಗೂ ಸಾಂಕೇತಿಕವಾಗಿ ಸಂತ ಸೇವಾಲಾಲ್ ಜಯಂತಿ ಆಚರಣೆ : ಎಂ.ಪಿ.ರೇಣುಕಾಚಾರ್ಯ
ಸುದ್ದಿದಿನ,ದಾವಣಗೆರೆ : ಸಂತ ಸೇವಾಲಾಲರ 282 ನೇ ಜಯಂತಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸೋಣ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿಂದು ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಮಾಲಾಧಾರಿಗಳು ಹಾಗೂ ಭಕ್ತರು ಸೇವಾಲಾಲರ ಜಾತ್ರೆಗೆ ಬರುವಂತೆ ನೋಡಿಕೊಳ್ಳಬೇಕು. ಈ ಸಂಬಂಧ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಮನವೊಲಿಸಬೇಕು. ಆದರೆ ಭಕ್ತಿಗೆ ಬಡತನವಿಲ್ಲ ಎಂಬಂತೆ ಹೆಚ್ಚು ಜನರು ಬಂದರೂ ಅವರಿಗೆ ತೊಂದರೆಯಾಗದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿರಬೇಕಾಗುತ್ತದೆ.
ಸಂತ ಸೇವಾಲಾಲರು ಕೇವಲ ಬಂಜಾರ ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲಾ ಜಾತಿ, ಸಮುದಾಯದವರು ಶ್ರಧ್ಧಾ ಭಕ್ತಿಯಿಂದ ಆಚರಿಸುವ ಜಯಂತಿಯಾಗಿದೆ. ಅದಕ್ಕೆ ಪೂರಕವಾಗಿ ಸೂರಗೊಂಡನ ಕೊಪ್ಪ ಕ್ಷೇತ್ರ ಅಭಿವೃದ್ದಿಯಾಗುತ್ತಿದ್ದು ಒಂದು ರೀತಿ ಎರಡನೇ ಧರ್ಮಸ್ಥಳದಂತೆ ಜನಪ್ರಿಯಗೊಳ್ಳುತ್ತಿದೆ. ಈ ಪುಣ್ಯ ಕ್ಷೇತ್ರದ ಅಭಿವೃದ್ದಿಗಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ರೂ.76 ಕೋಟಿ ಮಂಜೂರಾಗಿದ್ದು, ರೂ.46 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೂ ಚಾಲನೆ ಶೀಘ್ರದಲ್ಲೇ ದೊರೆಯಲಿದೆ ಎಂದ ಅವರು ಒಟ್ಟಾರೆ ಸೂರಗೊಂಡನಕೊಪ್ಪ ಸಮಗ್ರವಾಗಿ ಅಭಿವೃದ್ದಿಯಾಗಲಿದೆ ಎಂದರು.
ಅಪಾರ ಭಕ್ತಿ ಹಾಗೂ ಶ್ರದ್ದೆಯಿಂದ ನಡೆಯುವ ಸೇವಾಲಾಲ್ ಜಯಂತಿ ಅಚ್ಚುಕಟ್ಟಾಗಿ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮ ಎಂದುಕೊಳ್ಳದೇ ತಮ್ಮ ಮನೆಯ ಕಾರ್ಯಕ್ರಮದಂತೆ ಆಚರಿಸಬೇಕು ಎಂದರು.
ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಪಿ.ರಾಜೀವ್ ಮಾತನಾಡಿ ಹಿಂದಿನ ವರ್ಷದ ಸೇವಾಲಾಲರ ಜಾತ್ರೆ ಮುಗಿದ ನಂತರ ಕೋವಿಡ್ ಕಾಣಿಸಿಕೊಂಡಿತು. ಈ ವರ್ಷದ ಜಾತ್ರೆಗೆ ಮುನ್ನ ಕೋವಿಡ್‍ಗೆ ಲಸಿಕೆ ದೊರೆತು ಈ ಕೋವಿಡ್ ತೊಲಗಲಿ ಎಂಬ ಆಶಯದೊಂದಿಗೆ ಜಾತ್ರೆ ಆಚರಿಸೋಣ, ಕೋವಿಡ್ ಬಗೆಗೆ ಈಗಿರುವ ಮಾರ್ಗಸೂಚಿಯನ್ನು ಪಾಲಿಸಬೇಕಾಗಿದೆ.
ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಮುಂಜಾಗ್ರತ ಕ್ರಮಗಳೊಂದಿಗೆ ಜಾತ್ರೆ ನಡೆಸಲು ಎಲ್ಲರ ಸಹಕಾರ ಬೇಕು. ಕುಡಿಯುವ ನೀರು, ಶೌಚಾಲಯ ಸಂಚಾರ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಎಲ್ಲವೂ ಸಮರ್ಪಕವಾಗಿ ಆಗಬೇಕು. ಚಿನ್ನಿಕಟ್ಟೆಯಿಂದ ಕ್ಷೇತ್ರದವರೆಗೆ ರಸ್ತೆಯ ಎರಡೂ ಬದಿ ಜಂಗಲ್ ಕಟಿಂಗ್, ರಸ್ತೆಯ ಪಾಥ್ ಹೋಲ್ ಮುಚ್ಚುವ ಕಾರ್ಯಕ್ರಮ ಆಗಬೇಕು. ಕ್ಷೇತ್ರದಲ್ಲಿ ನಿಗಮದಿಂದ ಜಮೀನು ಖರೀದಿ ಪ್ರಕ್ರಿಯೆ ನಡೆದಿದ್ದು, ಆ ಜಮೀನನ್ನು ವಾಹನ ಪಾರ್ಕಿಂಗ್‍ಗೆ ಬಳಸಿಕೊಳ್ಳಬಹುದು ಎಂದರು.
