ನೆಲದನಿ

ಜೀವಸೆಲೆಯ ಕವಿ ಶರೀಫ್ ಹಸಮಕಲ್ ಅವರ ‘ಚಿಲ್ಲರೆಗೆ ಕದಲದ ಜಾಗ’

Published

on

ಹೊಸ ತಲೆಮಾರಿನ ತರುಣ ಬರಹಗಾರರಲ್ಲಿ ಶರೀಫ್ ಹಸಮಕಲ್ ಅವರು ಒಬ್ಬರಾಗಿದ್ದಾರೆ. ತನ್ನ ಮಣ್ಣಿನ ಸೊಗಡಿನೊಂದಿಗೆ ವರ್ತಮಾನದ ತಲ್ಲಣಗಳನ್ನು ತನ್ನ ಕಾವ್ಯಗಳಲ್ಲಿ ವ್ಯಕ್ತಪಡಿಸುತ್ತ ಬಂದಿರುವ ಗೆಳೆಯ ಶರೀಫ್ ಅವರ ಮೊದಲ ಕವನ ಸಂಕಲನ ‘ಚಿಲ್ಲರೆಗೆ ಕದಲದ ಜಾಗ’ವು ಸಮಕಾಲೀನ ಸಮಾಜಿಕ ಬದುಕನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ನೆಲಮೂಲ ಬದುಕಿನ ಜೀವಪರವಾದ ಕಾಳಜಿ ಸದಾ ಕ್ರಿಯಾಶೀಲವಾಗಿದೆ. ಸದಾ ಜೀವಪರವಾಗಿ ತುಡಿಯುವ ಈ ಕಾವ್ಯಗುಚ್ಚವು ತರುಣ ಬರಹಗಾರರು, ಯುವಕವಿಗಳ ಸಂವೇದನೆಗಳನ್ನು ಅನಾವರಣಗೊಳಿಸುವ ಕೃತಿಯಾಗಿದೆ. ಯಾವುದೇ ಸಾಹಿತ್ಯವಾಗಲಿ, ಸಾಹಿತಿಯಾಗಲಿ ಸಾರ್ವತ್ರಿಕವಾಗಿ ಜನ ಮನ್ನಣೆಯನ್ನು ಗಳಿಸುವುದಕ್ಕಾಗಲಿ ಅಥವಾ ಎಲ್ಲ ವರ್ಗದ ಜನರ ಮನಸ್ಸಿನಲ್ಲಿ ನೆಲೆಯೂರಬೇಕಾದರೆ ಅದು ಭೂತ, ವರ್ತಮಾನ, ಭವಿಷ್ಯತ್ತನ್ನು ಬೆಸೆಯುವ ಗುಣವನ್ನು ಹೊಂದಿರಬೇಕಾಗುತ್ತದೆ.

ಹಾಗೆಯೇ ಸಾಹಿತಿಯು ಜಾತಿ, ಮತವನ್ನು ಮೀರಿ ಮಾನವೀಯ ನೆಲೆಗಳನ್ನು ಬಿತ್ತರಿಸಿದಾಗ ಮಾತ್ರ ಅಂತಹ ಬರಹಗಳು ಹೆಚ್ಚು ಹೆಚ್ಚು ಜೀವಂತಿಕೆಯನ್ನು ಪಡೆದುಕೊಳ್ಳುತ್ತವೆ. ಇಂತಹ ಬರಹಗಳು ಸಹೃದಯನ ಸಂವೇದನೆಗಳನ್ನು ಬಡಿದೆಬ್ಬಿಸುತ್ತವೆ. ಈ ಕಾರಣದಿಂದಾಗಿ ಇಂದಿಗೂ ನಮ್ಮ ಜಾನಪದ ಸಾಹಿತ್ಯ, ಶರಣರ ವಚನ ಹಾಗೂ ತತ್ವಪದಗಳು ಜನಮಾನಸದಲ್ಲಿ ಜೀವಂತವಾಗಿ ನೆಲೆಯೂರಿವೆ. ಈ ಮಾತಿನ ಹಿಂದಿನ ಅರ್ಥವಿಷ್ಟೇ, ಯುವ ಕವಿಯಾಗಿರುವ ಶರೀಫ್ ಅವರ ಕಾವ್ಯಗಳಲ್ಲಿ ಈ ಅಂಶಗಳು ಕೆಲವೊಂದು ಕಡೆ ಸ್ಪಷ್ಟವಾಗಿ ಗೋಚರವಾಗುತ್ತವೆ.

