ದಿನದ ಸುದ್ದಿ

ಶ್ರಾವಣ ಸಂಜೆಯ ಕಾಣಿಕೆ ಕೊಡಗು – ಕೇರಳ ಸಂತ್ರಸ್ತರ ಪುನರ್ವಸತಿಗೆ ಬಳಕೆ | ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಘೋಷಣೆ

Published

on

ಸುದ್ದಿದಿನ, ಅಲಬೂರು : ಶ್ರಾವಣ ಸಂಜೆಯ ಮೂವತ್ತು ದಿನಗಳ ಕಾರ್ಯಕ್ರಮದಲ್ಲಿ ಸಂಗ್ರಹವಾದ ಕಾಣಿಕೆಯನ್ನು ಕೊಡಗೂ,ಚಿಕ್ಕಮಗಳೂರು ಹಾಗೂ ಕೇರಳ ರಾಜ್ಯದಲ್ಲಿ ಉಂಟಾಗಿರುವ ಜಲ ಪ್ರಳಯದ ಸಂತ್ರಸ್ತರ ಪುನರ್ವಸತಿಗೆ ಬಳಕೆ ಮಾಡಲಾಗುವುದು ಎಂದು ತರಳಬಾಳು ಜಗದ್ಗುರು ಶಾಖಾ ಶ್ರೀ ಮಠದ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪ್ರಕೃತಿಯ ಅವಘಡದ ಅನೇಕ ಸಂಧರ್ಭಗಳಲ್ಲಿ ಮಾನವೀಯ ನೆಲೆಯಲ್ಲಿ ಅಂತಃಕರಣದಿಂದ ತರಳಬಾಳು ಜಗದ್ಗುರು ಬೃಹನ್ಮಠ ನಾಡಿನ ಕಷ್ಟ ಪರಿಸ್ಥಿತಿಗಳಲ್ಲಿ ಮಿಡಿದಿದೆ.ಅಪಾಯಗಳಲ್ಲಿ ಸಿಲುಕಿ ನರಳಾಡುತ್ತಿರುವವ ಬಾಂಧವರು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ವಂಚಿತರಾದ ಅವರ ಅಸಹಾಯಕತೆಯ ಆಕ್ರಂದನ ನಮ್ಮ ಮನಸ್ಸನ್ನು ಜರ್ಜರಿತಗೊಳಿಸಿದ್ದು.ಶ್ರಾವಣ ಸಂಜೆಯ ಮೂವತ್ತು ದಿನಗಳ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದ ಜೊತೆ ಇನ್ನೊಷ್ಟು ಸಂಗ್ರಹಿಸಿ ನಿರಾಶ್ರಿತರ ಕಷ್ಟದಲ್ಲಿಭಾಗಿಯಾಗುವುದಾಗಿ ತಿಳಿಸಿದರು .

ಕೊಟ್ಟೂರು ತಾಲ್ಲೂಕಿನ ಅಲಬೂರು ಗ್ರಾಮದಲ್ಲಿ ಶ್ರಾವಣ ಸಂಜೆಯ ಎಂಟನೇ ದಿನದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು ಆಶೀರ್ವಚನ ನೀಡಿದ ಶ್ರೀಗಳು ಬಸವಣ್ಣ ಹನ್ನೆರಡನೆಯ ಶತಮಾನದ ಅಗ್ರಮಾನ್ಯರಾದ ವಿಶ್ವಖ್ಯಾತಿಯ ವಿಭೂತಿ ಪುರುಷ .ತಲತಲಾಂತರದಿಂದ ಆಚರಣೆಯಲ್ಲಿದ್ದ ಅವಿವೇಕತನದ ಸಂಪ್ರದಾಯಗಳನ್ನು ದಿಕ್ಕರಿಸಿ ಸಮ ಸಮಾಜದ ನಿರ್ಮಾತೃ ಧಾರ್ಮಿಕ ವಿಮರ್ಶೆಯ ಜೊತೆ ಸಾಮಾಜಿಕ ವಿಮರ್ಶೆ,ರಾಜಕೀಯ ವಿಮರ್ಶೆ, ಸಾಹಿತ್ಯ ವಿಮರ್ಶೆಯ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿ ಯಶಸ್ಸು ಗಳಿಸಿದ ಮಹಾಮಾನವತಾವಾದಿಯ ಹಾದಿಯಲ್ಲಿ ಹೆಜ್ಜೆ ಹಾಕಲು ಕರೆ ನೀಡಿದರು.

