ರಾಜಕೀಯ
ಸದನದಲ್ಲೇ ಬಿಜೆಪಿಯ ಇನ್ನೊಂದು ಕರಾಳ ಮುಖದ ಅನಾವರಣವಾಗಿದೆ : ಸಿದ್ದರಾಮಯ್ಯ ಕಿಡಿ
ಸುದ್ದಿದಿನ, ಬೆಂಗಳೂರು: ಈಗಾಗಲೇ ವಿಶ್ವಾಸ ಮತ ಮಂಡನೆಯ ನಿರ್ಣಯವನ್ನು ಸದನದಲ್ಲಿ ಮಂಡಿಸಲಾಗಿದೆ. ಹಾಗಾಗಿ ಈ ವಿಚಾರ ಸದನದ ಸ್ವತ್ತು. ಸದನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾನ್ಯ ಸಭಾಧ್ಯಕ್ಷರೇ ಸರ್ವೋಚ್ಚರು. ಚರ್ಚೆ ಮತ್ತು ಅಭಿಪ್ರಾಯ ಮಂಡನೆ ಸೇರಿದಂತೆ ಇತರೆ ವಿಚಾರಗಳಲ್ಲಿ ಸಭಾಧ್ಯಕ್ಷರಿಗೆ ಸೂಚನೆ ನೀಡುವ ಅಧಿಕಾರ ರಾಜ್ಯಪಾಲರಿಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನಂತರ ಟ್ವೀಟ್ ನಲ್ಲಿ, ಶಾಸಕಾಂಗ ಪಕ್ಷದ ನಾಯಕನಾದ ನನಗೆ ವಿಪ್ ಜಾರಿಗೊಳಿಸುವ ಅವಕಾಶ ಇದೆಯೇ? ಇಲ್ಲವೇ? ಎಂಬ ಬಗ್ಗೆ ಸಭಾಧ್ಯಕ್ಷರ ತೀರ್ಮಾನ ಕೇಳಿದ್ದೇನೆ. ಅವರು ಅಡ್ವೊಕೇಟ್ ಜನರಲ್ ಅವರ ಜೊತೆ ಚರ್ಚಿಸಿ ನಿರ್ಣಯ ತಿಳಿಸುವುದಾಗಿ ಹೇಳಿದ್ದಾರೆ. ಇದು ಇತ್ಯರ್ಥವಾಗುವರೆಗೆ ಸರ್ವೋಚ್ಚ ನ್ಯಾಯಾಲಯದ ಮೊರೆಹೋಗುವ ಬಗ್ಗೆ ನಿರ್ಧರಿಸುವುದಿಲ್ಲ ಎಂದಿದ್ದಾರೆ.
ಬಿಜೆಪಿಯ ಅಶ್ವಥ್ ನಾರಾಯಣ್, ಮಾಜಿ ಶಾಸಕ ಯೋಗೀಶ್ವರ್ ಹಾಗೂ ವಿಶ್ವನಾಥ್ ಅವರು ರೂ.5 ಕೋಟಿಯನ್ನು ನನ್ನ ಮನೆಗೆ ತಂದಿದ್ದರು, ಕೊನೆಗೆ ನಾನೇ ಅವರೆಲ್ಲರಿಗೂ ಬೈದು ಕಳುಹಿಸಿದೆ ಎಂದು ಸ್ವತಃ ಶ್ರೀನಿವಾಸ್ ಗೌಡ ಅವರೇ ಹೇಳಿದ್ದಾರೆ. ಇದರಿಂದ ಸದನದಲ್ಲೇ ಬಿಜೆಪಿಯ ಇನ್ನೊಂದು ಕರಾಳ ಮುಖದ ಅನಾವರಣವಾಗಿದೆ ಎಂದು ಕಿಡಿಕಾರಿದ್ದಾರೆ.