ರಾಜಕೀಯ

ಮೋದಿ ಅವರೇ ನೀವ್ಯಾಕೆ ಪ್ರತಿ ಕೆಲಸವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ತಿದ್ದೀರಿ? : ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ, ಬೆಂಗಳೂರು : ಪ್ರಣಾಳಿಕೆಯಲ್ಲಿನ ಆಶ್ವಾಸನೆಯಂತೆ ಕಾಶ್ಮೀರಕ್ಕೆ‌ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ್ದೀವಿ ಎನ್ನುತ್ತೀರಲ್ಲಾ‌ ಮಾನ್ಯ ನರೇಂದ್ರ ಮೋದಿ ಅವರೇ, ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು, ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿಟ್ಟು, ಸೈನಿಕರ ಕಾವಲು ಹಾಕುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೀರಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಕಿಡಿಕಾರಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಭದ್ರತಾ ಸಿಬ್ಬಂದಿ ಮತ್ತು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಇದಕ್ಕೆ ಕಾರಣ ಸಂವಿಧಾನದ 370ನೇ ವಿಧಿಯೇ? ಇಲ್ಲವೇ ಪರಿಸ‍್ಥಿತಿಯನ್ನು ನಿಯಂತ್ರಣ ಮಾಡಲಿಕ್ಕಾಗದ ನಿಮ್ಮ ಅಸಾಮರ್ಥ್ಯವೇ? ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದಾಗ, ಸ್ವರ್ಣಮಂದಿರದಲ್ಲಿದ್ದ ಉಗ್ರಗಾಮಿಗಳನ್ನು ಖಾಲಿ ಮಾಡಿಸಿದಾಗ ಶ್ರೀಮತಿ ಇಂದಿರಾ ಗಾಂಧಿಯವರು ರಾಜಕೀಯವಾಗಿ ಬಳಸಿಕೊಳ್ಳಲಿಲ್ಲ,ಅದು ತಮ್ಮ ಕರ್ತವ್ಯ ಎಂದು ತಿಳಿದಿದ್ದರು. ಸನ್ಮಾನ್ಯ ಮೋದಿ ಅವರೇ ನೀವ್ಯಾಕೆ ಪ್ರತಿ ಕೆಲಸವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ‍್ಥಾನಮಾನ ರದ್ದಾಯಿತಲ್ಲಾ, ಈಗಲಾದರೂ ದೇಶದ ಕುಸಿಯುತ್ತಿರುವ ಆರ್ಥಿಕ ಸ್ಥಿತಿಯ ಬಗ್ಗೆ, ಕರ್ನಾಟಕದಲ್ಲಿ ಅತೀವೃಷ್ಟಿ ಮತ್ತು ಅನಾವೃಷ್ಟಿಯಿಂದ ನರಳುತ್ತಿರುವ ಜನರ ಬಗ್ಗೆ ಸ್ವಲ್ಪ ಗಮನಹರಿಸುತ್ತೀರಾ? ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version