‘ಬಸವಣ್ಣನವರ ಲೋಕ ವಿಮರ್ಶೆ’ ಕುರಿತು ಉಪನ್ಯಾಸ ನೀಡಿದ ಚಿಂತಕ ಡಾ.ಎಸ್ ಆರ್ ಪುರುಷೋತ್ತಮ ವಾಟಿಗಾರ್ ಮಾತನಾಡಿ ಸಾಮಾನ್ಯ ಜನರಿಂದ ಹಿಡಿದು ಅಸಮಾನ್ಯ ಜನರ ವರೆಗೆ ನಡೆ-ನುಡಿಯ ಅಸಮನಾತೆಯ ಸಾಮರಸ್ಯ ಎದ್ದು ಕಾಣುತ್ತಿದೆ.ಆದರೆ 12 ನೆಯ ಶತಮಾನದ ವಚನಕಾರರ ನುಡಿ-ನಡೆಯಲ್ಲಿ ಯಾವುದೇ ವ್ಯತ್ಯಾಸ ಕಾಣಸಿಗುವುದಿಲ್ಲ,ಆಡುವ ಮಾತುಗಳಲ್ಲಿ ಅನುಷ್ಠಾನ ಇಲ್ಲದೇ ಹೋದರೆ ಆ ಮಾತಿನ ಮೌಲ್ಯ ಕಳೆದು ಹೋಗುತ್ತದೆ, ಹೃದಯ ವೈಶ್ಯಾಲ್ಯತೆ ಇಲ್ಲದೇ ಹೋದರೆ ಮನುಷ್ಯತ್ವ ತೆರೆಯ ಮರೆಗೆ ಸರಿಯುತ್ತದೆ.ಸುಧಾರಣೆ ತನ್ನಿಂದಲೇ ಆಗಬೇಕೆಂದು ಬಸವಣ್ಣ ತನ್ನ ಹುಟ್ಟಿನ ಶ್ರೇಷ್ಠತೆಯನ್ನು ಅಲ್ಲಗಳೆದು ; ನಾನು ಹಾರವನೆಂದರೆ ನಮ್ಮ ಶರಣರು ನಗುವರಯ್ಯ ಎಂದು ತನ್ನನ್ನು ತಾನೇ ತುಚ್ಚೀಕರಿಸಿಕೊಳ್ಳುವರು ಬಸವಣ್ಣನವರ ಸಂದೇಶಗಳು ವಿಶ್ವ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿವೆ.ದ್ವೇಷದಿಂದ ದ್ವೇಷವನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಣ್ಣನವರು ಹೇಳಿದ್ದು ‘ ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯ ಎಂದು,ಬಡತನ ಮತ್ತು ಸಿರಿತನ ಮನುಷ್ಯನ ಎರಡು ಆಯಾಮಗಳನ್ನು ಸೂಚಿಸುತ್ತದೆ.ಹಾಗಾಗಿ ಬಡತನ ಬಂದರೆ ಕುಗ್ಗಿದೆ ಸಿರಿತನ ಬಂದರೆ ಹಿಗ್ಗದೇ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಮಗೆ ದಾರಿದೀಪವಾಗುವುದು ಬಸವಣ್ಣನವರ ವಚನಗಳು ಎಂದು ಅಭಿಪ್ರಾಯ ಪಟ್ಟರು.

