ದಿನದ ಸುದ್ದಿ

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಪುನರ್ರಚಿಸಿ ಅಧ್ಯಕ್ಷರನ್ನು ನೇಮಕ ಮಾಡಲು ಸಿದ್ದರಾಮಯ್ಯ ಆಗ್ರಹ

Published

on

ಸುದ್ದಿದಿನ, ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಜಾರಿಗೆ ತರುವ ಜವಾಬ್ದಾರಿಯನ್ನು ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ವಹಿಸಿಕೊಂಡಿದ್ದಾರೆ. ಅವರ ಮಾತಿನ ಮೇಲೆ ವಿಶ್ವಾಸ ಇಟ್ಟಿದ್ದೇವೆ, ಇದಕ್ಕಾಗಿ ಹೋರಾಟ ಮಾಡುವ ಅಗತ್ಯ ಬರಲಾರದೆಂದು ನಂಬಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳನ್ನು ನಾವು ಭೇಟಿ ಮಾಡಿ ಒತ್ತಾಯಿಸಲಿದ್ದೇವೆ. ಇದರ ಜೊತೆಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ಪುನರ್ರಚಿಸಿ ಅಧ್ಯಕ್ಷರನ್ನು ನೇಮಕ ಮಾಡಲು ಆಗ್ರಹಿಸುತ್ತೇವೆ. ಈ ಸಮೀಕ್ಷೆ ಹಿಂದುಳಿದ ಜಾತಿಗಳಿಗೆ ಸೀಮಿತವಾದುದಲ್ಲ. ಅದು ಸಮಾಜದಲ್ಲಿರುವ ಎಲ್ಲ ಜಾತಿಗಳ ಸಮೀಕ್ಷೆ. ಅದನ್ನು ಒಪ್ಪಿಕೊಂಡು ವೈಜ್ಞಾನಿಕ ರೀತಿಯಲ್ಲಿ ಜಾರಿಗೆ ತಂದರೆ ಎಲ್ಲ ಜಾತಿ-ಧರ್ಮಗಳಿಗೂ ಒಳಿತಾಗುತ್ತದೆ ಎಂದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಸಮೀಕ್ಷೆಗೆ ಚಾಲನೆ ನೀಡಿದ್ದೇ ನಮ್ಮ ಸರ್ಕಾರ. ಆದರೆ ನಮ್ಮ ಆಡಳಿತಾವಧಿಯಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದರೆ ನಾವೇ ಅನುಷ್ಠಾನಕ್ಕೆ ತರುತ್ತಿದ್ದೆವು. ಪೂರ್ಣಗೊಂಡಿಲ್ಲದ ಕಾರಣ ನಮಗೆ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ.

ಕುರುಬರು ಮಾತ್ರವಲ್ಲ ಪರಿಶಿಷ್ಟ ಪಂಗಡದ ಗುಣಲಕ್ಷಣಗಳನ್ನು ಹೊಂದಿರುವ ಎಲ್ಲ ಹಿಂದುಳಿದ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬುದು ನನ್ನ ಅಭಿಪ್ರಾಯ. ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರ ಗಂಗಾಮತಸ್ಥರು, ಗೊಲ್ಲರು ಮತ್ತು ಗೊಂಡ-ರಾಜಾಗೊಂಡ ಸಮುದಾಯಗಳನ್ನು ಎಸ್‌.ಟಿ ಗೆ ಸೇರಿಸಬೇಕೆಂದು ಶಿಫಾರಸು ಮಾಡಿದ್ದೆ. ಗೊಲ್ಲರು, ಗಂಗಾಮತಸ್ಥರು, ಗೊಂಡರಂತೆ ಕುರುಬರು ಕೂಡಾ ತಮ್ಮನ್ನು ಎಸ್.ಟಿ ಗೆ ಸೇರಿಸಬೇಕೆಂದು ಕೇಳುತ್ತಾ ಬಂದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಕುರುಬರು ಎಸ್.ಟಿ ಗೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್.ಟಿ ಗೆ ಸೇರಿಸಬೇಕೆಂದು ಕುರುಬರು ಬೇಡಿಕೆ ಇಟ್ಟಿದ್ದಾರೆ ಎಂದು ನುಡಿದರು.

ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆಗೆ ವಿರೋಧ ಇಲ್ಲ. ನಮ್ಮ ಸರ್ಕಾರ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಿದಾಗ ಪರಿಶಿಷ್ಟ ಜಾತಿಯವರಿಗೆ 17.1% ಮತ್ತು ಪರಿಶಿಷ್ಟ ಪಂಗಡಕ್ಕೆ 6.95% ನಷ್ಟು ಮೀಸಲಾತಿ ಕಲ್ಪಿಸಿದ್ದೆವು. ಆದ್ದರಿಂದ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 7.5%ಕ್ಕೆ ಹೆಚ್ಚಿಸುವುದು ನ್ಯಾಯಸಮ್ಮತವಾಗಿದೆ.

ಸಮಾಜದ ಎಲ್ಲ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಿದಾಗಲೇ ಸಾಮಾಜಿಕ ನ್ಯಾಯ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲು ಸಾಧ್ಯ. ಇದೇ ನಮ್ಮೆಲ್ಲರ ಒಮ್ಮತದ ಬೇಡಿಕೆಯಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version