ಅಸಮಾನತೆ, ಅನ್ಯಾಯ, ಶೋಷಣೆ ಹಾಗೂ ಡಂಬಾಚಾರಗಳನ್ನು ಬೆರಳು ಮಾಡಿ ತೋರುವ ಕವಿ, ಜೀವ ಜಗತ್ತಿಗೆ ಕಾರುಣ್ಯದ ಅಗತ್ಯತೆಯನ್ನು ಮಾನವೀಯ ನೆಲೆಯಲ್ಲಿ ಕಟ್ಟಿಕೊಡುತ್ತಾರೆ. ಈ ಕಾರಣದಿಂದಾಗಿ ಬರಡಾಗುತ್ತಿರುವ ಮತ್ತು ಸತ್ವಹೀನವಾಗುತ್ತಿರುವ ಕನ್ನಡ ಸಾಹಿತ್ಯ ವಲಯದಲ್ಲಿ ಇಂತಹ ಮೌಲ್ಯಯುತವಾದ ಸಾಹಿತ್ಯದ ಚಿಗುರು ಕನ್ನಡ ಸಾಹಿತ್ಯವನ್ನು ಆಧುನಿಕ ಯುಗದಲ್ಲಿಯೂ ಸಿಂಗಾರಗೊಳಿಸುವುದೆಂಬ ಆಶಯವು ಒಂದು ಕಡೆಯಲ್ಲಿ ಒಡಮೂಡುತ್ತದೆ.

ಸಾಹಿತ್ಯ ಎಂದರೆ ವರ್ಣಿಸಿಯೇ ಬರೆಯಬೇಕೆಂಬ ಮಾನದಂಡಗಳು ಒಂದು ಕಾಲದಲ್ಲಿ ರೂಪಿಸಿಕೊಂಡ ಚೌಕಟ್ಟಾಗಿತ್ತು. ಆದರೆ ಇಂದು ಅದರ ಸ್ವರೂಪ ಬದಲಾಗಿದೆ. ನಮ್ಮ ಬದುಕಿನ ಜೀವನ ಕ್ರಮವನ್ನು ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಅರಿಯುವ ಮಾನದಂಡವಾಗಿಯೂ ನಮ್ಮ ಸಾಹಿತ್ಯ ಪರಂಪರೆಯು ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಗಮನಿಸುವುದಾದರೆ, ಗೆಳೆಯನ ಕಾವ್ಯಶಕ್ತಿ ವರ್ತಮಾನದ ಬದುಕಿನ ವಿವಿಧ ನೆಲೆಗಳನ್ನು ಅನಾವರಣಗೊಳಿಸುತ್ತಿರುವ ಸ್ವರೂಪವನ್ನು ಅವರ ಕಾವ್ಯಗಳಲ್ಲಿ ಗುರುತಿಸಬಹುದಾಗಿದೆ.

ಸಮಾಜದಲ್ಲಿನ ಅಸಮಾನ ನೆಲೆಗಳನ್ನು ಮೆಟ್ಟಿನಿಂತು, ಸಮಸಮಾಜವನ್ನು ಬಯಸುವ ಮತ್ತು ಕಟ್ಟುವ ಆಶಯವೊಂದು ಇವರ ಕಾವ್ಯಗಳಲ್ಲಿ ಕಂಡುಬರುತ್ತದೆ. ಈ ಸಮಸಮಾಜದ ಆಶಯಗಳನ್ನು ಬಯಸುತ್ತಿರುವ ಕವಿಯು ತನ್ನ ದರ್ಶನದ ಮೂಲಕವಾಗಿ ಮತ್ತೇ ಬುದ್ಧನತ್ತ ಮುಖ ಮಾಡುತ್ತಾರೆ. ‘ಮತ್ತೊಮ್ಮೆ ಬುದ್ಧ ತಪಸ್ಸಿಗೆ’ ಎಂಬ ಕವಿತೆಯಲ್ಲಿ ಮೂಲಭೂತವಾದಿಗಳ ಕುತಂತ್ರಕ್ಕೆ ಬಲಿಯಾದ ಬುದ್ಧನ ಸಂಕಷ್ಟವನ್ನು ಅರಿತು, ಮತ್ತೊಮ್ಮೆ ಬುದ್ಧ ಜನ್ಮವೆತ್ತಿ ಬಂದು ತಾನು ನೀಡಿದ ದರ್ಶನವನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆ

