ರಾಜಕೀಯ
ಚುನಾವಣೆಗೆ ಸಿದ್ಧರಾಗುವಂತೆ ಸಿದ್ದರಾಮಯ್ಯ ಸೂಚನೆ !
ಸುದ್ದಿದಿನ, ಬೆಂಗಳೂರು :ಸಿದ್ದರಾಮಯ್ಯ ನಿವಾಸದಲ್ಲಿ ಗುರುವಾರ ಈ ಕುರಿತು ಚರ್ಚೆ ನಡೆದಿದೆ. ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್, ಬಿ.ಕೆ.ಹರಿಪ್ರಸಾದ್, ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪಕ್ಷದ ಮುಂದಿನ ನಡೆ, ಅತೃಪ್ತರ ಶಾಸಕರ ರಾಜೀನಾಮೆ ವಿಚಾರ, ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶವಿದೆಯೇ, ಇಲ್ಲವೇ ಎಂಬ ಕುರಿತು ಸಮಾಲೋಚನೆ ನಡೆಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸರ್ಕಾರ ರಚನೆ ಸುಲಭವಲ್ಲ. ಅತೃಪ್ತ ಶಾಸಕರನ್ನು ಒಟ್ಟಿಗೆ ರಾಜ್ಯಕ್ಕೆ ಕಳುಹಿಸದೇ ಒಬ್ಬೊಬ್ಬರನ್ನೇ ಕಳುಹಿಸುತ್ತಿದ್ದು, ತಮ್ಮ ವಿರುದ್ಧ ಆರೋಪ, ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷದೊಳಗೆ ಭಿನ್ನಾಭಿಪ್ರಾಯ ತಂದಿಡುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು, ಬಿಜೆಪಿಯ ನಡೆ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಭೆಯಲ್ಲಿ ಸೂಚನೆ ನೀಡಿದರು ಎನ್ನಲಾಗಿದೆ.
ಅತೃಪ್ತರ ಹಿಂದೆ ತಮ್ಮ ಕೈವಾಡವಿದೆ ಎಂಬ ಆರೋಪಗಳಿಗೆ ಸರಣಿ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿರುವ ಅವರು, ಅತೃಪ್ತ ಶಾಸಕರು ತಮ್ಮನ್ನು ಗುರಿ ಮಾಡಿಕೊಂಡು ಹೇಳಿಕೆ ನೀಡಿದ್ದರೆ ಅವರಿಗೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ದುರುದ್ದೇಶ ಇರಬಹುದು. ಸತ್ಯ ಬಯಲಾಗುವ ಕಾಲ ಬಂದೇ ಬರುತ್ತದೆ ಎಂದು ಮಾರ್ಮಿಕವಾಗಿ ಟ್ವೀಟ್ ಮೂಲಕ ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ನಮ್ಮ ಪಕ್ಷದ ಮೂವರು ಶಾಸಕರನ್ನು ಅನರ್ಹಗೊಳಿಸಿದ ಮಾನ್ಯ ಸಭಾಧ್ಯಕ್ಷರ ನಿರ್ಣಯವನ್ನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಇಂಥ ಕಠಿಣ ನಿರ್ಣಯಗಳು ಅತ್ಯಗತ್ಯ. ಸ್ವಾರ್ಥ ಸಾಧನೆಗಾಗಿ ಜನಾದೇಶವನ್ನು ಉಲ್ಲಂಘಿಸುವವರಿಗೆ ಈ ಐತಿಹಾಸಿಕ ನಿರ್ಣಯ ಎಚ್ಚರಿಕೆಯ ಗಂಟೆಯಾಗಲಿದೆ.
— Siddaramaiah (@siddaramaiah) July 25, 2019
ಕೃಪೆ : ಕರಾವಳಿ ನೆಟ್ವರ್ಕ್
ಸುದ್ದಿದಿನ.ಕಾಂ|ವಾಟ್ಸಾಪ್|9980346243