ದಿನದ ಸುದ್ದಿ
ಮೀಸಲಾತಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳಿಗೆ ಸ್ಪಷ್ಟತೆಯೂ ಇಲ್ಲ, ಇಚ್ಛಾಶಕ್ತಿಯೂ ಇಲ್ಲ : ಸಿದ್ದರಾಮಯ್ಯ
ಸುದ್ದಿದಿನ, ಮೈಸೂರು: ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿವೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಅಧ್ಯಯನ ನಡೆಸಿ, ವರದಿ ಪಡೆಯುವುದು ಸಮಸ್ಯೆ ಬಗೆಹರಿಸಲು ಇರುವ ಏಕೈಕ ಮಾರ್ಗ. ಅದನ್ನು ಬಿಟ್ಟು ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸುವುದರಿಂದ ಯಾವುದೇ ಪ್ರಯೋಜನವಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಭಾನುವಾರ ಮಾತನಾಡಿದ ಅವರು, ಪ್ರತೀ ಬಾರಿ ಮೀಸಲಾತಿಗೆ ಸಂಬಂಧಿಸಿದ ವಿಚಾರಗಳು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬಂದಾಗ, ನ್ಯಾಯಾಲಯವು ಜಾತಿವಾರು ಜನಸಂಖ್ಯೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ಕೇಳುತ್ತದೆ. ಈ ವರೆಗೆ ನಮ್ಮಲ್ಲಿ ಇಂಥದ್ದೊಂದು ಅಧಿಕೃತ ಮಾಹಿತಿ ಇರಲಿಲ್ಲ ಎಂದರು.
ನ್ಯಾಯಾಲಯಕ್ಕೆ ಮಾಹಿತಿ ಒದಗಿಸಲು, ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಹೀಗೆ ಹಲವು ವಿಧಗಳಲ್ಲಿ ನೆರವಾಗುವ ಉದ್ದೇಶದಿಂದ ನಮ್ಮ ಸರ್ಕಾರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುವಂತೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಆದೇಶಿಸಿತ್ತು.
ಈಗ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿ ಸಿದ್ಧವಾಗಿರುವುದರಿಂದ ಸರ್ಕಾರ ಅದನ್ನು ಕೂಡಲೇ ಸ್ವೀಕರಿಸಬೇಕು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಉದ್ದೇಶಪೂರ್ವಕವಾಗಿ ವರದಿ ಸ್ವೀಕರಿಸಲಿಲ್ಲ, ಈಗಿನ ಬಿಜೆಪಿ ಸರ್ಕಾರ ಅವರ ದಾರಿಯಲ್ಲೇ ಸಾಗುತ್ತಿದೆ.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇವರಾಜ್ ಅರಸ್ ಅಭಿವೃದ್ಧಿ ನಿಗಮವೊಂದಕ್ಕೆ ರೂ.414 ಕೋಟಿ ಅನುದಾನ ನೀಡಿದ್ದೆ. ಈಗಿನ ಸರ್ಕಾರ ಸುಮಾರು 16 ನಿಗಮಗಳಿಗೆ ಒಟ್ಟುಸೇರಿ ರೂ.500 ಕೋಟಿ ಕೊಟ್ಟಿದೆ. ಇದು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕಾದ ಸರ್ಕಾರವೊಂದು ವರ್ತಿಸುವ ರೀತಿಯೇ?
ಮೀಸಲಾತಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳಿಗೆ ಸ್ಪಷ್ಟತೆಯಾಗಲೀ, ಇಚ್ಛಾಶಕ್ತಿಯಾಗಲೀ ಇಲ್ಲ. ಅವರ ಹೋರಾಟಗಳೇನಿದ್ದರೂ ಮತಗಳಿಕೆ ಉದ್ದೇಶಕ್ಕಷ್ಟೇ ಸೀಮಿತವಾದುದ್ದು ಎಂದು ಕಿಡಿಕಾರಿದರು.
ಮೀಸಲಾತಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳಿಗೆ ಸ್ಪಷ್ಟತೆಯಾಗಲೀ, ಇಚ್ಛಾಶಕ್ತಿಯಾಗಲೀ ಇಲ್ಲ. ಅವರ ಹೋರಾಟಗಳೇನಿದ್ದರೂ ಮತಗಳಿಕೆ ಉದ್ದೇಶಕ್ಕಷ್ಟೇ ಸೀಮಿತವಾದುದ್ದು. 6/6#Mysuru
— Siddaramaiah (@siddaramaiah) March 14, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243