ಇಂದಿಗೆ ಇದೆ ಎಂದು ಸಾರುವ ಕವಿ,
ಇಳಿಸಂಜೆಯಲಿ ಬುದ್ಧನ ಬೆಳಕ ಕಂಡು
ದಂಡಿಗೆ ಬಂದು ಬಡಿದು ಕೂಗಿತು
ಬೆಳಕಿಗೆ ಬೀಗ ಬಿದ್ದಿದೆ ಎಂದು…

ಬುದ್ಧ ಈ ಜಗತ್ತಿಗೆ ನೀಡಿದ ಬೆಳಕಿಗೆ ಬೀಗ ಬಿದ್ದಿದೆ ಎಂಬುದನ್ನು ಪ್ರತಿಮಾತ್ಮಕವಾಗಿ ವಿಂಡಂಬನೆಗೆ ಒಳಪಡಿಸುತ್ತಾರೆ. ಇಲ್ಲಿ ಕವಿಯನ್ನು ಕಾಡುವ ಬಹುಮುಖ್ಯವಾದ ಪ್ರಶ್ನೆಯೆಂದರೆ, ಬಾಬಾಸಾಹೇಬರು ಬುದ್ಧನ ಮಾರ್ಗದಲ್ಲಿ ಮುಂದುವರೆದು, ಶತಮಾನಗಳಿಂದ ಶೋಷಣೆಗೆ ಗುರಿಯಾಗಿರುವ ದಮನಿತರ ಬದುಕಿಗಾಗಿ ಬೆಳಕೊಂದನ್ನು ನೀಡಿದರು. ಆ ಮೂಲಕವಾಗಿ ಬುದ್ಧನನ್ನು ಪರಿಚಯಿಸಿದರು. ಆದರೆ ಅದೇ ಬುದ್ಧನನ್ನು ಕೇಂದ್ರವಾಗಿಟ್ಟುಕೊಂಡು ಹಲವಾರು ಮೂಲಭೂತವಾದಿ ಶಕ್ತಿಗಳು ಸಮಾಜದಲ್ಲಿ ಅಸಮಾನತೆಯ ಬೀಜವನ್ನು ಬಿತ್ತುತ್ತಿರುವ ಕುರಿತು ಇಲ್ಲಿ ಆತಂಕವಿದೆ. ಈ ಆತಂಕದ ಬಿಡುಗಡೆಗೆ ಪರಿಹಾರವಾಗಿ ಮತ್ತೇ ಬುದ್ಧ ಜನ್ಮವೆತ್ತಬೇಕಾದ ಅನಿವಾರ್ಯತೆಯನ್ನು ಕವಿ ತನ್ನ ಕಾವ್ಯದ ಮೂಲಕ ಪ್ರತಿಪಾದಿಸುತ್ತಾರೆ. ಹಾಗೆಯೇ,

