ದಿನದ ಸುದ್ದಿ
ಆನೆ ದಿನಾಚರಣೆಯಂದೇ ಹೆಣ್ಣಾನೆ ವಿದ್ಯುತ್ ಗೆ ಬಲಿ
ಸುದ್ದಿದಿನ ಡೆಸ್ಕ್ : ಎಚ್.ಡಿ.ಕೋಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹೆಡಿಯಾಲ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿರುವ ದೊಡ್ಡಬರಗಿ ಗ್ರಾಮದಲ್ಲಿ ಅಕ್ರಮ ವಿದ್ಯುತ್ ಬೆಳಿಗೆ ಸಿಲುಕಿ ಹೆಣ್ಣಾನೆ ಮೃತಪಟ್ಟಿದೆ.
ವಿಶ್ವ ಆನೆ ದಿನಾಚರಣೆಯಂದೇ ಘಟನೆ ನಡೆದಿದ್ದು, ಆಹಾರ ಅರಿಸಿ ಬಂದ ಹೆಣ್ಣಾನೆಯೊಂದು ಜೀವ ಕಳೆದುಕೊಂಡಿದೆ.
ವಿಶ್ವವೇ ಆನೆ ದಿನವನ್ನು ಆಚರಿಸಿ ಕಾಡಾನೆ, ಅವುಗಳ ಆವಾಸ ಸ್ಥಳಗಳ ರಕ್ಷಣೆ ಹಾಗೂ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುವಾಗಲೇ ಮಾನವನ ಕೃತ್ಯಕ್ಕೆ ಕಾಡಾನೆ ಮೃತಪಟ್ಟಿರುವುದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವನ್ಯಜೀವಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.
ಕಂದಲಿಕೆ ಹೋಬಳಿ ದೊಡ್ಡಬರಗಿ ಗ್ರಾಮದ ಗೋಪಾಲ ಎಂಬುವವರ ಜಮೀನಿನ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು. ಆಹಾರ ಅರಿಸಿ ಬಂದ ಸುಮಾರು 20ರಿಂದ 25 ವರ್ಷದ ಹೆಣ್ಣಾನೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದೆ. ಮುಂಜಾನೆ ಸ್ಥಳೀಯರು ಆನೆಯ ಮೃತದೇಹ ಕಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸ್ಥಳ ಪರಿಶೀಲನೆ ನಡೆಸಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಎಸಿಎಫ್ ಪರಮೇಶ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಪಶುವೈದ್ಯ ಡಾ.ನಾಗರಾಜು ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಅಕ್ರಮ ವಿದ್ಯುತ್ ಸಂಪರ್ಕದಿಂದ ಆನೆ ಮೃತಪಟ್ಟಿರುವುದನ್ನು ತಿಳಿಸಿದರು.
ಜಮೀನಿನ ಮಾಲೀಕ ಗೋಪಾಲ ಪರಾರಿಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.