ದಿನದ ಸುದ್ದಿ

ನಮ್ಮ ಪ್ರೀತಿಯ ಹೆಡ್ ಮಾಸ್ಟರ್ ‘ಸಿದ್ದಗಂಗಾ’ ಶಿವಣ್ಣ..!

Published

on

ಕಳೆದ ಐದು ದಶಕಗಳಲ್ಲಿ ಭದ್ರವಾಗಿ ಬೇರು ಬಿಟ್ಟು ‘ಸಿದ್ದಗಂಗಾ’ ಎಂಬ ವಿಸ್ತಾರವಾದ ವೃಕ್ಷದ ನೆರಳಲ್ಲಿ ನೂರಾರು ಜನರಿಗೆ ಉದ್ಯೋಗ ನೀಡಿ, ಸಹಸ್ರಾರು ಮಕ್ಕಳಿಗೆ ಅವಿರತ ವಿದ್ಯೆ, ಬುದ್ದಿ ನೀಡಿ ಶಿಕ್ಷಣ ಶಿಲ್ಪಿಯಾದ ಪ್ರೀತಿಯ ಹೆಡ್ ಮಾಸ್ಟರ್ ಎಂ.ಎಸ್ ಶಿವಣ್ಣ ಶನಿವಾರ ನಮ್ಮನೆಲ್ಲಾ ಬಿಟ್ಟು ಅಗಲಿದರು.

ತಾನುರಿದು ತನ್ನ ಜ್ಞಾನ ಜ್ಯೋತಿಯಿಂದ ಅದೆಷ್ಟೋ ವಿದ್ಯಾರ್ಥಿಗಳ ಜೀವನಕ್ಕೆ ಜ್ಞಾನದೀಪ ಹಚ್ಚಿದ ದಿವ್ಯಾತ್ಮಕ್ಕೆ ನನ್ನ ಕೋಟಿ ವಂದನೆಗಳು. ಅವರ ವೃಕ್ಷದಡಿಯಲ್ಲೆ ಬೆಳೆದು ನಿಂತಿರುವ ನನಗೆ ಹೆಡ್ಮಾಷ್ಟರ್ ಎಂದರೆ ನೆನಪಾಗುವುದು ಎರಡು ಸಂಗತಿಗಳು. ಅಂದು ನನ್ನ ಪುಟ್ಟ ಪುಟ್ಟ ಕೈಗಳನ್ನಿಡಿದು ಒಳಕರೆದುಕೊಂಡು ಮುದ್ದಾಡಿಸಿದ ಹೆಡ್ಮಾಷ್ಟರನ್ನು ಕಳೆದ ನಾಲ್ಕೈದು ತಿಂಗಳ ಹಿಂದೆ ನೋಡಲು ಹೋದಾಗ ಅವರ ಪುಟ್ಟ ಪುಟ್ಟ ಕೈಗಳು ಬೆಳೆಸಿ ನಿಲ್ಲಿಸಿದ ನನ್ನ ಎರಡು ಕೈಗಳ ಮಧ್ಯೆ ಬಿಗಿದಪ್ಪಿತ್ತು.

ಅಂದು ಅವರನ್ನು ನೋಡಿ ತಡೆಯಲಾರದ ದುಃಖವು ಮನತುಂಬಿತ್ತು. ತಮ್ಮೆಲ್ಲಾ ಹಳೆಯ ದಿನಗಳ ನೆನಪುಗಳನ್ನು ಕಳೆದುಕೊಂಡ ಅಪ್ಪಜಿಯವರು ಮಗುವಿನ ರೀತಿ ಸ್ವಚ್ಚಂದವಾಗಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಕಲರವಗಳನ್ನು ನೋಡುತ್ತಾ ನಲಿಯುತ್ತಿದ್ದರು.

ಹೌದು! ಮೇಷ್ಟ್ರಾಗಬೇಕು ನಾನು ಶಾಲೆ ಕಟ್ಟಬೇಕು ಎಂಬ ಧ್ಯೇಯದೊಂದಿ ದಾವಣಗೆರೆಯಲ್ಲಿ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯನ್ನ ಸ್ಥಾಪಿಸಿದ ಹೆಡ್ ಮಾಸ್ಟರ್ ಅವರ ಜೀವನ ಶೈಲಿಯಿಂದ ನಾವೆನಾದರು ಕಲಿಯುದಿದೆ ಎಂದರೆ ಅದು ಶಿಸ್ತು, ಧೈರ್ಯ ಹಾಗೂ ಗುರು-ಗುರಿ ಇವುಗಳಿಂದ ಏನನ್ನಾದರು ಸಾಧಿಸಬಹುದೆಂಬುದನ್ನು ಸಾಧಿಸಿ ತೋರಿಸಿದ ಜೀವಂತ ಸಾಕ್ಷಿ ಇವರು.

ಹಣತೆಯ ಬಿತ್ತಿ ತಾನುರಿದು ಸುತ್ತಲೂ ಪ್ರಕಾಶ ಬೀರುವಂತೆ, ತೇಯ್ದಷ್ಟು ಚಂದನ ಘಮ ಘಮಿಸುವಂತೆ ಸಿದ್ದಗಂಗೆಯ ಕಂಪನ್ನು ಪ್ರಸರಿಸಿ ಸಾವಿರಾರು ವಿದ್ಯಾರ್ಥಿಗಳ ದೈತ್ಯ ಪ್ರತಿಭೆಗಳಿಗೆ ಸಾಕ್ಷತ್ಕರ ನೀಡುತ್ತಾ ಬಂದಿದ್ದಾರೆ. ದೇಶ ಮತ್ತು ಪ್ರಗತಿಯ ಬಗ್ಗೆ ಕಳಕಳಿಯಿರುವ ಶಿವಣ್ಣ ಹಲವು ದೌರ್ಜನ್ಯಗಳನ್ನು ಖಂಡಿಸಿ ಬಾಯಿಲ್ಲದವರಿಗೆ ಧ್ವನಿಯಾಗಿದ್ದಾರೆ.

ಇಂದು ನಮ್ಮನ್ನೆಲ್ಲಾ ಬಿಟ್ಟು ಅವರ ದೇಹವಷ್ಟೇ ಅಗಲಿದೆ ಆದರೆ ಅವರಚ್ಚಿದ ಜ್ಞಾನದ ಜ್ಯೋತಿ ಅನಂತವಾಗಿರುತ್ತದೆ. ಅವರಿಲ್ಲದಿರುವ ಸತ್ಯ ಎಷ್ಟೇ ಕಹಿಯಾದರೂ ಅದನ್ನ ಅರಗಿಸಿಕೊಳ್ಳುವ ಶಕ್ತಿ ನಮ್ಮೆಲ್ಲರಿಗೂ ನೀಡಬೇಕಾಗಿದೆ. ತುಂಬಾ ದುಃಖಕರವಾದ ಸಂಗತಿಯೆಂದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿರುವ ಕಾರಣದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೊನೆಯದಾಗಿ ಅವರ ಮುಖವನ್ನು ನೋಡ¯ಸಾಧ್ಯವಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

ನಿಮ್ಮ ವಿಧೇಯ ವಿದ್ಯಾರ್ಥಿನಿ
-ಪ್ರೀತಿ.ಟಿ.ಎಸ್
ದಾವಣಗೆರೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version