ಬುದ್ಧ ಕುಂತ ಜಾಗಕ್ಕೆ ನೀರು ಚಿಮುಕಿಸಿ
ಬೋರ್ಡೊಂದ ನೇತಾಕಿದೆ
ಮಾತು, ಮನಸು ಮಾರಾಟಕ್ಕಿವೆ ಎಂದು

ಇಂದು ಬುದ್ಧ ಹಾಗೂ ಆತನ ವಿಚಾರಧಾರೆಗಳು ಕಾರ್ಪೋರೇಟ್ ಶಕ್ತಿಗಳಿಗೆ ಆದಾಯದ ಮೂಲವಾಗಿದೆ. ಬುದ್ಧನನ್ನೇ ಅಸ್ತ್ರವಾಗಿ ಬಳಸಿಕೊಂಡು ನವ ಪುರೋಹಿತಶಾಹಿ ವರ್ಗವೊಂದು ರೂಪತಳೆಯತ್ತದೆ. ಈ ವರ್ಗಕ್ಕೆ ಜಗತ್ತಿಗೆ ಶಾಂತಿಯನ್ನು ಸಾರಿದ ಬುದ್ಧನ ಆಶಯಗಳಿಗಿಂತ ಮುಖ್ಯವಾಗುವುದು ಬಂಡವಾಳ. ಲೋಕದ ದುಖಃಕ್ಕೆ ಕಾರಣ ಹುಡುಕಲು ಹೊರಟ ಬುದ್ಧ ತನ್ನೇಲ್ಲ ಸಂಪತ್ತು, ಸುಖ, ಸಂತೋಷಗಳನ್ನು ತೊರೆದ. ಆದರೆ ಇಂದು ತಮ್ಮ ಅಸ್ತಿತ್ವದ ತಡಕಾಟಕ್ಕೆ ಮುಂದಾಗಿರುವ ಕಾರ್ಪೋರೇಟ್ ಮನಸುಗಳು ಬುದ್ಧನನ್ನು ಒಂದು ಸರಕಾಗಿ ಬಳಸಿಕೊಳ್ಳುತ್ತಿವೆ. ತನ್ನ ಸಂಸಾರ, ರಾಜ್ಯ, ಆಸ್ತಿ ಪಾಸ್ತಿ ಎಲ್ಲವನ್ನು ತೊರೆದು ಜಗತ್ತಿನ ಕಲ್ಯಾಣವನ್ನು ಅರಸಿ ಹೊರಟಂತಹ ಬುದ್ಧ ಬಂಡವಾಳದ ಸರಕಾಗಿರುವ ಬಗೆಗೆ ತರುಣ ಕವಿಯಾದ ಹಸಮಕಲ್ ಅವರಿಗೆ ಅಸಹನೆ ಇದೆ. ಇಂತಹ ಸೂಕ್ಷ್ಮ ಎಳೆಗಳ ಜಾಡು ಹಿಡಿದು ಹೊರಟ ಕವಿ,

ಗುಂಡಿಗೆಯ ಸದ್ದು ಗುಂಡು ನುಂಗುತ್ತಿವೆ ಎಂದು
ನೆತ್ತರಿನ ಕಲೆ ಹೊರೆಸಲು ಸುರಿದ ಬುದ್ಧಮಳೆ
ಕೆಂಪುಕಲೆ ಕರಗಲೆ ಇಲ್ಲ….
ತೋಡಿದಷ್ಟು ಗಟ್ಟಿಗೊಳ್ಳುವ ಮಣ್ಣು
ಸಸಿ ನೆಡದೆ
ಬಂದ ಬುದ್ಧ
ಅರಳಿಮರದತ್ತ ಮತ್ತೊಂದು ತಪಸ್ಸಿಗೆ…

ಎಂದು ಸಾರುವ ಕವಿಯು ಹಲವು ರೂಪಕಗಳ ಅಡಿಯಲ್ಲಿ ಸಮಕಾಲೀನ ಸಮಾಜದ ತಲ್ಲಣಗಳನ್ನು ಕಟ್ಟಿಕೊಡುತ್ತಲೇ ಶತಮಾನಗಳ ಚರಿತ್ರೆಯ ಕ್ರಿಯೆ ಹಾಗೂ ಪ್ರತಿಕ್ರಿಯೆಗಳನ್ನು ಬೆಸೆಯುವ ಪ್ರಯತ್ನ ಮಾಡುತ್ತಾರೆ. ‘ತೋಡಿದಷ್ಟು ಗಟ್ಟಿಗೊಳ್ಳುವ ಮಣ್ಣು’ ಎಂಬ ರೂಪಕವು ಸಾಮಾಜಿಕ ಸುಧಾರಣೆಗಾಗಿ ಹಲವಾರು ಸಮಾಜ ಸುಧಾರಕರು ನಡೆಸಿದ ಪ್ರಯತ್ನ ಹಾಗೂ ಅದರ ಪ್ರತಿಫಲಗಳನ್ನು ಅನಾವರಣಗೊಳಿಸುತ್ತದೆ. ಯುದ್ಧ, ಆಕ್ರಮಣ, ಭಯೋತ್ಪಾದಕತೆಯಂತಹ ಅಮಾನವೀಯ ಕೃತ್ಯಗಳು ಚರಿತ್ರೆಯುದ್ಧಕ್ಕೂ ನಿರಂತರವಾಗಿ ನಡೆಯುತ್ತಲೆ ಬಂದಿವೆ. ಆದರೆ ಇವುಗಳು ಅತಿಯಾದ ತಾರಕಕ್ಕೆ ಹೋದ ಸಂದರ್ಭದಲ್ಲಿ ಹಲವಾರು ಕ್ರಾಂತಿಪುರುಷರು ಜನ್ಮತಾಳಿದ್ದಾರೆ.