ಶಿವಮೊಗ್ಗೆಯ ವಿಧಾನಪರಿಷತ್ ಸದಸ್ಯರು, ಉದ್ಯಮಿಗಳಾದ ಶ್ರೀ ಎಸ್.ರುದ್ರೇಗೌಡ್ರು ಮಾತನಾಡಿ, ತರಳಬಾಳು ಜಗದ್ಗುರು ಬೃಹನ್ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಗ್ರಾಮೀಣರ ಶಿಕ್ಷಣಕ್ಕೆ ಆಸರೆಯಾಗಿ ನಿಂತ ಮಹಾನ್ ಚೇತನರಾಗಿ ಹಳ್ಳಿ ಹಳ್ಳಿ ಗಳಲ್ಲಿ ನೂರಾರು ಶಾಲಾ ಕಾಲೇಜುಗಳನ್ನು ತೆರೆದು ಶಿಕ್ಷಣ ದಾಸೋಹಿಯಾಗಿ ಲಕ್ಷಾಂತರ ಜನರ ವಿಧ್ಯಾಭ್ಯಾಸಕ್ಕೆ ಕಾರಣರಾದರು. ಈಗಿನ ಜಗದ್ಗುರುವರ್ಯರಾದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಈ ದೇಶದ ಅಪ್ರತಿಮ ವಿದ್ವತ್ ಪಂಡಿತೋತ್ತಮರಾಗಿದ್ದರೂ ಸಹ ರೈತರ ಬಾಳಿಗೆ ಬೆಳಕಾಗುವ ಯಶಸ್ವಿ ಯೋಜನೆಗಳ ಸಾಕಾರ ಮೂರ್ತಿಯಾಗಿದ್ದು ರೈತ ಮೆಚ್ಚಿದ ,ದೇಶ ಒಪ್ಪಿದ ಗುರುವರ್ಯರಾಗಿದ್ದಾರೆ. ಅಂತೆಯೇ ಪ್ರಗತಿ ಪರ ಚಿಂತನೆಯ ಶರಣತತ್ವ ದಾಸೋಹಿಗಳಾದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಈ ನಾಡಿನ ಸಾಂಸ್ಕೃತಿಕ ಜಂಗಮರಾಗಿ ಶರಣರ ಆಶಯಗಳನ್ನು ಜನರ ಮನದಲ್ಲಿ ಬಿತ್ತುವ ಮೂಲಕ ಬದುಕಿನ ಅರ್ಥಪೂರ್ಣ ಹಸನತೆಗೆ ಕಾರಣೀಕೃತರಾಗಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ನೆರೆ ಸಂತ್ರಸ್ತರ ಪರಿಹಾರನಿಧಿಗೆ 10 ಸಾವಿರ ರೂಗಳ ದೇಣಿಗೆಯನ್ನು ಶ್ರೀಗಳಿಗೆ ಸಲ್ಲಿಸಿದರು.

ಸಂಜೆ ನಾಲ್ಕು ಗಂಟೆಯಿಂದಲೂ ಶ್ರೀ ಗಳ ಪಾದಯಾತ್ರೆ ಗ್ರಾಮದಲ್ಲಿ ಜರುಗಿತು.ಗ್ರಾಮವೂ ತಳಿರ ತೋರಣ ರಂಗೋಲಿಯಿಂದ ಅಲಂಕೃತಗೊಂಡು ಹಬ್ಬದ ವಾತಾವರಣವೇ ಮೈದಾಳಿತ್ತು. ವಚನ ಕಂಠಪಾಠ ಸ್ಪರ್ಧೆಯ ವಿಜೇತ ಮಕ್ಕಳಿಗೆ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ
ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕರಿಸಲಾಯಿತು.

ವೇದಿಕೆಯ ಮೇಲೆ ಕರ್ನಾಟಕ ಬೀಜ ನಿಗಮದ ನಿರ್ದೇಶಕರಾದ ಎಸ್.ರಾಜೇಂದ್ರ ಪ್ರಸಾದ್, ಡಾ.ಮೂಗಪ್ಪ,ವಸಂತ ಕೊಟ್ರೇಶ್,ಸಿದ್ದಲಿಂಗಪ್ಪ,ಸುಶೀಲಮ್ಮ ,ಬಿ.ಕೊಟ್ರೇಶ್ ಹಾಜರಿದ್ದರು.

ಶಿಕ್ಷಕ ಹೆಚ್ ನಾಗರಾಜ್ ಸ್ವಾಗತಿಸಿದರು,ಸಾಣೇಹಳ್ಳಿಯ ಶಿವ ಸಂಚಾರದ ತಂಡದ ಜ್ಯೋತಿ. ಕೆ,ದ್ರಾಕ್ಷಾಯಿಣಿ ಕೆ ಹಾಗೂ ನಾಗರಾಜ್ ಹೆಚ್.ಎಸ್ ಶರಣ್ ತಂಡದವರಿಂದ ವಚನ ಗಾಯನ ನಡೆಯಿತು. ಮಕ್ಕಳು ವಚನ ನೃತ್ಯ ರೂಪಕಗಳನ್ನು ಪ್ರಸ್ತುತಿ ಪಡಿಸಿದರು. ಅಧ್ಯಾಪಕ ಹೆಚ್.ಎಸ್ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Trending

Exit mobile version