ಲೋಕಾರೂಢಿ

ಹಿಂದುತ್ವ ಭಯೋತ್ಪಾದನೆ ಕುರಿತು ನಾಚಿಕೆಗೇಡಿನ ತೀರ್ಪು : ಪ್ರಕಾಶ ಕಾರಟ್

Published

on

 

“ಸಮಝೋತಾ, ಮಲೆಗಾಂವ್, ಮೆಕ್ಕಾ ಮಸೀದಿ ಮತ್ತು ಅಜ್ಮೇರ್ ಷರೀಫ್ ಸ್ಫೋಟ ಪ್ರಕರಣಗಳು ಹಿಂದೂ ಉಗ್ರಗಾಮಿಗಳು ಭಯೋತ್ಪಾದನೆ ದಾಳಿಗಳನ್ನು ಯೋಜಿಸಿದ್ದಾರೆ ಅಥವಾ ಕಾರ್ಯರೂಪಕ್ಕೆ ತಂದಿದ್ದಾರೆ ಎಂಬುದನ್ನು ಮೋದಿ ಸರಕಾರ ಗುರುತಿಸುವುದೂ ಇಲ್ಲ ಒಪ್ಪುವುದೂ ಇಲ್ಲ. ಮೋದಿ ಸರಕಾರದ ಪ್ರಕಾರ ಮುಸ್ಲಿಂ ಉಗ್ರಗಾಮಿಗಳು ಮಾತ್ರವೇ ಭಯೋತ್ಪಾದನೆ ಕೃತ್ಯಗಳನ್ನು ನಡೆಸುತ್ತಾರೆಯೇ ಹೊರತು ಹಿಂದೂ ಉಗ್ರಗಾಮಿಗಳಲ್ಲ. ಈ ಮೈನಡುಗಿಸುವ ಸಂದೇಶವನ್ನು ಸಾರಲು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗುತ್ತಿದೆ”.

 

ಮ್‌ಝೋತಾ ರೈಲು ಸ್ಫೋಟ ಪ್ರಕರಣದಲ್ಲಿ ಅಸೀಮಾನಂದ (ಮೂಲ ಹೆಸರು ನಬ ಕುಮಾರ್ ಸರ್ಕಾರ್) ಮತ್ತು ಇತರ ಮೂವರನ್ನು ನಿರ್ದೋಷಿ ಎಂದು ಘೋಷಿಸಿರುವುದು ಉಗ್ರ ಹಿಂದುತ್ವ ನಮೂನೆಯ ಭಯೋತ್ಪಾದಕರನ್ನು ಅವರು ಮಾಡಿದ ಅಪರಾಧಗಳಿಗಾಗಿ ಶಿಕ್ಷೆ ವಿಧಿಸಲು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಸಮರ್ಥವಾಗಿಲ್ಲ ಎನ್ನುವುದನ್ನು ಇನ್ನೊಮ್ಮೆ ನೆನಪಿಸಿದೆ. ಇದು ನಾಚಿಕೆಗೇಡಿನ ಸಂಗತಿ.

2006ಮತ್ತು 2008ರ ನಡುವೆ ಉಗ್ರ ಹಿಂದುತ್ವ ಗುಂಪುಗಳ ಜಾಲವು ಆರು ಭಯೋತ್ಪಾದನೆ ಕೃತ್ಯಗಳನ್ನು ನಡೆಸಿತ್ತು. ಅಸೀಮಾನಂದ, ಪ್ರಜ್ಞಾ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಈ ಕೃತ್ಯಗಳ ಪ್ರಮುಖ ಸಂಚುಕೋರರು.