ಇಂತಹ ಸಮಾಜ ಸುಧಾರಕರಲ್ಲಿ ಬುದ್ಧ, ಬಸವ, ಫುಲೆ, ವಿವೇಕಾನಂದ, ಅಂಬೇಡ್ಕರ್ ಅವರಂತಹ ಹಲವಾರು ಯುಗಪುರುಷರು ಜನ್ಮವೆತ್ತು ಅಸಮಾನತೆ, ಅನ್ಯಾಯ ಹಾಗೂ ಅಸಹನೆಯ ವಿರುದ್ಧ ಹೋರಾಟ ನಡೆಸಿದ್ದಾರೆ. ಆದರೆ ಇವರೆಲ್ಲ ಲೋಕ ಕಲ್ಯಾಣಕ್ಕಾಗಿ ಅವಿರತವಾದ ಹೋರಾಟ ನಡೆಸಿ, ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುಂದಾದರು ಸಹ ಈ ಸಮಾಜದಲ್ಲಿ ಕ್ರೌರ್ಯದ ಸ್ವರೂಪವು ಮಾತ್ರ ಪ್ರಬಲಗೊಳ್ಳುತ್ತಲೆ ಮುನ್ನೆಡೆದು ಬಂದಿದೆ. ತನ್ನ ಸಮಕಾಲೀನ ಸಂದರ್ಭದ ಈ ಒತ್ತಡವನ್ನು ಪ್ರತಿರೋಧಿಸುವ ವಿಭಿನ್ನ ಆಯಾಮಗಳಲ್ಲಿ ಇಲ್ಲಿನ ಕವಿತೆಗಳು ಎದುರಾಗುತ್ತವೆ.

ಸಾಮಾಜಿಕ ಅಸಮಾನತೆಯನ್ನು ಕುರಿತು ಪ್ರತಿಭಟನಾತ್ಮಕ ನೆಲೆಯಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಕವಿಗಳು, ತಮ್ಮ ‘ಚಿಲ್ಲರೆಗೆ ಕದಲದ ಜಾಗ’ ಎಂಬ ಕವಿತೆಯ ಮೂಲಕ ತಳಸಮುದಾಯದ ಶೋಚನೀಯ ಬದುಕನ್ನು ಅನಾವರಣಗೊಳಿಸುತ್ತಾರೆ. ಉಳ್ಳವರ ಸಿರಿತನದ ದಾಹಕ್ಕೆ ಬಲಿಯಾಗುವ ದಮನಿತರ ಸ್ಥಿತಿಯನ್ನು ಕಂಡು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುವ ಬಗೆಯೊಂದು ಹೀಗಿದೆ;

ಬೀದಿ ದೀಪದಲಿ
ದುಂಡುಮಲ್ಲಿಗೆಯ ಅರೆನಗ್ನದಾಕೆ
ಸೆರಗ ಸರಿಸಿ ಎದೆಕಾಣಿಸಿ ಹಸಿದಹೊಟ್ಟೆ ಮುಚ್ಚಿ
ಸುಖಪಟ್ಟ ದೇಹಗಳ ದಾಟಿ
ತಂಗಿ ಗೌರಿಗೇಕೆ ಆ…ಪ್ರಶ್ನೆ

