ದಿನದ ಸುದ್ದಿ

ಮೋದಿ ಅವರೇ ‘ಯೋಧ ತೇಜ್ ಬಹುದ್ದೂರ್’ ಬೆಂಬಲಿಸಿ ಚುನಾವಣೆಯಿಂದ ಹಿಂದೆ ಸರಿಯಿರಿ : ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ,ಮಂಡ್ಯ:ಮಾನ್ಯ ನರೇಂದ್ರ ಮೋದಿಯವರೇ, ನಿಮಗೆ ನಿಜವಾಗಿಯೂ ಸೈನ್ಯ ಮತ್ತು ಸೈನಿಕರ ಬಗ್ಗೆ ಗೌರವವಿದ್ದರೆ ನಿಮ್ಮ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿರುವ ದೇಶಕ್ಕಾಗಿ ದುಡಿದ ಹೆಮ್ಮೆಯ ಸೈನಿಕ ತೇಜ್ ಬಹದ್ದೂರ್‌ನನ್ನು ಬಹಿರಂಗವಾಗಿ ಬೆಂಬಲಿಸಿ, ಚುನಾವಣೆಯಿಂದ ಹಿಂದೆ ಸರಿಯಿರಿ. ಒಬ್ಬ ಸೈನಿಕ ಆಯ್ಕೆಯಾಗುವುದನ್ನು ನೀವು ಬೆಂಬಲಿಸುವುದಿಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಮಂಡ್ಯ ಲೋಕಸಭೆ ಕ್ಷೇತ್ರದ ನಾಗಮಂಗಲದಲ್ಲಿ ಶುಕ್ರವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ನೀಡುವಂತೆ ಕೋರಿದ ಅವರು, ಕೇಂದ್ರ ಮಂತ್ರಿ ಅನಂತ ಕುಮಾರ್ ಹೆಗ್ಡೆಯವರು ದಲಿತರನ್ನು ನಾಯಿಗಳಿಗೆ ಹೋಲಿಕೆ ಮಾಡಿದರು, ಅಂಬೇಡ್ಕರರನ್ನು ಅವಮಾನಿಸಿದರು, ಅದೂ ಸಾಲದೆಂಬಂತೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಿಸಲು ಎಂದರು. ಇಂತಹಾ ನಿಜವಾದ ದೇಶದ್ರೋಹಿಗಳನ್ನು ತಮ್ಮ ಪಕ್ಷದಲ್ಲೇ ಇಟ್ಟುಕೊಂಡು ಮೋದಿಯವರು ಕಾಂಗ್ರೆಸ್‌ನತ್ತ ಬೊಟ್ಟುಮಾಡುತ್ತಿರುವುದು ವಿಪರ್ಯಾಸ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ಬಾರಿ ದೇಶದಲ್ಲಿ ಮೋದಿಯವರ ಪರವಾದ ಅಲೆಯಿತ್ತು. ಬಿಹಾರ ಹಾಗೂ ಉತ್ತರ ಪ್ರದೇಶದ 120 ಸ್ಥಾನಗಳಲ್ಲಿ 103 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು, ಆದರೆ ಈ ಬಾರಿ ಈ ಎರಡೂ ರಾಜ್ಯಗಳು ಸೇರಿ 30 ಸ್ಥಾನಗಳನ್ನು ಗೆಲ್ಲುವುದು ಕೂಡ ಕಷ್ಟ. ಇದು ಮೋದಿಯವರ ಸುಳ್ಳಿನ ಸಾಮ್ರಾಜ್ಯದ ಪತನವನ್ನು ಸೂಚಿಸುತ್ತಿದೆ‌ ಎಂದರು.

ತಮ್ಮ ಅಧಿಕಾರವನ್ನು ಚಲಾಯಿಸಿ ಐಟಿ, ಇಡಿ, ಸಿಬಿಐಗಳನ್ನು ದುರ್ಬಳಕೆ ಮಾಡಿಕೊಂಡು, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ನರೇಂದ್ರ ಮೋದಿಯವರು ಒಮ್ಮೆ ಹಿಟ್ಲರ್‌ನ ಇತಿಹಾಸವನ್ನು ನೆನಪಿಸಿಕೊಳ್ಳುವುದು ಒಳಿತು ಎಂದು ಎಚ್ಚರಿಕೆ ನೀಡಿದರು.

Trending

Exit mobile version