ಆರ್‌ಎಸ್‌ಎಸ್-ವಿಎಚ್‌ಪಿ ಕಾರ್ಯಕರ್ತನಾದ ಅಸೀಮಾನಂದ ಈ ಹಿಂದೆ ಮೆಕ್ಕಾ ಮಸೀದಿ ಸ್ಫೋಟ ಮತ್ತು ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣಗಳಲ್ಲಿಯೂ ನಿರ್ದೋಷಿ ಎಂದು ಘೋಷಿತನಾಗಿದ್ದ. ಮುಸ್ಲಿಂ ಪ್ರಾರ್ಥನಾ ಸ್ಥಳಗಳ ಮೇಲಿನ ಭಯೋತ್ಪಾದನಾ ದಾಳಿಗಳ ಪ್ರಮುಖ ಸಂಘಟಕ ಈತನೇ ಎಂದು ಪರಿಗಣಿಸಲಾಗಿದೆ. ಈ ಎರಡೂ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಿತ್ತು. ನರೇಂದ್ರ ಮೋದಿ ಆಡಳಿತದಡಿಯಲ್ಲಿ, ಹಿಂದುತ್ವ ಉಗ್ರಗಾಮಿ ಗುಂಪುಗಳಿಗೆ ಸಂಬಂಧಿಸಿದ ಉಗ್ರಗಾಮಿ ಪ್ರಕರಣಗಳನ್ನು ಕೀಳಂದಾಜು ಮಾಡಿದ ಕುಖ್ಯಾತಿಯನ್ನು ಎನ್‌ಐಎ ಹೊಂದಿದೆ. 2017ರಲ್ಲಿ ಒಂಬತ್ತು ಜನರ ಸಾವಿಗೆ ಕಾರಣವಾದ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಅಸೀಮಾನಂದ ಸಹಿತ ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಲಾಯಿತು.
ಎನ್‌ಐಎ ನಿರ್ವಹಿಸಿದ ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ಕೂಡ ಅಸೀಮಾನಂದ ಮತ್ತು ಇತರ ಆರು ಮಂದಿಯನ್ನು ನಿರ್ದೋಷಿ ಎಂದು ಸಾರಲಾಯಿತು. ಈ ಪ್ರಕರಣದಲ್ಲಿ ಮಾತ್ರವೇ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆದರೆ ಆ ಶಿಕ್ಷೆಗೆ ಹೈಕೋರ್ಟ್ ತಡೆ ನೀಡಿದೆ. 2008ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ಞಾ ಠಾಕೂರ್ ವಿರುದ್ಧದ ಮೊಕಾ ಕಾನೂನು ಅನ್ವಯದ ಆರೋಪಗಳನ್ನು ಎನ್‌ಐಎ ಕೈಬಿಟ್ಟಿತು. ಆದರೆ ವಿಶೇಷ ನ್ಯಾಯಾಲಯವು ಕಾನೂನುಬಾಹಿರ ಚಟುವಟಿಕೆಗಳ ನಿಷೇಧ (ಯುಎಪಿಎ) ಕಾನೂನು ಅನ್ವಯ ಆಕೆ ವಿರುದ್ಧದ ಆರೋಪಗಳನ್ನು ಪುನಃ ಕೈಗೆತ್ತಿಕೊಂಡಿತು.

ಈ ಪ್ರಕರಣದಲ್ಲಿ ಮೃದು ಧೋರಣೆ ತಾಳುವಂತೆ ತನ್ನ ಮೇಲೆ ಎನ್‌ಐಎ ಒತ್ತಡ ಹೇರುತ್ತಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯಾನ್ ದೂರಿದಾಗಲೇ ಈ ಪ್ರಕರಣದಿಂದ ಪ್ರಜ್ಞಾ ಠಾಕೂರ್ ಮತ್ತು ಶ್ರೀಕಾಂತ್ ಪುರೋಹಿತ್‌ರನ್ನು ದೋಷಮುಕ್ತಗೊಳಿಸಲು ಎನ್‌ಐಎ ಪ್ರಯತ್ನಿಸುತ್ತಿರುವುದು ಬಯಲಾಗಿತ್ತು. ಪ್ರಜ್ಞಾ ಮತ್ತು ಪುರೋಹಿತ್‌ಗೆ ಜಾಮೀನು ನೀಡುವುದನ್ನು ಎನ್‌ಐಎ ವಿರೋಧಿಸಲಿಲ್ಲ.

ಸಮಝೋತಾ ರೈಲು ಸ್ಫೋಟ ಪ್ರಕರಣ ಅತ್ಯಂತ ಘೋರ ಭಯೋತ್ಪಾದನೆ ಪ್ರಕರಣಗಳಲ್ಲಿ ಒಂದಾಗಿದೆ. ಇದೀಗ ಹೊರಬಿದ್ದಿರುವ ನ್ಯಾಯಾಂಗದ ತೀರ್ಪು ಈ ಭಯೋತ್ಪಾದನೆ ಘಟನೆಗೆ ಯಾರೊಬ್ಬರೂ ಹೊಣೆಗಾರರಲ್ಲ ಎಂಬ ಸಂದೇಶವನ್ನು ಸಾರುತ್ತದೆ. ಆರ್‌ಎಸ್‌ಎಸ್ ಸಂಯೋಜಿತ ಸಂಘಟನೆಗಳ ವ್ಯಕ್ತಿಗಳಿಗೂ ಈ ಪ್ರಕರಣಕ್ಕೂ ನಂಟು ಇದೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿದ್ದರೂ ಈ ರೀತಿ ಆಗಿದೆ. ಹರ್ಯಾಣ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ ಮೊದಲು ಈ ಪ್ರಕರಣದ ತನಿಖೆ ನಡೆಸಿತ್ತು. ಆ ತಂಡ ರೈಲಿನಲ್ಲಿ ಸ್ಫೋಟಗೊಳ್ಳದೆ ಉಳಿದಿದ್ದ ಬಾಂಬ್‌ನ ಭಾಗಗಳನ್ನು ವಶಪಡಿಸಿಕೊಂಡಿದ್ದು ಅದನ್ನು ಇಂದೋರ್‌ನಲ್ಲಿ ಖರೀದಿಸಿದವರು ಯಾರು ಎನ್ನುವುದನ್ನು ಪತ್ತೆ ಮಾಡಿತ್ತು. ಬಾಂಬ್‌ಅನ್ನು ಇರಿಸಿದ್ದ ಸೂಟ್‌ಕೇಸನ್ನು ಕೂಡ ತಂಡ ಪತ್ತೆ ಹಚ್ಚಿ ಅದನ್ನು ನಗರದ ಯಾವ ಅಂಗಡಿಯಲ್ಲಿ ಖರೀದಿಸಲಾಗಿತ್ತು ಎನ್ನುವುದನ್ನೂ ಕಂಡುಹಿಡಿದಿತ್ತು. ಅದನ್ನು ಖರೀದಿಸಿದ ಇಬ್ಬರು ವ್ಯಕ್ತಿಗಳನ್ನು ಅಂಗಡಿಯ ಸಹಾಯಕರು ಗುರುತು ಹಿಡಿದಿದ್ದರು.