ಎಂಬುದಾಗಿ ತಮ್ಮ ಸಮಾಜದಲ್ಲಿ ಒಂದೊತ್ತಿನ ಊಟಕ್ಕೂ ದೇಹವನ್ನು ಮಾರಿಕೊಂಡು ಜೀವನ ಸಾಗಿಸುವ ಹೆಣ್ಣುಗಳನ್ನು ತನ್ನ ಅಕ್ಕ ತಂಗಿಯರೆಂದು ಮರುಗುವ ಮೂಲಕವಾಗಿ ಸಾಮಾಜಿಕ ವ್ಯವಸ್ಥೆಗೆ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಇಂದಿನ ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಮೂಲಭೂತವಾದ ಮತ್ತು ಕೋಮುವಾದವು ದಿನದಿಂದ ದಿನಕ್ಕೆ ವಿಕೃತ ಸ್ವರೂಪವನ್ನು ತಾಳುತ್ತಿದೆ. ಆದರೆ ಇಲ್ಲಿ ಮಾನವೀಯ ಅಂತಃಕರಣದ ನೆಲೆಯಲ್ಲಿ ನಿಂತು ಅನ್ಯಧರ್ಮಿಯ ಹೆಣ್ಣೊಬ್ಬಳನ್ನು ತನ್ನ ತಂಗಿ ಎಂದು ಪರಿಭಾವಿಸುವ ಧಾಟಿಯು ವಿಶ್ವಮಾನವತ್ವದ ಪ್ರತಿರೂಪವಾಗಿ ಕಂಡುಬರುತ್ತದೆ. ಈ ಗುಣಗಳು ಸರ್ವಧರ್ಮಿರಲ್ಲಿ ಮೂಡಿದಾಗ ಮಾತ್ರ ಬದಲಾವಣೆಯೆಂಬುದು ಸಾಧ್ಯವಾಗುತ್ತದೆ. ಅನ್ಯಧರ್ಮಿಯರು ಪರಸ್ಪರ ಕಿತ್ತಾಟ ಮಾಡುವಂತಹ ಈ ಚಿಲ್ಲರೆ ಪ್ರವೃತ್ತಿಯಿಂದ ಸಾಮಾಜಿಕ ಬದಲಾವಣೆ ಸಾಧ್ಯವೆ ಇಲ್ಲ ಎಂಬುದನ್ನು ಎತ್ತಿಹಿಡಿಯುವ ಕವಿಗಳು, ಸಾಮಾಜಿಕ ಬದುಕಿನಲ್ಲಿ ಮನುಷ್ಯನ ವರ್ತನಗೆ ಬೇಸತ್ತು;

ಕಛೇರಿ ಗೋಡೆಗೆ ನೀಲಿ ದಪ್ಪಕ್ಷರಕ್ಕೆ
ಕಾಲೆತ್ತಿ ಉಚ್ಚಿ ಹೊಯ್ಯುವ ನಾಯಿಗೆ
ಅಚ್ಚ…
ಎನ್ನದೆ ಮುನ್ನಡೆದೆ

ಎನ್ನುವ ಕವಿಗೆ ಇಲ್ಲಿ ನಾಯಿಯ ವರ್ತನೆಗಿಂತ ಹಣ ಮತ್ತು ಕಾಮದಾಸೆಯ ಮಾನವನ ಪ್ರವೃತ್ತಿಯು ವಿಕೃತವಾಗಿ ಕಂಡುಬರುತ್ತದೆ. ಮಾನವ ಸಮಾಜದಲ್ಲಿ ನಡೆಯುವಂತಹ ಈ ಅಮಾನವೀಯ ಕೃತ್ಯಗಳನ್ನು ಪ್ರತಿಭಟಿಸುವ ಶಕ್ತಿಯನ್ನು ಕಳೆದುಕೊಂಡಿರುವ ನಮಗೆ ಆ ನಾಯಿಯ ಕೃತ್ಯವನ್ನು ತಡೆಯುವ ಯಾವುದೆ ನೈತಿಕ ಶಕ್ತಿ ಇಲ್ಲವೆಂಬುದನ್ನು ಕವಿಗಳು ಇಲ್ಲಿ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕವಿ ಪ್ರಗತಿಪರ ನೆಲೆಯಲ್ಲಿ ನಿಂತು ಸಮಾಜವನ್ನು ನೋಡುವ ಸಂದರ್ಭದಲಿ, ಮನುಷ್ಯ ಮನುಷ್ಯನ ನಡುವೆ ನಿರ್ಮಾಣಗೊಂಡಿರುವ ಅಸಮಾನತೆಯನ್ನು ಮೆಟ್ಟಿನಿಲ್ಲುವ ನೆಲೆಯಲ್ಲಿ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸುತ್ತಾರೆ. ಬಡವರು, ದಮನಿತರ ಮೇಲೆ ಹೇರುತ್ತಿರುವ ಕಾಯ್ದೆ, ಕಾನೂನುಗಳ ಕ್ರೂರತ್ವವನ್ನು ಕುರಿತು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಸರ್ಕಾರಿ ಕಾಯ್ದೆಗಳು ಸಾಮಾನ್ಯ ಜನತೆಯ ಮೇಲೆ ನಡೆಸುತ್ತಿರುವ ದಬ್ಬಾಳಿಗೆ ಕವಿಯ ಪ್ರತಿಕ್ರಿಯೆಯು ಪ್ರತಿರೋಧಿ ನೆಲೆಯಲ್ಲಿ ಮೂಡಿಬಂದಿದೆ.

