ದಿನದ ಸುದ್ದಿ
ನಾಡಿನೆಲ್ಲೆಡೆ ಶಂಕರಚಾರ್ಯರ ಜಯಂತಿ ಆಚರಣೆ
ಸುದ್ದಿದಿನ ಡೆಸ್ಕ್ : ಅದ್ವೈತ ಸಿದ್ಧಾಂತದ ಮೂಲಕ ಜಗತ್ತಿಗೆ ಸಾಕ್ಷಾತ್ಕಾರದ ಮಾರ್ಗ ತೋರಿದ ಆದಿ ಶಂಕರಚಾರ್ಯರ ಜಯಂತಿಯನ್ನು ರಾಜ್ಯಾದ್ಯಂತ ಶ್ರದ್ದಾ ಭಕ್ತಿಗಳಿಂದ ಆಚರಿಸಲಾಯಿತು.
ದೇಶದಲ್ಲಿ ಹಲವು ಮಠ ಮಾನ್ಯ ಸ್ಥಾಪನೆ ಮಾಡಿ ಸನಾತನ ಧರ್ಮಕ್ಕೆ ಉತ್ತಮ ತಳಹದಿ ಹಾಕಿಕೊಟ್ಟ ಶಂಕರಾಚಾರ್ಯರ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಟ್ವೀಟ್ ಮಾಡಿದ್ದು, ಭಾರತದ ಆಧ್ಯಾತ್ಮಿಕ ಜಗತ್ತಿನ ಆದಿ ಗುರುಗಳು, ಅದ್ವೈತ ಸಿದ್ಧಾಂತದ ಮೂಲಕ ಜನರಿಗೆ ಸಾಕ್ಷಾತ್ಕಾರದ ಮಾರ್ಗ ತೋರಿದ ಆದಿ ಶಂಕರಾಚಾರ್ಯರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು ಎಂದು ಹೇಳಿದ್ದಾರೆ.
ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಮಠದಲ್ಲಿಂದು ವಿಶೇಷ ಪೂಜೆ ಗುರು ವಂದನೆ ಕಾರ್ಯಕ್ರಮ ನಡೆಯಿತು. ಭಾರತಿ ತೀರ್ಥ ಸ್ವಾಮೀಜಿ, ವಿಧುಶೇಖರ ಸ್ವಾಮೀಜಿ ವಿಶೇಷ ಪೂಜೆ ನಡೆಸಿದರು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭ ಕಾರಂದ್ಲಾಜೆ ಶಂಕರಚಾರ್ಯರ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿ ಅವರ ಕೊಡುಗೆಗಳನ್ನು ಸ್ಮರಿಸಿದರು.
ಹಾವೇರಿಯ ಜಿಲ್ಲಾಡಳಿತ ಸಭಾ ಭವನದಲ್ಲಿಂದು ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮತ್ತಿತರ ಗಣ್ಯರು ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಮಂಗಳೂರಿನ ಹವ್ಯಕ ಮಂಡಲದ ಜಂಟಿ ಆಶ್ರಯದಲ್ಲಿ ಶಂಕರ ಶ್ರೀ ಸಭಾ ಭವನದಲ್ಲಿ ಶಂಕರಾಚಾರ್ಯರ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ ಮತ್ತಿತರ ಗಣ್ಯರು ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಮಂಡ್ಯದ ಕಲಾಮಂದಿರಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯ ಕುಮಾರ್ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನಸಲ್ಲಿಸಿ, ಆದಿ ಶಂಕರರು ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮ ಸೂತ್ರಗಳ ಕುರಿತು ತಮ್ಮ ಜ್ಞಾನವನ್ನು ಕೃತಿಗಳಲ್ಲಿ ಬಿತ್ತರಿಸಿದ್ದಾರೆ.
ದ್ವಾರಕಾ, ಕಾಶ್ಮೀರ, ಶೃಂಗೇರಿ ಹಾಗೂ ಪುರಿಯಲ್ಲಿ ನೆಲೆಗೊಂಡಿರುವ ಪ್ರಮುಖ ಮಠಗಳನ್ನು ನಿರ್ಮಿಸಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದರು. ಮಡಿಕೇರಿಯಲ್ಲಿ ಶಂಕರಾಚಾರ್ಯರ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್ ಚಾಲನೆ ನೀಡಿದರು. ಶಂಕರಾಚಾರ್ಯರು ಏಳನೇ ಶತಮಾನದಲ್ಲಿಯೇ ಹಿಂದು ಧರ್ಮದ ಮಹತ್ವ, ಸಂಸ್ಕೃತಿ ಬಗ್ಗೆ ವಿವರಿಸಿದ್ದಾರೆ. ಬದುಕಿದ್ದ 32 ವರ್ಷದಲ್ಲಿಯೇ ಶೃಂಗೇರಿ ಶಾರದ ಪೀಠ ಸೇರಿದಂತೆ ಹಲವು ಕಡೆ ಪೀಠಗಳನ್ನು ಸ್ಥಾಪಿಸಿದ್ದರು ಎಂದರು.
ಚಿತ್ರದುರ್ಗದಲ್ಲಿ ನಡೆದ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಮಾತನಾಡಿ ಶಂಕರಾಚಾರ್ಯರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅಪಾರ ಜ್ಞಾನವನ್ನು ಹೊಂದಿದ್ದ ಮಹಾನ್ ವ್ಯಕ್ತಿ. ಅದ್ವೈತ ಸಿದ್ದಾಂತವನ್ನು ಇಡೀ ಜಗತ್ತಿಗೆ ಸಾರಲು ಕಾಲ್ನಡಿಗೆಯಲ್ಲಿಯೇ ದೇಶ ಸಂಚರಿಸಿದರು. ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸುವ ಮೂಲಕ ಅದ್ವೈತ ಸಿದ್ಧಾಂತ ಹಾಗೂ ತತ್ವಗಳನ್ನು ಜನರಿಗೆ ಪಸರಿಸಿದರು ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243