ಈ ಎಲ್ಲಾ ಪ್ರಕರಣಗಳಲ್ಲಿನ ವಿಧಾನ ಒಂದೇ ರೀತಿಯಾಗಿದೆ- ದುರ್ಬಲ ಪ್ರಾಸಿಕ್ಯೂಷನ್, ಸಾಕ್ಷಿಗಳು ತಿರುಗಿ ಬಿದ್ದಿರುವುದು ಹಾಗೂ ಈ ಪ್ರಕರಣಗಳನ್ನು ಸರಿಯಾಗಿ ತನಿಖೆಗೊಳಪಡಿಸುವಲ್ಲಿ ಎನ್‌ಐಎ ಯಲ್ಲಿ ದೃಢತೆಯ ಕೊರತೆ. ಮೆಕ್ಕಾ ಮಸೀದಿ ಪ್ರಕರಣದಲ್ಲೇ ಆಗಲಿ ಅಜ್ಮೇರ್ ದರ್ಗಾ ಪ್ರಕರಣದಲ್ಲೇ ಆಗಲಿ ಅಸೀಮಾನಂದರನ್ನು ದೋಷಮುಕ್ತಗೊಳಿಸಿದ ಕೋರ್ಟ್ ಆದೇಶವನ್ನು ಎನ್‌ಐಎ ಪ್ರಶ್ನಿಸಲಿಲ್ಲ.

೪೩ ಪಾಕಿಸ್ತಾನಿ ಪ್ರಜೆಗಳ ಸಹಿತ 68ಜನರ ಸಾವಿಗೆ ಕಾರಣವಾದ ಸಮಝೋತಾ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ನ್ಯಾಯಾಲಯಕ್ಕೆ ಮನವಿ ಮಾಡುವುದಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರೇ ಹೇಳಿದ್ದಾರೆ. ಇದು ಬಿಜೆಪಿ ಸರಕಾರದ ರಾಜಕೀಯ ಪಕ್ಷಪಾತತನವನ್ನು ತೋರಿಸುತ್ತದೆ. ಇದು ನ್ಯಾಯದ ವಿಡಂಬನೆ ಎಂದು ವರ್ಣಿಸಿದ ಪಾಕಿಸ್ತಾನ ಸರಕಾರಕ್ಕೆ ಪ್ರತಿಭಟನೆ ಸಲ್ಲಿಸಲು ಒಂದು ಅವಕಾಶವನ್ನು ಒದಗಿಸಿದೆ.

ಹಿಂದೂ ಉಗ್ರಗಾಮಿಗಳು ಭಯೋತ್ಪಾದನೆ ದಾಳಿಗಳನ್ನು ಯೋಜಿಸಿದ್ದಾರೆ ಅಥವಾ ಕಾರ್ಯರೂಪಕ್ಕೆ ತಂದಿದ್ದಾರೆ ಎಂಬುದನ್ನು ಮೋದಿ ಸರಕಾರ ಗುರುತಿಸುವುದೂ ಇಲ್ಲ ಒಪ್ಪುವುದೂ ಇಲ್ಲ ಎನ್ನುವುನ್ನು ಸಮಝೋತಾ, ಮಲೆಗಾಂವ್, ಮೆಕ್ಕಾ ಮಸೀದಿ ಮತ್ತು ಅಜ್ಮೇರ್ ಷರೀಫ್ ಸ್ಫೋಟ ಪ್ರಕರಣಗಳು ತೋರಿಸಿಕೊಟ್ಟಿವೆ. ಮೋದಿ ಸರಕಾರದ ಪ್ರಕಾರ ಮುಸ್ಲಿಂ ಉಗ್ರಗಾಮಿಗಳು ಮಾತ್ರವೇ ಭಯೋತ್ಪಾದನೆ ಕೃತ್ಯಗಳನ್ನು ನಡೆಸುತ್ತಾರೆಯೇ ಹೊರತು ಹಿಂದೂ ಉಗ್ರಗಾಮಿಗಳಲ್ಲ. ಈ ಮೈನಡುಗಿಸುವ ಸಂದೇಶವನ್ನು ಸಾರಲು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗುತ್ತಿದೆ.

( ಕೃಪೆ : ಜನಶಕ್ತಿಯ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

ಅನು: ವಿಶ್ವ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version