ತುತ್ತಿಗೂ ತಂದಿದ್ದಾರೆ
ಕುತ್ತು
ಅವ್ವನ ತುತ್ತು
ಮಮತೆಯ ಮಡಿಲು
ಕಸಿದುಕೊಳ್ಳುವ ಕರಾರಿಗೆ
ಧಿಕ್ಕಾರ! ಧಿಕ್ಕಾರ!

ಎಂಬ ಕವಿಯ ಅಳಲು ಮಾನವೀಯತೆಯನ್ನು ಮರೆತ ಜಡ ಸಮಾಜವನ್ನು ವಿಡಂಬನೆಗೆ ಗುರಿಪಡಿಸುತ್ತದೆ. ಕವಿಯು ಯಾವಾಗೂ ಭೂತ, ಭವಿಷ್ಯತ್ತು ಮತ್ತು ವರ್ತಮಾನದ ಸರಪಳಿಯಂತೆ ಕಾರ್ಯನಿರ್ವಹಿಸಿದಾಗ, ಆತನ ಕಾವ್ಯ ಕುಲುಮೆಯಿಂದ ಮೂಡುವ ಕವಿತಾಶಕ್ತಿಯು ಜೀವಂತಿಕೆಯಿಂದ ಕೂಡಿರುತ್ತದೆ. ಸಮಕಾಲೀನ ಸಮಾಜದಲ್ಲಿ ನಿಂತು ಭೂತ ಮತ್ತು ಭವಿಷ್ಯತ್ತುಗಳನ್ನು ನೋಡುವ ಶರೀಫ್ ಹಸಮಕಲ್ ಅವರ ‘ಚಿಲ್ಲರೆಗೆ ಕದಲದ ಜಾಗ’ ಕಾವ್ಯಗುಚ್ಚವು ಜೀವಪರವಾದ ಆಶಯಗಳನ್ನು ಹೊಂದಿದೆ.

ತಾನು ಬೆಳೆದುಬಂದ ಪರಿಸರವನ್ನು, ತನ್ನ ಸುತ್ತಮುತ್ತಲಿನ ಜನಸಮುದಾಯವು ಅನುಭವಿಸುತ್ತಿರುವ ಸಂಕಷ್ಟಗಳನ್ನು ಪದಗಳ ಮೂಲಕ ಸೆರೆಹಿಡಿದು, ಅದಕ್ಕೆ ಜೀವತುಂಬುವ ಕಾಯಕದಲ್ಲಿ ಹೆಚ್ಚು ತೊಡಗಿರುವುದರ ಪ್ರತಿಫಲವೇ ಈ ಕವನ ಸಂಕಲನ. ಇದು ಬರೀ ಮನರಂಜನೆ ನೀಡುವ ಹೊತ್ತಿಗೆಯಲ್ಲ. ಶಾಂತಿಯ ನಾಡಲಿ ಅಶಾಂತಿಯನ್ನು ಸೃಷ್ಟಿಸಿ, ಸಮಾನತೆಯ ಜಾಗದಲ್ಲಿ ಅಸಮಾನತೆಯನ್ನು ಸೃಷ್ಟಿಸಿ, ಮನುಷ್ಯ ಮನುಷ್ಯನನ್ನು ಕೀಳಾಗಿ ನೋಡುವಂತಹ ಅಮಾನವೀಯ ಸಮಾಜದಲ್ಲಿ ಸಮಾನತೆಯ ಕನಸು ಕಾಣುವ ಜೀವಸೆಲೆ ಇದಾಗಿದೆ. ಇವರ ಜೀವಪರ ಕಾಳಜಿ ಹೀಗೆ ಮುಂದುವರೆಯಲಿ. ಕನ್ನಡ ಸಾಹಿತ್ಯಕ್ಕೆ ಮತ್ತಷ್ಟು ಜೀವದನಿ ಇವರ ಮೂಲಕ ಹರಿದು ಬರಲಿ.

(ಲೇಖಕರು: ಡಾ.ಕೆ.ಎ. ಓಬಳೇಶ್, ಸಂಶೋಧಕರು. ಇಮೇಲ್: eakantagiri@gmail.com. ಮೊ:
9538345639/ 9591420216 )

Leave a Reply

Your email address will not be published. Required fields are marked *

Trending

Exit mobile version