ದಿನದ ಸುದ್ದಿ
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ : ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ
ಸುದ್ದಿದಿನ,ದಾವಣಗೆರೆ : ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಅಪರಾಧಕ್ಕೆ ಸಂಬಂಧಿಸಿದಂತೆ ದಾವಣಗೆರೆಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ರೂ. ದಂಡವನ್ನು ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ವಿಶೇಷ ನ್ಯಾಯಾಧೀಶರಾದ ಶ್ರೀಪಾದ್ ಎನ್ ಅವರು ತೀರ್ಪು ನೀಡಿದ್ದಾರೆ.
ಚನ್ನಗಿರಿ ಪೋಲಿಸ್ ಠಾಣಾ ವ್ಯಾಪ್ತಿಯ ದೇವಿದುರ್ಗಾ ಗ್ರಾಮದ ಲಕ್ಷ್ಮೀ ಕೋಂ ಶ್ರೀನಿವಾಸ್ (ಹೆಸರು ಬದಲಾಯಿಸಲಾಗಿದೆ) ಇವರು ತಮ್ಮ ಮಗಳ ಮೇಲೆ ಆಗಿರುವ ಲೈಂಗಿಕ ಅತ್ಯಾಚಾರದ ಬಗ್ಗೆ ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಚನ್ನಗಿರಿ ಪೋಲಿಸ್ ಠಾಣೆಯ ಪೆÇೀಲಿಸ್ ತನಿಖಾಧಿಕಾರಿಯಾಗಿದ್ದ ಗಜೇಂದ್ರಪ್ಪ ಕೆ.ಎಸ್. ಅವರು ತನಿಖೆ ಕೈಗೊಂಡು, ಆರೋಪಿ ವಿರುದ್ಧ ಅಪರಾಧಕ್ಕೆ ಸಂಬಂಧಿಸಿದಂತೆ ದೋಶಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಪೋಕ್ಸೋ) ವಿಶೇಷ ನ್ಯಾಯಾಧೀಶರಾದ ಶ್ರೀಪಾದ್ ಎನ್. ಇವರು ದೋಷಾರೋಪಣಾ ಪಟ್ಟಿಯ ಅನುಸಾರ ಸಂಪೂರ್ಣ ವಿಚಾರಣೆ ನಡೆಸಿ, ಆರೋಪವು ಸಾಬೀತಾದ ಹಿನ್ನಲೆಯಲ್ಲಿ ಆರೋಪಿಗೆ 20 ವರ್ಷಗಳ ಶಿಕ್ಷೆ ಮತ್ತು ರೂ. 15,000 ದಂಡ ವಿಧಿಸಿದ್ದಾರೆ.
ದಂಡವನ್ನು ಪಾವತಿಸದೇ ಇದ್ದ ಪಕ್ಷದಲ್ಲಿ ಒಂದು ವರ್ಷಗಳ ಅವಧಿಗೆ ಆರೋಪಿಯನ್ನು ಕಾರಾಗೃಹ ವಾಸ ಅನುಭವಿಸುವಂತೆ ಆದೇಶ ನೀಡಿರುತ್ತಾರೆ. ಸಂತ್ರಸ್ಥೆಗೆ ಪರಿಹಾರ ರೂಪದಲ್ಲಿ ರೂ.5,50,000 ಪರಿಹಾರ ನೀಡುವ ಸಲುವಾಗಿ ಜಿಲ್ಲಾ ಉಚಿತ ಸೇವಾ ಪ್ರಾಧಿಕಾರಕ್ಕೆ ನೀಡುವಂತೆ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಹಿಂದೆ ಅಭಿಯೋಜಕರಾಗಿದ್ದ ಶೌಕತ್ ಅಲಿ ಹಾಗೂ ಪ್ರಸ್ತುತ ವಿಶೇಷ ಸರ್ಕಾರಿ ಅಭಿಯೋಜಕರಾಗಿರುವ ರೇಖಾ ಎಸ್. ಕೋಟೆಗೌಡರ್ ಅವರು ಪೋಕ್ಸೋ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243