ಜಾತ್ರಾ ಮಹೋತ್ಸವ ಫೆ.14 ಮತ್ತು 15 ರಂದು ನಡೆಯಲಿದ್ದು, ಫೆ.13 ರಂದು ಬರುವ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡಬೇಕಾಗುತ್ತದೆ. ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು ಆಗಮಿಸುತ್ತಿರುವುದರಿಂದ ಹಿಂದಿನ ಬಾರಿ ಮಾಡಿದಂತೆ ಎಲಿಪ್ಯಾಡ್ ವ್ಯವಸ್ಥೆ ಮಾಡಬೇಕು. ಅನ್ಯ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಶಾಮಿಯಾನ ವ್ಯವಸ್ಥೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಸಾಂಸ್ಕøತಿಕ ಕಲಾ ತಂಡಗಳ ಆಯೋಜನೆಯಾಗಲಿ ಎಂದರು.
ಸಂತ ಸೇವಾಲಾಲ್ ಪ್ರತಿಷ್ಟಾನದ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ರುದ್ರಪ್ಪ ಲಮಾಣಿ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಸೇವಾಲಾಲರ ಜಯಂತಿಯನ್ನು ಸರಳವಾಗಿ ಆಚರಿಸಬೇಕಾಗಿದ್ದು, ರೂಪಾಂತರಿ ಕೊರೊನಾ ಪ್ರಕರಣ ಶಿವಮೊಗ್ಗದಲ್ಲಿ ಕಂಡು ಬಂದಿದ್ದು, ಶಿವಮೊಗ್ಗ ಸೂರಗೊಂಡನಕೊಪ್ಪ ಕ್ಷೇತ್ರಕ್ಕೆ ಹತ್ತಿರವಾಗಿರುವುದರಿಂದ ಅಂದಿನ ಸಂದರ್ಭವನ್ನು ನೋಡಿಕೊಂಡು ಜಾತ್ರೆಯನ್ನು ಆಚರಿಸಬೇಕಾಗುತ್ತದೆ ಎಂದರು.
ಹಿಂದಿನ ಬಾರಿ ಜಾತ್ರೆಯಲ್ಲಿ ಆದಂತೆ ಈ ಬಾರಿಯೂ ಶಿವಮೊಗ್ಗ, ಶಿಕಾರಿಪುರದಿಂದ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಮಾಡಬೇಕು. ವಿದ್ಯುತ್ ವ್ಯತ್ಯಯವಾಗದಂತೆ ಬೆಳಕಿನ ಸಮರ್ಪಕ ವ್ಯವಸ್ಥೆ ಮಾಡಬೇಕು. ಹಾಗೂ ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರಿನ 20 ಟ್ಯಾಂಕರ್‍ಗಳು ಹಾಗೂ ನಮ್ಮ ಸಮುದಾಯದವರು ಮಾಡುವ ಮೆಡಿಕಲ್ ಕ್ಯಾಂಪ್‍ಗೆ ಡಿಹೆಚ್‍ಓ ರವರು ಸಹಕರಿಸಬೇಕು. ಕೆಎಂಎಫ್‍ನಿಂದ ರಿಯಾಯಿತಿ ದರದಲ್ಲಿ ಮಜ್ಜಿಗೆ ಪ್ಯಾಕೆಟ್ ವ್ಯವಸ್ಥೆ ಮಾಡಿದರೆ ಒಳಿತು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ತಮ್ಮೆಲ್ಲರ ಆಶಯದಂತೆ ನಮ್ಮ ತಂಡ ಕಾರ್ಯ ನಿರ್ವಹಿಸಲಿದೆ. ಕೊರೊನಾ ಮಾರಿಯ ಜೊತೆಗೆ ಬ್ರಿಟನ್ ರೂಪಾಂತರಿ ವೈರಸ್ ಬಂದಿದೆ. ಹಾಗಾಗಿ ಅಗತ್ಯ ಮುಂಜಾಗ್ರತೆಯೊಂದಿಗೆ ಜಾತ್ರೆ ನಡೆಯಬೇಕಿದ್ದು, ಅಂಗಡಿ ಮುಂಗಟ್ಟುಗಳು ಅಲ್ಪ ಪ್ರಮಾಣದಲ್ಲಿ ಇರುವಂತೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಾತ್ರೆ ಆಚರಿಸಲಾಗುವುದು ಎಂದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ಮಾಜಿ ಆಪ್ತ ಕಾರ್ಯದರ್ಶಿ ಹೀರಾನಾಯ್ಕ್, ತಾಂಡಾ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಭೋಜ್ಯನಾಯಕ್ ಸಂತ ಸೇವಾಲಾಲ್ ಪ್ರತಿಷ್ಟಾನದ ಸದಸ್ಯರಾದ ಸವಿತಾ ಶಿವಕುಮಾರ್, ಗಿರೀಶ್, ಭರತ್ ನಾಯ್ಕ, ಕವಿತಾಬಾಯಿ, ತುಳಜಾನಾಯಕ್, ಎಸ್.ಪಿ ಹನುಮಂತರಾಯ, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಮತ್ತಿತರೆ ಪದಾಧಿಕಾರಿಗಳು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243